ಕೃಷಿ ಯಾಂತ್ರೀಕರಣದ ತ್ವರಿತ ವಿಸ್ತರಣೆ ಅಗತ್ಯ

| Published : May 15 2025, 01:42 AM IST

ಕೃಷಿ ಯಾಂತ್ರೀಕರಣದ ತ್ವರಿತ ವಿಸ್ತರಣೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶ ಮಟ್ಟದಲ್ಲಿ ಅಗತ್ಯವಿರುವ ಬೆಳವಣಿಗೆಯು ಹವಾಮಾನ ಬದಲಾವಣೆ, ಅನಿಯಮಿತ ಮಳೆ, ಬರ, ಪ್ರವಾಹ, ಚಂಡಮಾರುತಗಳು, ಅಂತರ್ಜಲ ಸವಕಳಿ, ಮಣ್ಣಿನ ಆರೋಗ್ಯ ಕ್ಷೀಣತೆ, ಮಣ್ಣಿನ ಇಂಗಾಲದ ನಷ್ಟದಂತಹ ಸವಾಲು ಎದುರಿಸುತ್ತಿದೆ

ಧಾರವಾಡ: ಸುಸ್ಥಿರ ಕೃಷಿ ನವೋದ್ಯಮಗಳ ಸ್ಥಾಪನೆ, ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ಬೆಳೆಸುವುದು, ಆಹಾರ ಮೌಲ್ಯವರ್ಧನೆ, ಸಂಸ್ಕರಣೆ, ನಷ್ಟ ಕಡಿತ ಮತ್ತು ಮಾರುಕಟ್ಟೆ ಸವಾಲು ನಿಭಾಯಿಸಲು ರೈತರ ಗುಂಪುಗಳನ್ನು ಬಲಪಡಿಸಬೇಕಿದೆ ಎಂದು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ (ಐಎಆರ್‌ಐ) ನಿರ್ದೇಶಕ ಮತ್ತು ಕುಲಪತಿ ಪ್ರೊ. ಚೆರುಕುಮಲ್ಲಿ ಶ್ರೀನಿವಾಸ್ ರಾವ್ ಹೇಳಿದರು.

ಇಲ್ಲಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ 38ನೇ ವಾರ್ಷಿಕ ಘಟಿಕೋತ್ಸವದಲ್ಲಿ ಬುಧವಾರ ಭಾಷಣ ಮಾಡಿದ ಅವರು, ಕೃಷಿ ಉತ್ಪಾದನೆ ಮತ್ತು ಕೃಷಿ ಯಾಂತ್ರೀಕರಣದಲ್ಲಿ ನಮ್ಮ ದೇಶ ಗಮನಾರ್ಹ ಯಶಸ್ಸು ಸಾಧಿಸಿದೆ. ಆದರೂ ಕೃಷಿ ಉತ್ಪನ್ನಗಳ ಉತ್ಪಾದನೆಯಲ್ಲಿ ದೇಶ ಮಟ್ಟದಲ್ಲಿ ಅಗತ್ಯವಿರುವ ಬೆಳವಣಿಗೆಯು ಹವಾಮಾನ ಬದಲಾವಣೆ, ಅನಿಯಮಿತ ಮಳೆ, ಬರ, ಪ್ರವಾಹ, ಚಂಡಮಾರುತಗಳು, ಅಂತರ್ಜಲ ಸವಕಳಿ, ಮಣ್ಣಿನ ಆರೋಗ್ಯ ಕ್ಷೀಣತೆ, ಮಣ್ಣಿನ ಇಂಗಾಲದ ನಷ್ಟದಂತಹ ಸವಾಲು ಎದುರಿಸುತ್ತಿದೆ ಎಂದು ಹೇಳಿದರು.

ಆಹಾರ ಉತ್ಪಾದನಾ ಸ್ಥಿರತೆಗೆ ಸುಸ್ಥಿರ ಮಳೆ ನೀರಿನ ನಿರ್ವಹಣೆ ನಿರ್ಣಾಯಕವಾಗಿದೆ. ಅಲ್ಲದೆ ಕಾರ್ಮಿಕ ವೆಚ್ಚ ಗಮನದಲ್ಲಿಟ್ಟುಕೊಂಡು ಕೃಷಿ ಯಾಂತ್ರೀಕರಣದ ತ್ವರಿತ ವಿಸ್ತರಣೆ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಕೃಷಿಯಲ್ಲಿನ ಶಿಕ್ಷಣ ತರಗತಿಯಲ್ಲಿ ಮಾತ್ರ ದೊರಕದು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಕೃಷಿಕ ಸಮುದಾಯಗಳೊಂದಿಗೆ ತೊಡಗಿಸಿಕೊಳ್ಳಬೇಕು. ಅವರ ಅನುಭವಗಳಿಂದ ಕಲಿಯಬೇಕು ಮತ್ತು ಗ್ರಾಮೀಣ ಜೀವನೋಪಾಯ ಉನ್ನತೀಕರಿಸಲು ಸಹಯೋಗದಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಶ್ಲಾಘಿಸಿದ ಪ್ರೊ. ರಾವ್, ಕೌಶಲ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ದೃಷ್ಟಿಕೋನವು ಎನ್‌ಇಪಿ-2020ರ ಪ್ರಮುಖ ಅಂಶಗಳಾಗಿವೆ. ತರಬೇತಿ ಮತ್ತು ಸಂಶೋಧನಾ ಅನುಭವಗಳ ಮೇಲೆ ಒತ್ತು ನೀಡುವುದರಿಂದ ಉದ್ಯೋಗವಕಾಶ ಮತ್ತು ಪ್ರಾಯೋಗಿಕ ಜ್ಞಾನ ಹೆಚ್ಚಾಗುತ್ತದೆ ಎಂದು ಪ್ರತಿಪಾದಿಸಿದರು.

ಹಲವಾರು ಕ್ಷೇತ್ರಗಳಲ್ಲಿನ ಸಾಧನೆಗಳ ಬಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘಿಸಿದ ಪ್ರೊ. ರಾವ್, ''''ಬಕ್‌ವೀಟ್ ಉಪ್ಮಾ ಮಿಕ್ಸ್'''' ಮತ್ತು ''''ಟ್ವಿನ್ ರಿಂಗ್ ಬೋರ್‌ವೆಲ್ ರೀಚಾರ್ಜ್ ಟೆಕ್ನಿಕ್''''ಗೆ ಪೇಟೆಂಟ್‌ಗಳನ್ನು ಪಡೆದ ವಿಶ್ವವಿದ್ಯಾಲಯದ ಸಾಧನೆ ವಿಶೇಷವಾಗಿ ಶ್ಲಾಘಿಸಿದರು. ಕೃಷಿ ವಿವಿ ಕುಲಪತಿ ಪ್ರೊ. ಪಿ.ಎಲ್‌. ಪಾಟೀಲ ಹಾಗೂ ವ್ಯವಸ್ಥಾಪನಾ ಮಂಡಳಿ ಸದಸ್ಯರು ಇದ್ದರು.