ತಾಲೂಕಿನ ವಿವಿಧ ಗ್ರಾಮಗಳ ರೈತರು ಜಿಂಕೆಗಳ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಲ್ಯಾಳ, ಕರಕ್ಯಾಳ, ಎಕಂಬಾ, ಜೋಜನಾ, ಜಿರಗಾ, ಚಟ್ನಳ್ಳಿ, ಕೌಡಗಾಂವ್ ಹಾಗೂ ವಡಗಾಂವ್ ಭಾಗಗಳಲ್ಲಿ ರೈತರ ಜಮೀನುಗಳಿಗೆ ಜಿಂಕೆಗಳ ಹಿಂಡು ನುಗ್ಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಸೋಯಾಬಿನ್, ಉದ್ದು, ಹೆಸರು ಹಾಗೂ ತೊಗರಿ ಬೆಳೆಗಳ ಮೊಳಕೆಗಳನ್ನು ತಿಂದು ನಾಶಪಡಿಸುತ್ತಿವೆ.
ಕನ್ನಡಪ್ರಭ ವಾರ್ತೆ ಔರಾದ್
ತಾಲೂಕಿನ ವಿವಿಧ ಗ್ರಾಮಗಳ ರೈತರು ಜಿಂಕೆಗಳ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹುಲ್ಯಾಳ, ಕರಕ್ಯಾಳ, ಎಕಂಬಾ, ಜೋಜನಾ, ಜಿರಗಾ, ಚಟ್ನಳ್ಳಿ, ಕೌಡಗಾಂವ್ ಹಾಗೂ ವಡಗಾಂವ್ ಭಾಗಗಳಲ್ಲಿ ರೈತರ ಜಮೀನುಗಳಿಗೆ ಜಿಂಕೆಗಳ ಹಿಂಡು ನುಗ್ಗಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಸೋಯಾಬಿನ್, ಉದ್ದು, ಹೆಸರು ಹಾಗೂ ತೊಗರಿ ಬೆಳೆಗಳ ಮೊಳಕೆಗಳನ್ನು ತಿಂದು ನಾಶಪಡಿಸುತ್ತಿವೆ.ಈ ಬಾರಿ ಮುಂಗಾರು ಮಳೆ ತಡವಾದ ಹಿನ್ನೆಲೆಯಲ್ಲಿ ಬಿತ್ತನೆಯೂ ವಿಳಂಬವಾಗಿತ್ತು. ಇದೀಗ ಮಳೆಯಾಗಿ ಕಷ್ಟಪಟ್ಟು ಬಿತ್ತನೆ ಮಾಡಿದ್ದ ಬೆಳೆಗಳು ಅಲ್ಪಸ್ವಲ್ಪ ಚಿಗುರೊಡೆಯುತ್ತಿದ್ದಂತೆಯೇ ಜಿಂಕೆಗಳ ಹಿಂಡು ಜಮೀನುಗಳಿಗೆ ದಾಳಿ ಮಾಡುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಹಗಲು - ರಾತ್ರಿ ಎನ್ನದೆ ಜಿಂಕೆಗಳು ಹೊಲಗಳಿಗೆ ನುಗ್ಗಿ ಎಳೆಯ ಸಸಿಗಳನ್ನು ತಿಂದು ಹಾಗೂ ತುಳಿದು ಹಾನಿಗೊಳಿಸುತ್ತಿವೆ. ಇದರಿಂದ ಈಗಾಗಲೇ ಬಿತ್ತನೆಗಾಗಿ ಮಾಡಿರುವ ಖರ್ಚು ಕೈತಪ್ಪುವ ಭೀತಿಯಲ್ಲಿ ರೈತರು ಕಂಗಾಲಾಗಿದ್ದಾರೆ. ಸೋಯಾಬಿನ್, ಹೆಸರು ಸಸಿಗಳ ಮೊಳಕೆಗಳು ತಿನ್ನುವುದಷ್ಟೆ ಅಲ್ಲ ಅದನ್ನು ನೆಲಕ್ಕೆ ಹಾಕಿ ನಾಶ ಮಾಡ್ತಿವೆ ಇದರಿಂದ ಸಾಕಷ್ಟು ಹಾನಿಯಾಗಿದೆ. ಈ ನಡುವೆ ಕಾಡು ಹಂದಿಗಳ ಕಾಟವೂ ಜಾಸ್ತಿಯಾಗಿದ್ದು, ಫಲವತ್ತಾಗಿ ಬೆಳೆದ ರೈತರ ಕಬ್ಬಿಗೆ ಹಿಂಡು ಹಿಂಡಾಗಿ ನುಗ್ತಿರುವ ಈ ಹಂದಿಗಳು ಕಬ್ಬನ್ನು ನೆಲಕ್ಕ ಹಾಕಿ ನಾಶ ಮಾಡ್ತಿವೆ ಎಂದು ರೈತ ಅಂಕುಶ ನೋವು ತೊಡಿಕೊಂಡಿದ್ದಾರೆ. ಜಿಂಕೆಗಳ ಹಾವಳಿಯನ್ನು ನಿಯಂತ್ರಿಸಿ, ಬೆಳೆ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡ ಬೇಕು. ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ, ರೈತರ ಬೆಳೆಗಳನ್ನು ರಕ್ಷಿಸಲು ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಂಖಡರು ಆಗ್ರಹಿಸಿದ್ದಾರೆ.