ಜಮೀನು ಸರ್ವೇ ವೇಳೆ ವಿಷಸೇವಿಸಿ ರೈತ ಅಸ್ವಸ್ಥ

| N/A | Published : May 15 2025, 01:42 AM IST / Updated: May 15 2025, 06:47 AM IST

ಸಾರಾಂಶ

ಚನ್ನಪಟ್ಟಣ ತಾಲೂಕಿನ ವಿರುಪಾಕ್ಷಿಪುರ ಹೋಬಳಿ ಗರಕಹಳ್ಳಿ ಗ್ರಾಮದ ಸರ್ವೇ ನಂ.128  ಹೊಸ ನಂ.557 ರಲ್ಲಿನ ಗೋಮಾಳ ಜಮೀನು ವಿವಾದದ ಹಿನ್ನೆಲೆಯಲ್ಲಿ ಸರ್ವೇ ನಡೆಸುವ ವೇಳೆ ತಹಸೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬರು ವಿಷ ಕುಡಿದ ಘಟನೆ ನಡೆದಿದೆ.

ಚನ್ನಪಟ್ಟಣ : ತಾಲೂಕಿನ ವಿರುಪಾಕ್ಷಿಪುರ ಹೋಬಳಿ ಗರಕಹಳ್ಳಿ ಗ್ರಾಮದ ಸರ್ವೇ ನಂ.128 , ಹೊಸ ನಂ.557 ರಲ್ಲಿನ ಗೋಮಾಳ ಜಮೀನು ವಿವಾದದ ಹಿನ್ನೆಲೆಯಲ್ಲಿ ಸರ್ವೇ ನಡೆಸುವ ವೇಳೆ ತಹಸೀಲ್ದಾರ್ ಹಾಗೂ ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬರು ವಿಷ ಕುಡಿದ ಘಟನೆ ನಡೆದಿದೆ.

ಮದ್ದೂರು ತಾಲೂಕು ಅಂಕೇಗೌಡನದೊಡ್ಡಿ ಗ್ರಾಮದ ರಾಮಕೃಷ್ಣ ವಿಷ ಸೇವಿಸಿ ಅಸ್ವಸ್ಥನಾಗಿರುವ ರೈತ. ಸರ್ಕಾರಿ ಗೋಮಾಳ 1.32  ಎಕರೆ/ಗುಂಟೆ ಜಮೀನಿನ ವಿಚಾರವಾಗಿ ಮದ್ದೂರು ತಾಲೂಕು ಅಂಕೇಗೌಡನದೊಡ್ಡಿ ಗ್ರಾಮದ ಪ್ರೇಮಾ ಕುಟುಂಬ ಹಾಗೂ ಮದ್ದೂರು ತಾಲೂಕು ಬೆಳ್ಳೂರು ಗ್ರಾಮದ ಕೆಂಪಮ್ಮ ಕುಟುಂಬದ ನಡುವೆ ಜಮೀನು ವಿವಾದ ನಡೆದು, ಎರಡೂ ಕುಟುಂಬಗಳ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್ ಟಿ.ಎನ್.ನರಸಿಂಹಮೂರ್ತಿ, ಪೊಲೀಸರು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ಸರ್ವೇ ಮಾಡಲು ಬಂದಾಗ ಪ್ರೇಮ ಕುಟುಂಬದವರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸರ್ವೆ ಕಾರ್ಯ ವಿರೋಧಿಸಿ ಕುಟುಂಬದ ಸದಸ್ಯ ರೈತ ರಾಮಕೃಷ್ಣ ಸ್ಥಳದಲ್ಲೇ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ತಕ್ಷಣ ಪೊಲೀಸರು ಆತನನ್ನು ಆಸ್ಪತ್ರೆಗೆ ಸಾಗಿಸಿದರು.

