ಸಾರಾಂಶ
ಎಸ್.ಎಂ. ಸೈಯದ್ಕನ್ನಡಪ್ರಭ ವಾರ್ತೆ ಗಜೇಂದ್ರಗಡ
ಗಜೇಂದ್ರಗಡ ಪಟ್ಟಣ ಸೇರಿ ತಾಲೂಕಿನ ಗ್ರಾಮಗಳ ಜಮೀನಿನಲ್ಲಿನ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆಯಲ್ಲಿ ತಾತ್ಕಾಲಿಕ ಸಮಸ್ಯೆ ಎದುರಾದ ಪರಿಣಾಮ ರೈತರ ಪಂಪ್‌ಸೆಟ್ ಮತ್ತು ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆ ಕಳೆದ ೩ ದಿನಗಳಿಂದ ಸ್ಥಗಿತವಾಗಿದ್ದು, ಅನ್ನ ನೀಡುವ ರೈತರು ಕತ್ತಲಲ್ಲಿ ಬದುಕು ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ.ರಾಜ್ಯದಲ್ಲಿ ಪವನ್ ವಿದ್ಯುತ್, ಸೌರ ವಿದ್ಯುತ್ ಉತ್ಪಾದನೆಯಲ್ಲಿ ಕಡಿಮೆಯಾದ ಪರಿಣಾಮ ತಾಲೂಕಿನ ೩೬ಕ್ಕೂ ಅಧಿಕ ಗ್ರಾಮಗಳಲ್ಲಿನ ತೋಟಗಳಲ್ಲಿ ಬಿತ್ತಿರುವ ಬೆಳೆಗಳನ್ನು ರಕ್ಷಿಸಿಕೊಳ್ಳಲು ಹೆಣಗಾಡುವುದರ ಜತೆಗೆ ತೋಟದ ಮನೆಗಳಲ್ಲಿ ವಾಸಿಸುವ ಸಾವಿರಾರು ರೈತ ಕುಟುಂಬಗಳಿಗೆ ವಿದ್ಯುತ್ ಸಮಸ್ಯೆಯು ತಲೆನೋವಾಗಿ ಪರಿಣಮಿಸಿದೆ. ತೋಟದಲ್ಲಿ ಕಾಳು ಕಡಿ ರಕ್ಷಣೆ, ಹಸು, ಆಡು, ದನಕರುಗಳಿಗೆ ನೀರುಣಿಸಲು ಸಹ ಪರದಾಡುವಂತಾಗಿದೆ.ತಾಲೂಕಿನಲ್ಲಿ ಹೇಳಿಕೊಳ್ಳುವ ನೀರಿನ ಮೂಲಗಳಿಲ್ಲದ ಪರಿಣಾಮ ರೈತ ಸಮೂಹ ಮಳೆಆಶ್ರಿತ ಮತ್ತು ಕೊಳವೆಬಾವಿ ನೀರನ್ನು ಆಶ್ರಯಿಸಿ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಈ ಬಾರಿಯ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ರೈತರು ಹಿಂಗಾರು ಬೆಳೆಯನ್ನು ನೆಚ್ಚಿಕೊಂಡು ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಆದರೆ ಹಿಂಗಾರು ಮಳೆ ಸಹ ರೈತರಲ್ಲಿನ ಕೊನೆಯ ಭರವಸೆಯನ್ನು ಹುಸಿಗೊಳಿಸಿದೆ. ಹೀಗಾಗಿ ನೀರಾವರಿ ಜಮೀನಿನಲ್ಲಿ ವಿದ್ಯುತ್ ನೆಚ್ಚಿಕೊಂಡು ಬಿತ್ತನೆ ಕಾರ್ಯವನ್ನು ಮಾಡಿದ್ದ ರೈತ ಸಮೂಹಕ್ಕೆ ಹೆಸ್ಕಾಂ ರಾತ್ರಿ ವೇಳೆ ಪವರ್ ಕಟ್ ಮಾಡುವ ಮೂಲಕ ರೈತರಿಗೆ ಕರೆಂಟ್ ಶಾಕ್ ನೀಡಿದೆ.
