ಸಾರಾಂಶ
ಪಂಜಾಬ್ ಮತ್ತು ಹರಿಯಾಣ ಗಡಿಭಾಗವಾದ ಶಂಭು ಮತ್ತು ಖನೌರಿ ಭಾಗಗಳಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಶೆಲ್‍ಗಳನ್ನು ಸಿಡಿಸಿ ರೈತನ ಸಾವಿಗೆ ಕಾರಣವಾಗಿರುವ ಘಟನೆಗೆ ಖಂಡನೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಪಂಜಾಬ್ ಮತ್ತು ಹರಿಯಾಣ ಗಡಿಭಾಗವಾದ ಶಂಭು ಮತ್ತು ಖನೌರಿ ಭಾಗಗಳಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಅಶ್ರುವಾಯು ಶೆಲ್‍ಗಳನ್ನು ಸಿಡಿಸಿ ರೈತನ ಸಾವಿಗೆ ಕಾರಣವಾಗಿರುವ ಘಟನೆಯನ್ನು ಖಂಡಿಸಿ, ಮೃತಪಟ್ಟ ರೈತನ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹಿಸಿ ಸಂಯುಕ್ತ ಹೋರಾಟ ಕರ್ನಾಟಕ ಕಲಬುರಗಿ ನೇತೃತ್ವದಲ್ಲಿ ಇಲ್ಲಿನ ಲೋಕಸಭಾ ಸದಸ್ಯರ ಕಾರ್ಯಾಲಯದ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.ಚುನಾವಣಾ ಬಾಂಡ್‍ಗಳ ಮೂಲಕ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿ ಸಾವಿರಾರು ಕೋಟಿ ರೂಪಾಯಿಗಳನ್ನು ಪಕ್ಷದ ನಿಧಿಯಾಗಿ ಸಂಗ್ರಹಿಸುತ್ತಿರುವ ಮೋದಿ ಸರ್ಕಾರವನ್ನು ಪ್ರತಿಭಟನಾಕಾರರು ಉಗ್ರವಾಗಿ ಖಂಡಿಸಿದರು. ರೈತರ ಬೇಡಿಕೆಗಳು ಇಡೆರಿಸಲು ಕೇಂದ್ರ ಸರ್ಕಾರ ಮುಂದಾಗಬೆಕೆಂದು ಆಗ್ರಹಿಸಿದರು. ಪ್ರತಿಭಟನೆ ನಂತರ ಸಂಸದ ಡಾ.ಉಮೇಶ್ ಜಾಧವ್ ಅವರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು.
ಎಸ್‍ಕೆಎಂ ಜಿಲ್ಲಾ ಸಂಚಾಲಕ ಶರಣಬಸಪ್ಪ ಮಮಶೆಟ್ಟಿ, ಎಐಕೆಎಸ್ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಡಿಎಸ್‍ಎಸ್ ರಾಜ್ಯ ಸಂಚಾಲಕ ಎಸ್.ಆರ್.ಕೊಲ್ಲೂರ್, ಕೆ.ಆರ್.ಆರ್.ಎಸ್.ಅಧ್ಯಕ್ಷ ನಾಗೇಂದ್ರಪ್ಪ ಥಂಬೆ, ಪದ್ಮಿನಿ ಕಿರಣಗಿ, ಎಂ.ಬಿ.ಸಜ್ಜನ್, ಮೇಘರಾಜ ಕಠಾರೆ, ಜಾವೇದ್ ಹುಸೇನ್, ನಾಗಯ್ಯ ಸ್ವಾಮಿ, ಸುಧಾಮ ಧನ್ನಿ, ಸಾಜೀದ್ ದಿಗ್ಗಾಂವಕರ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.