ಸಾರಾಂಶ
ಕನ್ನಡಪ್ರಭ ವಾರ್ತೆ ಗುಡಿಬಂಡೆ
ತಾಲೂಕಿನ ಕಂಬಾಲಹಳ್ಳಿ ಗ್ರಾಮದ ರೈತ ಅಶ್ವತ್ಥಪ್ಪ ಎಂಬುವವರು ಕುಂಬಳಕಾಯಿ ಬೆಳೆಯನ್ನು ಬೆಳೆದಿದ್ದು, ಕುಂಬಳಕಾಯಿ ಬಿತ್ತನೆ ಬೀಜಗಳು ಕಳಪೆಯಾಗಿರುವ ಹಿನ್ನೆಲೆಯಲ್ಲಿ ಫಸಲು ಸರಿಯಾಗಿ ಬಾರದೇ ಇದೀಗ ರೈತ ಕಂಗಾಲಾಗಿದ್ದಾನೆ. ಲಕ್ಷಾಂತರ ರುಪಾಯಿ ನಷ್ಟವಾಗಿದ್ದು, ರೈತನಿಗೆ ಸೂಕ್ತ ಪರಿಹಾರಕ್ಕಾಗಿ ರೈತ ಸಂಘ ಆಗ್ರಹಿಸಿದೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ)ದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಈಗಾಗಲೇ ರೈತ ವಿರೋಧಿ ನೀತಿಗಳಿಂದ ರೈತ ಬೀದಿಗೆ ಬಂದಿದ್ದಾನೆ. ತಾನು ಬೆಳೆದ ಫಸಲಿಗೆ ಸರಿಯಾದ ಬೆಲೆ ಸಿಗದೇ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾನೆ. ಆದರೆ ಸರ್ಕಾರಗಳು ಮಾತ್ರ ರೈತನ ಬೆಂಬಲಕ್ಕೆ ಬರುತ್ತಿಲ್ಲ. ಹೀಗಿರುವಾಗ ಸಾಲ ಮಾಡಿ ರೈತರು ಬೆಳೆ ಬೆಳೆಯಲು, ಕಳಪೆ ಬಿತ್ತನೆ ಬೀಜಗಳಿಂದ ಮೋಸ ಹೋಗುತ್ತಿದ್ದಾರೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆ ಬೆಳೆದರೆ ಕಳಪೆ ಬಿತ್ತನೆ ಬೀಜಗಳಿಂದ ಸರಿಯಾದ ಫಸಲು ಬಾರದೇ ಸಾಲದ ಸುಳಿಗೆ ಸಿಲುಕಿದ್ದಾನೆ. ಈ ಎಲ್ಲಾ ಕಾರಣಗಳಿಂದ ರೈತ ಅವನತಿಯತ್ತ ಸಾಗುತ್ತಿದ್ದಾನೆ. ಇದಕ್ಕೆ ಉದಾಹರಣೆ ಎಂಬಂತೆ, ಕಂಬಾಲಹಳ್ಳಿ ರೈತ ಅಶ್ವತ್ಥಪ್ಪ ಎಂಬುವವರಿಗೆ ಚಿಕ್ಕಬಳ್ಳಾಪುರದ ಅಶ್ವಿನಿ ಆಗ್ರೋ ಸೀಡ್ಸ್ ಅಂಗಡಿಯಿಂದ ಕುಂಬಳಕಾಯಿ ಬಿತ್ತನೆ ಬೀಜ ನೀಡಿದ್ದು, ಅವು ಕಳಪೆಯಾಗಿದೆ. ಇದರಿಂದಾಗಿ ರೈತ ನಷ್ಟ ಅನುಭವಿಸಿದ್ದಾನೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಂಪನಿಯವರು ರೈತನಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ನಮ್ಮ ಸಂಘದ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಆಗ್ರಹಿಸಿದರು.
ನಂತರ ರೈತ ಅಶ್ವತ್ಥಪ್ಪ ಮಾತನಾಡಿ, ನಾನು ಸುಮಾರು ವರ್ಷಗಳಿಂದ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದೇನೆ. ಎಂದಿನಂತೆ ಈ ಬಾರಿಯೂ ಕುಂಬಳಕಾಯಿ ಬೆಳೆಯನ್ನು ಬೆಳೆದಿದ್ದೆ. ಆದರೆ ಈ ಬಿತ್ತನೆ ಬೀಜ ಕಳಪೆಯಾಗಿದೆ. ಫಸಲು ವಿಚಿತ್ರವಾಗಿ ಬಂದಿದೆ. ಸೋರೆಕಾಯಿ ಮಾದರಿಯಲ್ಲಿ ಕೆಲ ಕುಂಬಳಕಾಯಿ ಬಂದರೆ, ಮತ್ತೆ ಕೆಲವು ಬಿಳಿ, ಹಸಿರು ಬಣ್ಣದಲ್ಲಿ ಬೆಳೆದಿವೆ. ಈ ಕುಂಬಳಕಾಯಿಯನ್ನು ಮಾರುಕಟ್ಟೆಯಲ್ಲಿ ಯಾರೂ ಖರೀದಿಸಲ್ಲ. ಈ ಕುರಿತು ಚಿಕ್ಕಬಳ್ಳಾಪುರದ ಅಶ್ವಿನಿ ಆಗ್ರೋ ಸೀಡ್ಸ್ ಮಾಲೀಕರಿಗೆ ದೂರವಾಣಿ ಮೂಲಕ ಸಮಸ್ಯೆ ತಿಳಿಸಿದ್ದೆ. ಅಂಗಡಿಯವರು ಬಂದು ಪರಿಶೀಲನೆ ಮಾಡಿ ಕುಂಬಳಕಾಯಿ ಮಾದರಿಯನ್ನು ಸಹ ಪರೀಕ್ಷೆಗೆ ತೆಗೆದುಕೊಂಡು ಹೋದರು. ನಂತರ ನಿಮ್ಮ ಸಮಸ್ಯೆಯನ್ನು ಕಂಪನಿಯವರಿಗೆ ಹೇಳಿದ್ದೇವೆ. ಪರಿಹಾರ ಕೊಡಿಸುತ್ತೇವೆ ಎಂದಿದ್ದರು. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರವೂ ಇಲ್ಲ, ಕರೆ ಮಾಡಿದರೆ ಪ್ರತಿಕ್ರಿಯೆ ಸಹ ಇಲ್ಲ. ಮೂರು ತಿಂಗಳು ಕಳೆದ ಬಳಿಕ ಉಡಾಫೆ ಉತ್ತರ ನೀಡುತ್ತಿದ್ದಾರೆ. ನಿಮಗೆ ಏನು ಬೇಕೋ ಅದು ಮಾಡಿಕೊಳ್ಳಿ ಎನ್ನುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.ಈ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ದ ವತಿಯಿಂದ ಆಗ್ರಹ ವ್ಯಕ್ತಪಡಿಸಿದ್ದು, ರೈತನ ಜಮೀನಿನಲ್ಲೇ ಅಧಿಕಾರಿಗಳು ಹಾಗೂ ಕಂಪನಿಯ ವಿರುದ್ಧ ಆಕ್ರೋಶ ಹೊರಹಾಕಿದರು.