ಯೂರಿಯಾ ಗೊಬ್ಬರ ಸಿಗದೆ ಮಣ್ಣು ತಿಂದು ರೈತ

| Published : Jul 27 2025, 12:01 AM IST

ಸಾರಾಂಶ

ಕೊಪ್ಪಳ ಕುಣಿಕೇರಿ ಗ್ರಾಮದ ಚಂದ್ರಪ್ಪ ಬಡಿಗಿ ಎಂಬ ರೈತನೇ ಈ ರೀತಿ ಆಕ್ರೋಶ ವ್ಯಕ್ತಪಡಿಸಿ ಯೂರಿಯಾ ಅಭಾವದ ತೀವ್ರತೆ ಹೇಳಿದ್ದಾನೆ. ತನ್ನ ನಾಲ್ಕು ಎಕರೆ ಹೊಲದಲ್ಲಿ ಹಾಕಿದ ಮೆಕ್ಕೆಜೋಳಕ್ಕೆ ಯೂರಿಯಾ ರಸಗೊಬ್ಬರವನ್ನು ಈಗ ಹಾಕಲೇಬೇಕಾಗಿದೆ. ಆದರೆ, ಕಳೆದೊಂದು ವಾರದಿಂದ ಯೂರಿಯಾ ರಸಗೊಬ್ಬರಕ್ಕಾಗಿ ಸುತ್ತಾಡಿದರೂ ಸಿಕ್ಕಿಲ್ಲ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಯೂರಿಯಾ ಖರೀದಿಗೆಂದು ಕೊಪ್ಪಳ ಟಿಎಪಿಎಂಸಿಗೆ ಬಂದ ರೈತರೊಬ್ಬರು ನೋ ಸ್ಟಾಕ್ ಬೋರ್ಡ್ ನೋಡಿ ಆಕ್ರೋಶಗೊಂಡಿದ್ದಾರೆ. ಬೆಳೆಗೆ ಗೊಬ್ಬರ ಕೊಡದೆ ಇದ್ದರೆ ಮಾಡಿದ ಖರ್ಚು ಬರುವುದಿಲ್ಲ, ಮಣ್ಣು ತಿಂದು ಸಾಯಬೇಕಾ ಎಂದು ತಾನೇ ಮಣ್ಣು ತಿಂದಿದ್ದಾನೆ.

ತಾಲೂಕಿನ ಕುಣಿಕೇರಿ ಗ್ರಾಮದ ಚಂದ್ರಪ್ಪ ಬಡಿಗಿ ಎಂಬ ರೈತನೇ ಈ ರೀತಿ ಆಕ್ರೋಶ ವ್ಯಕ್ತಪಡಿಸಿ ಯೂರಿಯಾ ಅಭಾವದ ತೀವ್ರತೆ ಹೇಳಿದ್ದಾನೆ. ತನ್ನ ನಾಲ್ಕು ಎಕರೆ ಹೊಲದಲ್ಲಿ ಹಾಕಿದ ಮೆಕ್ಕೆಜೋಳಕ್ಕೆ ಯೂರಿಯಾ ರಸಗೊಬ್ಬರವನ್ನು ಈಗ ಹಾಕಲೇಬೇಕಾಗಿದೆ. ಆದರೆ, ಕಳೆದೊಂದು ವಾರದಿಂದ ಯೂರಿಯಾ ರಸಗೊಬ್ಬರಕ್ಕಾಗಿ ಸುತ್ತಾಡಿದರೂ ಸಿಕ್ಕಿಲ್ಲ. ಅತ್ತ ಉತ್ತಮ‌ ಮಳೆ ಆಗುತ್ತಿರುವುದರಿಂದ ಯೂರಿಯಾ ರಸಗೊಬ್ಬರ ಹಾಕದಿದ್ದರೆ ಮೆಕ್ಕೆಜೋಳ ಬೆಳೆ ಹಳದಿ ಬಣ್ಣಕ್ಕೆ ತಿರುಗಿ ಹಾಳಾಗುತ್ತದೆ. ಹೀಗಾಗಿ ಯೂರಿಯಾ ರಸಗೊಬ್ಬರ ಸಿಗದೆ ಇರುವುದು ರೈತನ ಆಕ್ರೋಶಕ್ಕೆ ಕಾರಣವಾಗಿದೆ.

ನಾನು ಕಳೆದ ವಾರದಿಂದ ನಾಲ್ಕು ಚೀಲ ಯೂರಿಯಾ ರಸಗೊಬ್ಬರ ಬೇಕೆಂದು ಅಂಗಡಿ, ಮುಂಗಟ್ಟು ಸುತ್ತಿದ್ದೇನೆ. ಅಷ್ಟೇ ಅಲ್ಲದೇ ಸರ್ಕಾರಿ ಒಡೆತನದ ಟಿಎಪಿಎಂಸಿ ಬಳಿ ಬೆಳಗಿನ ಜಾವವೇ ಬಂದು ಕಾದಿದ್ದೇನೆ. ಇವತ್ತು ಬಂದರೆ ಗೊಬ್ಬರವಿಲ್ಲವೆಂದು ಬೋರ್ಡ್ ಹಾಕಿದ್ದಾರೆ. ಕೇಳುವುದಕ್ಕೂ ಯಾರು ಇಲ್ಲ‌. ರೈತರು ಬೆಳೆಯದೇ ಇದ್ದರೆ ಎಲ್ಲರೂ ಮಣ್ಣು ತಿನ್ನಬೇಕಾಗುತ್ತದೆ. ರೈತರು ಯೂರಿಯಾ ರಸಗೊಬ್ಬರ ಸಿಗದೆ ಎಂತಹ ಸಂಕಷ್ಟ ಅನುಭವಿಸುತ್ತಿದ್ದಾರೆಂದು ಈ ಸರ್ಕಾರಕ್ಕೆ ಅರಿವಾಗಲೆಂದು ಮಣ್ಣು ತಿಂದಿದ್ದೇನೆ ಹೇಳಿಕೊಂಡಿದ್ದಾರೆ.

