ತೊಗರಿ ಬೆಳೆಗೆ ನೆಟೆರೋಗ: ಬೆಳೆ ನಾಶ ಮಾಡಿದ ರೈತ

| Published : Sep 23 2024, 01:23 AM IST

ಸಾರಾಂಶ

ಅಪಾರ ಪ್ರಮಾಣದ ಮಳೆಯಾದ ಹಿನ್ನೆಲೆ ಬೆಳೆಗೆ ರೋಗ. ಅಫಜಲ್ಪುರ ಹೊಸೂರ ಗ್ರಾಮದಲ್ಲಿ 4 ಎಕರೆ ತೊಗರಿ ಬೆಳೆಯನ್ನು ಟ್ರ್ಯಾಕ್ಟರ್‌ ಮೂಲಕ ನಾಶ ಮಾಡಿದ ರೈತ. ಬಿತ್ತನೆ ಸೇರಿದಂತೆ 48 ಸಾವಿರ ರುಪಾಯಿ ಲಾಗೋಡಿ (ಖರ್ಚು) ಮಾಡಿದ್ದ ರೈತ.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಕಳೆದ ವರ್ಷ ಆವರಿಸಿದ ಭೀಕರ ಬರಗಾಲದಿಂದ ಕಂಗೆಟ್ಟಿದ್ದ ಅನ್ನದಾತರಿಗೆ ಈ ವರ್ಷ ಆರಂಭದಲ್ಲಿ ವರುಣದೇವ ಕೈ ಹಿಡಿದ ಪರಿಣಾಮ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ ಬೆಳೆಗೆ ನೆಟೆ ರೋಗ ಆವರಿಸಿದ್ದು ಟ್ರ್ಯಾಕ್ಟರ್‌ ಮೂಲಕ ರೈತರು ತೊಗರಿ ಬೆಳೆ ನಾಶ ಮಾಡುತ್ತಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಆರಂಭದಲ್ಲಿ ಉತ್ತಮ ಮಳೆಯಾದ ಪರಿಣಾಮ ಖುಷಿಗೊಂಡಿದ್ದ ನೇಗಿಲ ಯೋಗಿಗಳು ತೊಗರಿ ಬಿತ್ತನೆ ಮಾಡಿದ್ದರು. ಆದರೆ ಅಪಾರ ಪ್ರಮಾಣದ ಮಳೆಯಾದ ಹಿನ್ನೆಲೆ ಬಿತ್ತನೆ ಮಾಡಿದ್ದ ತೊಗರಿ ಬೆಳೆಗೆ ನೆಟೆ ರೋಗ ಆವರಿಸಿದ್ದು ಸಂಪೂರ್ಣ ತೊಗರಿ ಬೆಳೆ ನೆಟೆರೋಗಕ್ಕೆ ತುತ್ತಾಗಿ ಒಣಗುತ್ತಿದೆ.

ತಾಲೂಕಿನ ಹೊಸೂರ ಗ್ರಾಮದ ರೈತ ನಾರಾಯಣ ಹೊನಮಾನೆ ಹಾಗೂ ದೊಂಡಿಬಾ ಹೊನಮಾನೆ ಎಂಬ ರೈತರು ತಾವು ಬಿತ್ತನೆ ಮಾಡಿದ್ದ 4 ಎಕರೆ ತೊಗರಿ ಬೆಳೆ ಟ್ರ್ಯಾಕ್ಟರ್ ಮೂಲಕ ನಾಶ ಮಾಡಿದ್ದಾರೆ 4 ಎಕರೆ ತೊಗರಿ ಬಿತ್ತನೆ ಸೇರಿದಂತೆ 48 ಸಾವಿರ ರೂಪಾಯಿ ಲಾಗೋಡಿ (ಖರ್ಚು) ಮಾಡಿದ್ದಾರೆ. ತೊಗರಿ ಸಂಪೂರ್ಣ ಒಣಗಿ ಹೋಗಿದೆ. ಆಘಾತಗೊಂಡ ರೈತರು ಬೆಳೆ ನಾಶ ಮಾಡುವಲ್ಲಿ ನಿರತರಾಗಿದ್ದಾರೆ. ಇದು ನಿಜಕ್ಕೂ ದುರದೃಷ್ಟಕರ ಸಂಗತಿಯಾಗಿದೆ.

ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೃಷಿ ಕೂಲಿ ಕಾರ್ಮಿಕರಿಗಾಗಿ ಸಾಕಷ್ಟು ಹಣ ಕೂಡ ಖರ್ಚು ಮಾಡಿದ್ದಾರೆ. ಆದರೆ ಎಲ್ಲವೂ ಕೂಡ ಇದೀಗ ನೀರಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಸಾಲದ ಶೂಲ ನೆತ್ತಿಯ ಮೇಲೆ ತೇಲಾಡುವಂತಾಗಿದೆ.

ಕಳೆದ ವರ್ಷದ ಬರಗಾಲದ ಕರಿನೆರಳು ಈ ವರ್ಷಕ್ಕಾದರೂ ಮುಕ್ತಿ ದೊರೆಯುತ್ತದೆ.

ಅಂದುಕೊಂಡು ರೈತರು ಆರಂಭದ ಮಳೆ ಬಂದಿರುವುದು ನೋಡಿ ತುಂಬ ಖುಷಿಗೊಂಡಿದ್ದರು. ಹೋದ ವರ್ಷ ಮಾಡಿದ ಸಾಲ ಈ ವರ್ಷ ತೀರಿಸಲು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಎಲ್ಲವೂ ಉಲ್ಟಾಪಲ್ಟಾ ಆಗಿರುವ ಹಿನ್ನೆಲೆ ಸಾಲಗಾರರ ಕಣ್ಣಿಗೆ ಕಾಣದಂತೆ ಓಡಾಡುವಂತಹ ಸ್ಥಿತಿ ಅನ್ನದಾತರಿಗೆ ಒದಗಿ ಬಂದಿದೆ.ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿರುವುದರಿಂದ ತೊಗರಿ ಬೆಳೆ ಹಸಿ ಹೆಚ್ಚಾಗಿ ನೆಟೆ ರೋಗಕ್ಕೆ ತುತ್ತಾಗಿ ಒಣಗುತ್ತಿದೆ. ಟ್ರ್ಯಾಕ್ಟರ್‌ ಮೂಲಕ ಹೊಲ ಹರಗುತ್ತಿದ್ದೇವೆ. ಕಳೆದ ವರ್ಷ ಬರಗಾಲದಿಂದ ಕಂಗಾಲಾಗಿದ್ದ ನಮಗೆ ಈ ವರ್ಷ ಆರಂಭದಲ್ಲಿ ಉತ್ತಮ ಮಳೆ ಆಗಿರುವುದರಿಂದ ಸಂತೋಷ ಆಗಿತ್ತು. ಆದರೀಗ ನೆಟೆ ರೋಗದಿಂದ ತೊಗರಿ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಮತ್ತೊಮ್ಮೆ ಸಾಲದ ಸುಳಿಗೆ ಸಿಲುಕುವಂತಾಗಿದೆ.

- ನಾರಾಯಣ ಹೊನಮಾನೆ, ಹೊಸೂರ ಗ್ರಾಮದ ರೈತ