ಮಳೆಗೆ ಈರುಳ್ಳಿ ಬೆಳೆ ಹಾನಿ, ನಾಶಮಾಡಿದ ಹೆಬ್ಬಳ್ಳಿ ರೈತ

| Published : Oct 10 2025, 01:00 AM IST

ಸಾರಾಂಶ

ಧಾರವಾಡ ತಾಲೂಕಿನ ಹೆಬ್ಬಳ್ಳಿಯ ರೈತ ಮಲ್ಲಿಕಾರ್ಜುನ ಲಕ್ಕಮ್ಮನವರ ಅವರು ಐದು ಎಕರೆ ಹೊಲದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ರೋಟೋವೆಟರ್‌ ಮೂಲಕ ಕಿತ್ತುಹಾಕಿದ್ದಾರೆ. ಹೆಚ್ಚು ಮಳೆಯಿಂದ ಈರುಳ್ಳಿ ಕೊಳೆತುಹೋಗಿದೆ.

ಧಾರವಾಡ: ತಾನೇ ಉತ್ತಿ-ಬಿತ್ತಿ, ಕಳೆ ತೆಗೆದು, ನೀರು ಹಾಯಿಸಿ ತಿಂಗಳಾನುಗಟ್ಟಲೇ ಪೋಷಣೆ ಮಾಡಿದ ಬೆಳೆಯೊಂದನ್ನು ಒಂದೇ ದಿನದಲ್ಲಿ ತನ್ನ ಕೈಯ್ಯಾರೆ ಕಿತ್ತು ಹಾಕುವುದು ಎಂತಹ ರೈತರ ಮನಸ್ಸಿಗೂ ನೋವು ತರಿಸದೇ ಇರದು.

ಹೆಬ್ಬಳ್ಳಿಯ ರೈತ ಮಲ್ಲಿಕಾರ್ಜುನ ಲಕ್ಕಮ್ಮನವರ ಸಹ ತನ್ನ ಟ್ರ್ಯಾಕ್ಟರ್‌ನ ರೋಟೋವೇಟರ್‌ ಮೂಲಕ ತಾನು ಬೆಳೆದ ಐದು ಎಕರೆ ಈರುಳ್ಳಿಯನ್ನು ಕ್ಷಣಮಾತ್ರದಲ್ಲಿ ಕಿತ್ತೊಗೆಯುವಾಗ, ಆಗಿರುವ ಬೇಸರ ಅವರಿಗೆ ಮಾತ್ರ ಗೊತ್ತು. ಈರುಳ್ಳಿ ಬೆಳೆ ರೈತ ಮಲ್ಲಿಕಾರ್ಜುನ ಪಾಲಿಕೆ ಕಣ್ಣಿನ ನೀರು ತರಿಸಿರುವುದು ನಿಜ.

ನಿರೀಕ್ಷೆ ಹುಸಿ: ಸಾಂಪ್ರದಾಯಿಕ ಬೆಳೆಗಳಿಗಿಂತ ಈರುಳ್ಳಿ ಬೆಳೆದರೆ ತುಸು ಹೆಚ್ಚಿನ ಆದಾಯ ಬರಬಹುದೆಂಬ ನಿರೀಕ್ಷೆಯಿಂದ ತನ್ನೆಲ್ಲ ಐದು ಎಕರೆ ಭೂಮಿಯಲ್ಲಿ ಮಲ್ಲಿಕಾರ್ಜುನ ಈರುಳ್ಳಿ ಬೆಳೆದು ಇದೀಗ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಸಾಮಾನ್ಯವಾಗಿ ಧಾರವಾಡ ಕಪ್ಪು ಮಣ್ಣಿಗೆ ಈರುಳ್ಳಿ ಬೆಳೆ ಚೆನ್ನಾಗಿಯೇ ಬರುತ್ತದೆ. ಹೀಗಾಗಿ ಧಾರವಾಡದ ಅಲ್ಲಲ್ಲಿ ಈರುಳ್ಳೆ ಬೆಳೆ ಇತ್ತು. ಆದರೆ, ಅತಿವೃಷ್ಟಿಯಿಂದಾಗಿ ಬಹುತೇಕ ಕಡೆಗಳಲ್ಲಿ ಈರುಳ್ಳಿ ಬೆಳೆ ಕೊಳೆತು ಹೋಗಿದ್ದು, ರೈತ ಈರುಳ್ಳಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೊಳತೆ ಹೋದ ಈರುಳ್ಳಿ: ರೈತ ಮಲ್ಲಿಕಾರ್ಜುನ ಬೆಳೆಯಲಾಗಿದ್ದ ಈರುಳ್ಳಿ ಸಂಪೂರ್ಣವಾಗಿ ಸಾವಯವ ಪದ್ಧತಿಯಲ್ಲಿತ್ತು. ಎಕರೆಗೆ ₹20ರಿಂದ ₹30 ಸಾವಿರ ವೆಚ್ಚ ಮಾಡಿದ್ದು, ಈ ಬಾರಿ ಒಳ್ಳೆಯ ಫಸಲು ಹಾಗೂ ಆದಾಯದ ನಿರೀಕ್ಷೆಯಲ್ಲೂ ಇದ್ದರು. ಬೆಳೆಯು ಆರಂಭದಲ್ಲಿ ಚೆನ್ನಾಗಿಯೇ ಇತ್ತು. ಆದರೆ, ಕಳೆದ ತಿಂಗಳು ನಿರಂತರವಾಗಿ ಸುರಿದ ಮಳೆಗೆ ಇದೀಗ ಈರುಳ್ಳಿ ಗಡ್ಡೆಗಳು ಕೊಳೆತು ಹೋಗಿವೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಹೋಗಿದೆ. ಈ ಕಾರಣದಿಂದ ನೋಂದಿರುವ ರೈತ ಮಲ್ಲಿಕಾರ್ಜುನ ಬುಧವಾರ ಟ್ರ್ಯಾಕ್ಟರ್ ಬಳಸಿ ಈರುಳ್ಳಿ ಹೊಲವನ್ನು ಸಂಪೂರ್ಣವಾಗಿ ಹರಗಿ ಬಿಟ್ಟಿದ್ದಾರೆ.