ರೈತ ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದರೂ ಸಹ ಆತನನ್ನು ಕೇಳುವವರ್‍ಯಾರು ಅಲ್ಲಿರಲಿಲ್ಲ. ನಾಲ್ಕನೇ ಶನಿವಾರ ಆಗಿದ್ದರಿಂದ ಅಧಿಕಾರಿಗಳು ಬರಲಿಲ್ಲ. ಮಣ್ಣು ತಿಂದು ಆಕ್ರೋಶ ವ್ಯಕ್ತಪಡಿಸಿದ ರೈತ ಕೊನೆ ಮಣ್ಣು ತೂರಿ ಅಲ್ಲಿಂದ ತೆರಳಿದ.

ಯೂರಿಯಾ ಅಭಾವ:

ಜಿಲ್ಲಾದ್ಯಂತ ಯೂರಿಯಾ ಅಭಾವ ಸೃಷ್ಟಿಯಾಗಿದ್ದು ರೈತರು ಪರದಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಯೂರಿಯಾ ಕೊರತೆ ಇಲ್ಲ. ಕೊಡಬೇಕಾಗಿದ್ದಷ್ಟು ಕೊಟ್ಟಿದ್ದೇವೆ. ಮಳೆ ಬೇಗನೇ ಬಂದಿದ್ದರೆ ಜೂನ್ , ಜುಲೈ ತಿಂಗಳಲ್ಲ ಬೇಡಿಕೆಯಷ್ಟು ಪೂರೈಕೆ ಮಾಡಿದ್ದೇವೆ ಎಂದು ಸಬೂಬ ನೀಡುತ್ತಲೇ ಇದ್ದಾರೆ.

ಯೂರಿಯಾ ಗೊಬ್ಬರದ ಬದಲಾಗಿ ನ್ಯಾನೋ ಯೂರಿಯಾ ಬಳಸುವಂತೆ ಹೇಳುತ್ತಿದ್ದಾರೆ. ಆದರೆ, ರೈತರು ಮಾತ್ರ ಯೂರಿಯಾ ರಸಗೊಬ್ಬರವೇ ಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸಮಸ್ಯೆ ಗಂಭೀರವಾಗಿದೆ. ಆದರೂ ಸರ್ಕಾರ ಸ್ಪಂದಿಸದೇ ಇರುವುದರಿಂದ ರೈತರು ರೊಚ್ಚಿಗೆದ್ದಿದ್ದಾರೆ.ಅಧಿಕ ಪೂರೈಕೆ

ಏಪ್ರಿಲ್ ದಿಂದ ಈ ವರೆಗೆ ಕಳೆದ ವರ್ಷ ೮೯೧ ಮೆಟ್ರಕ್ ಟನ್ ಪೂರೈಕೆ ಮಾಡಿದ್ದರೆ ಈ ವರ್ಷ ೧೧೬೮ .೬೮ ಮೆಟ್ರಿಕ್ ಟನ್ ಪೂರೈಕೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಅಧಿಕ ಯೂರಿಯಾ ರಸಗೊಬ್ಬರ ಪೂರೈಕೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಪ್ರಕಟಣೆ ಮೂಲಕ ತಿಳಿಸಿದೆ.ಕಾಳಸಂತೆಯಲ್ಲಿ ಅವ್ಯಾತಯೂರಿಯಾ ರಸಗೊಬ್ಬರ ಮಾರುಕಟ್ಟೆಯಲ್ಲಿ ಲಭ್ಯ ಇಲ್ಲವಾದರೂ ಕಾಳಸಂತೆಯಲ್ಲಿ ಅವ್ಯಾತವಾಗಿ ಲಭ್ಯವಿದೆ. ದುಪ್ಪಟ್ಟು ದರಕ್ಕೆ ಯೂರಿಯಾ ರಸಗೊಬ್ಬರವನ್ನು ಮನೆ-ಮನೆಗೆ ತಲುಪಿಸಲಾಗುತ್ತದೆ. ಅಂಗಡಿಯಲ್ಲಿ ಇಲ್ಲದ ರಸಗೊಬ್ಬರ ಮಧ್ಯವರ್ತಿಗಳ ಮೂಲಕ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತದೆ.

ರೈತರ ಆಧಾರ್‌ ಕಾರ್ಡ್‌ ಮೂಲಕವೇ ರಸಗೊಬ್ಬರ ಪೂರೈಕೆ ಮಾಡಬೇಕು. ಆದರೆ, ಒಬ್ಬೊಬ್ಬ ರೈತನ ಹೆಸರಿನಲ್ಲಿ ನೂರು ಚೀಲಕ್ಕೂ ಅಧಿಕ ಯೂರಿಯಾ ರಸಗೊಬ್ಬರ ನೀಡಿದ ದಾಖಲೆ ಸೃಷ್ಟಿ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿದರೆ ಕಳ್ಳ ದಂಧೆ ಮಾಡುವವರ ಬಣ್ಣ ಬಯಲಾಗುತ್ತದೆ.