ತಾಲೂಕಿನ ನೀರಾವರಿ ಜಮೀನುಗಳಲ್ಲಿನ ಬದುಕು ಕಟ್ಟಿಕೊಂಡಿರುವ ರೈತರು ಗ್ರಾಮಗಳಲ್ಲಿ ಮನೆ ಮಾಡುವುದು ತೀರಾ ಅಪರೂಪ. ಹೀಗಾಗಿ ತೋಟದಲ್ಲಿ ಮನೆ ಮಾಡಿ ರೈತ ಕುಟುಂಬವು ಜೀವನ ನಡೆಸುತ್ತಿವೆ. ಸಹಜವಾಗಿ ತೋಟವೆಂದರೆ ತೋಳ, ನರಿ, ಚಿರತೆ, ಹಾವು, ಚೇಳು ಸೇರಿ ಇತರ ಕ್ರಿಮಿಕೀಟಗಳು ಓಡಾಟ ಸಾಮಾನ್ಯವಾಗಿರುತ್ತದೆ. ಇಂತಹ ಸ್ಥಿತಿಯಲ್ಲಿ ರಾತ್ರಿವೇಳೆ ವಿದ್ಯುತ್ ನಿಲುಗಡೆಯಾದರೆ ರೈತರು ಪ್ರತಿಕ್ಷಣವು ಭಯದಲ್ಲಿ ಜೀವಿಸಬೇಕಾಗಿದೆ ಎಂದು ತಾಲೂಕಿನ ರೈತರು ಅಳಲು ತೋಡಿಕೊಳ್ಳುವುದರ ಜತೆಗೆ ಇದೇ ಪರಿಸ್ಥಿತಿ ಮುಂದುವರೆದರೆ ಪ್ರತಿಭಟನೆ ಮಾಡುವುದು ಅನಿವಾರ್ಯ ಎನ್ನುವ ಎಚ್ಚರಿಕೆಯನ್ನು ಹೆಸ್ಕಾಂಗೆ ರವಾನಿಸುತ್ತಿದ್ದಾರೆ."ಕಳೆದ ವರ್ಷ ಗಜೇಂದ್ರಗಡ ಪಟ್ಟಣದ ಉಣಚಗೇರಿ ಜಮೀನುಗಳ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಸಲು ಆಗ್ರಹಿಸಿ ರೈತರು ಹೆಸ್ಕಾಂ ಎದುರು ಕೈಗೊಂಡ ಅನಿರ್ದಿಷ್ಟಾವಧಿ ಹೋರಾಟಕ್ಕೆ ಪ್ರಗತಿಪರರು ಸೇರಿ ಕಾಂಗ್ರೆಸ್ ಮುಖಂಡರು ಬೆಂಬಲಿಸಿದ್ದರು. ಈಗ ತಾಲೂಕಿನ ರೈತರ ಜಮೀನುಗಳಿಗೆ ಕಳೆದ ೪ ದಿನಗಳಿಂದ ರಾತ್ರಿ ಇಡೀ ವಿದ್ಯುತ್ ಪೂರೈಕೆ ನಿಲ್ಲಿಸಿದ್ದನ್ನು ವಿರೋಧಿಸಿ ಅಂದು ಹೋರಾಟ ನಡೆಸಿದವರು ಇಂದು ಹೋರಾಟ ನಡೆಸಲು ಮುಂದಾಗುತ್ತಿಲ್ಲವೇಕೆ ಎಂದು ಬಿಜೆಪಿ ನಾಯಕಿ ಸಂಯುಕ್ತಾ ಬಂಡಿ ಪ್ರಶ್ನಿಸಿದ್ದಾರೆ.
"ತಾಲೂಕಿನ ನೀರಾವರಿ ತೋಟಗಳಿಗೆ ರಾತ್ರಿವೇಳೆ ವಿದ್ಯುತ್ ನಿಲುಗಡೆಯ ಸಮಸ್ಯೆ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತಂದಿದ್ದು, ಮೂರ‍್ನಾಲ್ಕು ದಿನದಲ್ಲಿ ಸಂಬಂಧಿಸಿದ ಸಚಿವರನ್ನು ಭೇಟಿಯಾಗಿ ವಿದ್ಯುತ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಉಣಚಗೇರಿ ಪಂಪ್‌ಸೆಟ್ ಬಳಕೆದಾರರ ಸಂಘ ಅಧ್ಯಕ್ಷಮುತ್ತಣ್ಣ ಮ್ಯಾಗೇರಿ ಹೇಳಿದ್ದಾರೆ. "ತಾಲೂಕಿನ ಜಮೀನುಗಳ ಮನೆಗಳಿಗೆ ವಿದ್ಯುತ್ ಅಭಾವದಿಂದ ಕಳೆದ ಕೆಲ ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆಯಾಗಿದ್ದು, ಕೆಲ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಗಜೇಂದ್ರಗಡ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲಕಪ್ಪನವರ ಹೇಳಿದ್ದಾರೆ.