ಕಾನೂನಿನಡೆ ಸರ್ವೇ ಕಾರ್ಯಕ್ಕೆ ಕ್ರಮ:

ಗರಕಹಳ್ಳಿ ಗ್ರಾಮದ ಸರ್ವೆ ನಂ.128  ಹೊಸ ನಂ.557ರಲ್ಲಿನ 1.32  ಎಕರೆ/ಗುಂಟೆ ಜಮೀನಿನ ವಿಚಾರಕ್ಕೆ ಎರಡೂ ಕುಟುಂಬಗಳು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮೊದಲು ಜಮೀನು ಸರ್ವೆಕಾರ್ಯಕ್ಕೆ ನೋಟಿಸ್ ನೀಡಲಾಗಿತ್ತು. ಸಮಯಾವಕಾಶ ಕಡಿಮೆ ಎಂದು ಹೇಳಿದ್ದರಿಂದ ಹೆಚ್ಚಿನ ಕಾಲಾವಕಾಶ ಕೊಟ್ಟು 2ನೇ ಬಾರಿ ನೋಟಿಸ್ ನೀಡಿ ಬುಧವಾರ ಜಮೀನು ಅಳತೆ ಮಾಡಲು ಬಂದಿದ್ದೇವೆ. ಯಾರಿಗೂ ಅನ್ಯಾಯವಾಗದಂತೆ ವಿವಾದಕ್ಕೆ ತೆರೆ ಎಳೆಯುತ್ತೇವೆ ಎಂದು ತಹಶೀಲ್ದಾರ್ ಟಿ.ಎನ್. ನರಸಿಂಹಮೂರ್ತಿ ಮಾಧ್ಯಮದವರಿಗೆ ತಿಳಿಸಿದ್ದಾರೆ.  

ಸರ್ವೇ ಕಾರ್ಯಕ್ಕೆ ಅಡ್ಡಿ: ಪ್ರಕರಣ ದಾಖಲು

ಚನ್ನಪಟ್ಟಣ: ತಾಲೂಕಿನ ಗರಕಹಳ್ಳಿ ಗ್ರಾಮದ ಸರ್ವೆ ನಂ.128 , ಹೊಸ ನಂ.557 ರಲ್ಲಿನ ಜಮೀನು ಸರ್ವೇ ನಡೆಸುವ ಮದ್ದೂರು ತಾಲೂಕಿನ ಅಂಕೇಗೌಡನದೊಡ್ಡಿ ಗ್ರಾಮದ ಜಗದೀಶ್, ಪ್ರತಾಪ್, ಪ್ರಕಾಶ್, ರಾಮಕೃಷ್ಣ ಅಡ್ಡಿಪಡಿಸಿದ್ದು, ಇವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ರಾಜಸ್ವ ನಿರೀಕ್ಷಕ ವೀರೇಶ್ ಕುಮಾರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗರಕಹಳ್ಳಿ ಗ್ರಾಮದ ಸರ್ವೆ ನಂ.128 , ಹೊಸ ನಂ.557 ರಲ್ಲಿ ಸರ್ವೇ ನಡೆಸುವ ವೇಳೆ ಈ ನಾಲ್ವರು ಜಮೀನು ಸರ್ವೇ ನಡೆಸದಂತೆ ಅಡ್ಡಿಪಡಿಸಿದರು. ಈ ವೇಳೆ ರಾಮಕೃಷ್ಣ ಯಾವುದೋ ಕೀಟನಾಶಕ ಮೈಮೇಲೆ ಹಾಕಿಕೊಂಡು ನಮಗೆ ಹೆದರಿಸಿದರು. ನಂತರ ಪೊಲೀಸರ ಸಹಕಾರದಿಂದ ಸರ್ವೇ ಕಾರ್ಯ ಪೂರ್ಣಗೊಳಿಸಲಾಯಿತು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಟೋ೧೪ಸಿಪಿಟಿ೨: ಚನ್ನಪಟ್ಟಣ ತಾಲೂಕಿನ ಗರಕಹಳ್ಳಿ ಗ್ರಾಮದಲ್ಲಿ ಸರ್ವೇ ಕಾರ್ಯದ ವೇಳೆ ರೈತ ಕುಟುಂಬದವರು ವಿರೋಧ ವ್ಯಕ್ತಪಡಿಸಿದರು.