ರೈತನಿಗೆ ಒಳಗೆ ಬಿಡದ ಬೆಂಗಳೂರು ಮೆಟ್ರೋ

| Published : Feb 27 2024, 01:33 AM IST / Updated: Feb 27 2024, 07:55 AM IST

farmer

ಸಾರಾಂಶ

ಕೊಳಕು ಬಟ್ಟೆ ಧರಿಸಿದ್ದಾನೆಂದು ರೈತನೊಬ್ಬನಿಗೆ ನಮ್ಮ ಮೆಟ್ರೋ ಪ್ರವೇಶಿಸಲು ತಡೆ ನೀಡಿದ ವೀಡಿಯೋ ವೈರಲ್ ಆಗಿದೆ. ಈ ಕುರಿತು ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರೈತ ಎನ್ನಲಾದ ವ್ಯಕ್ತಿ ಕೊಳೆಯಾದ ಬಟ್ಟೆ ಧರಿಸಿ ಬಂದಿದ್ದಾನೆ ಎಂಬ ಕಾರಣಕ್ಕೆ ಭದ್ರತಾ ಸಿಬ್ಬಂದಿ ಆತನಿಗೆ ಮೆಟ್ರೋ ರೈಲು ಪ್ರಯಾಣ ನಿರಾಕರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತೀವ್ರ ಜನಾಕ್ರೋಶ ವ್ಯಕ್ತವಾಗಿದೆ. ಬಳಿಕ ಎಚ್ಚೆತ್ತ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಭದ್ರತಾ ಮೇಲ್ಚಿಚಾರಕರನ್ನು ವಜಾ ಮಾಡಿದ್ದಾರೆ.

ರಾಜಾಜಿನಗರ ಮೆಟ್ರೋ ನಿಲ್ದಾಣದಲ್ಲಿ ನಡೆದ ಪ್ರಕರಣ ಇದಾಗಿದೆ. ವ್ಯಕ್ತಿಯನ್ನು ಮೆಟ್ರೋ ಒಳಗೆ ಬಿಡದ ವಿಡಿಯೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಟೆಕ್ಕಿಯೊಬ್ಬರು ಅದನ್ನು ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದನ್ನು ನೋಡಿದ ಹಲವರು ಬಿಎಂಆರ್‌ಸಿಎಲ್‌ ಧೋರಣೆಗೆ ಕಿಡಿ ಕಾರಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸ್ಥೆ ‘ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ನಿಗಮ ವಿಷಾದಿಸುತ್ತದೆ. ಘಟನೆ ಬಳಕ ವ್ಯಕ್ತಿಯು ರಾಜಾಜಿನಗರದಿಂದ ಮೆಜೆಸ್ಟಿಕ್‌ಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾರೆ. 

ಅಲ್ಲದೆ, ಈ ಸಂಬಂಧ ವಿಚಾರಣೆಗಾಗಿ ಉಪ ಮುಖ್ಯ ಭದ್ರತಾ ಅಧಿಕಾರಿ ನೇತೃತ್ವದಲ್ಲಿ ಆಂತರಿಕ ಸಮಿತಿ ರಚಿಸಲಾಗಿದೆ. ತನಿಖೆ ಮಾಡಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದೆ.

ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚೌಹಾಣ್‌, ಮೆಟ್ರೋದಲ್ಲಿ ಸಂಚರಿಸಲು ಶ್ರೀಮಂತ, ಬಡವ ಎಂಬ ಯಾವುದೇ ತಾರತಮ್ಯ ಇಲ್ಲ. ಹೊರಗುತ್ತಿಗೆ ಸಿಬ್ಬಂದಿಯಿಂದ ಈ ತಪ್ಪಾಗಿದೆ.

ಹೀಗೆ ಪ್ರಯಾಣಿಕರನ್ನು ತಡೆಯುವ ಅಧಿಕಾರ ಯಾರಿಗೂ ಇಲ್ಲ. ಸಭ್ಯತೆಯ ವರ್ತನೆ ಬಗ್ಗೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ವಿಡಿಯೋದಲ್ಲಿ ಏನಿದೆ?
ಕಾರ್ತಿಕ್‌ ಎನ್ನುವವರು ಮಾಡಿರುವ ಈ ವಿಡಿಯೋವನ್ನು ದೀಪಕ್‌ ಎನ್‌. ಎಂಬುವರು ಹಂಚಿಕೊಂಡಿದ್ದರು. ತಲೆ ಮೇಲೆ ಬಟ್ಟೆಯ ಗಂಟು, ಬಿಳಿ ಪಂಚೆಯುಟ್ಟ ವ್ಯಕ್ತಿ ಮೆಟ್ರೋದಲ್ಲಿ ಸಂಚರಿಸಲು ನಿಲ್ದಾಣ ಪ್ರವೇಶಿಸಿದ್ದಾರೆ. ಆದರೆ ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. 

ಈ ವೇಳೆ ಸ್ಥಳದಲ್ಲಿದ್ದ ಇತರೆ ಪ್ರಯಾಣಿಕರು ಇದಕ್ಕೆ ಆಕ್ಷೇಪಿಸಿದ್ದಾರೆ. ಟಿಪ್‌ಟಾಪ್ ಆಗಿ ಡ್ರೆಸ್ ಹಾಕಿಕೊಂಡರೆ ಮಾತ್ರ ಮೆಟ್ರೋದೊಳಗೆ ಪ್ರವೇಶ ಅವಕಾಶವೆ? ಹಾಗೆಂದು ನಿಯಮ ಇದೆಯಾ? ಫಲಕ ಹಾಕಿದ್ದೀರಾ ಎಂದು ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಅವರು ರೈತರು, ಬಟ್ಟೆ ಕೊಳೆಯಾಗಿದೆ ಎಂದು ಬಿಡದಿರುವುದು ಎಷ್ಟು ಸರಿ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಚಿತ್ರಣ ವಿಡಿಯೋದಲ್ಲಿದೆ. ವಾಗ್ವಾದ ಬಳಿಕ ರೈತನಿಗೆ ಮೆಟ್ರೋ ರೈಲು ನಿಲ್ದಾಣ ಪ್ರವೇಶಿಸಲು ಅನುಮತಿ ನೀಡಲಾಗಿದೆ.