ಅಷ್ಟಕ್ಕೂ ಈರುಳ್ಳಿ ಕಿತ್ತು ಹಾಕಲು ಮತ್ತೊಂದು ಕಾರಣವಿದೆ. ಇದೀಗ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತ ಕಂಡಿದೆ. ಅಳಿದುಳಿದ ಈರುಳ್ಳಿಯನ್ನು ಕಿತ್ತು, ಮಾರುಕಟ್ಟೆಗೆ ಒಯ್ಯಲು ಮತ್ತೆ ವೆಚ್ಚವಾಗಲಿದೆ. ಕಟಾವು ಮಾಡಿಕೊಂಡು ಮಾರುಕಟ್ಟೆಗೆ ಹೋದರೆ ಕಟಾವು ಮಾಡಲು ಖರ್ಚು ಮಾಡಿದ ಹಣವೂ ಮರಳಿ ಬರುವುದಿಲ್ಲ. ಹೀಗಾಗಿ ಇಡೀ ಹೊಲ ಸ್ವಚ್ಛಗೊಳಿಸಿ ಹಿಂಗಾರು ಬೆಳೆಗಳನ್ನು ಬೆಳೆಯಲು ಯೋಚಿಸಿದ್ದೇನೂ ತಪ್ಪಿಲ್ಲ.

ಈ ಬಾರಿ ಮಲ್ಲಿಕಾರ್ಜುನ 70ರಿಂದ 80 ಕ್ವಿಂಟಲ್ ಈರುಳ್ಳಿ ಬೆಳೆ ನಿರೀಕ್ಷಿಸಿದ್ದರು. ಆದರೆ ಇದೀಗ ಒಂದು ಕ್ವಿಂಟಲ್ ಕೂಡ ಬಾರದಂತಾಗಿ ಹೋಗಿದೆ. ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 6,500 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಬಹುತೇಕ ಕಡೆಗಳಲ್ಲಿ ಈರುಳ್ಳಿ ಚೆನ್ನಾಗಿಯೇ ಇತ್ತು. ಆದರೆ, ನಿರಂತರವಾಗಿ ಸುರಿದ ಮಳೆಯಿಂದಾಗಿ ಈರುಳ್ಳಿ ಸೇರಿದಂತೆ ಎಲ್ಲ ಬೆಳೆಗಳಿಗೂ ಹಾನಿಯಾಗಿದೆ. ಈಗ ಹಿಂಗಾರು ಹಂಗಾಮು ಬಂದಿದ್ದು, ಅದಾದರೂ ಕೈ ಹಿಡಿಯಲಿದೆಯೇ ಕಾದು ನೋಡಬೇಕಿದೆ.

ಸಾಮಾನ್ಯವಾಗಿ ಈರುಳ್ಳಿಗೆ ಉತ್ತಮ ಬೆಲೆ ಇರುತ್ತದೆ. ಆದರೆ, ನಮ್ಮ ಸಮಯಕ್ಕೆ ಅದು ಕೈಗೂಡಲಿಲ್ಲ. ಈರುಳ್ಳಿ ಚೆನ್ನಾಗಿ ಬಂದಿದ್ದರೆ ಹಿಂಗಾರು ಬಿತ್ತನೆಯ ಚಿಂತನೆಯೇ ಇರಲಿಲ್ಲ. ಆದರೆ, ಕೊಳತು ಹೋದ ಕಾರಣ, ಹಿಂಗಾರು ಬೆಳೆಯಾದರೂ ಕೈಗೆ ಸಿಗಲಿದೆ ಎಂಬ ಚಿಂತನೆಯಲ್ಲಿ ಈರುಳ್ಳಿಯನ್ನು ಕಿತ್ತೊಗೆಯಬೇಕಾಯಿತು ಎಂದು ಹೆಬ್ಬಳ್ಳಿ ರೈತ ಮಲ್ಲಿಕಾರ್ಜುನ ಲಕ್ಕಮ್ಮನವರ ಹೇಳಿದರು.