ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಮಹಾದಾಸೋಹ ಪ್ರಾರಂಭಿಸಿದಾಗಿನಿಂದ ಅವರು ಈ ರೀತಿ ಪಾಲಕ್ ಸೇವೆ ಮಾಡುತ್ತಿದ್ದಾರೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಮಹಾದಾಸೋಹಕ್ಕಾಗಿ ಇಲ್ಲೊಬ್ಬ ರೈತ ತಮ್ಮ ಒಂದು ಎಕರೆ ತೋಟದಲ್ಲಿ ಪಾಲಕ್ ಬೆಳೆದು, ಕಟಾವು ಮಾಡಿ ತಂದು ಕೊಡುತ್ತಿದ್ದಾರೆ.

ಹೌದು, ನಿತ್ಯವೂ 3 ಸಾವಿರ ಪಾಲಕ್ ಕಟ್ಟುಗಳನ್ನು ತಾಲೂಕಿನ ಚಿಕ್ಕಸಿಂದೋಗಿ ಗ್ರಾಮದ ರೈತ ಈರಣ್ಣ ರಡ್ಡೇರ ತಂದು ಅರ್ಪಿಸುತ್ತಿದ್ದಾರೆ. ದಾಸೋಹ ಪ್ರಾರಂಭವಾದ ದಿನದಿಂದ ನಿತ್ಯವೂ ತಮ್ಮ ಹೊಲದಲ್ಲಿ ದಾಸೋಹಕ್ಕಾಗಿಯೇ ಬೆಳೆದಿರುವ ಪಾಲಕ್‌ನ್ನು ತಾನೇ ಕೂಲಿಯಾಳ ಮೂಲಕ ಕಟಾವು ಮಾಡಿಕೊಂಡು ಬಂದು, ಅರ್ಪಿಸುತ್ತಿದ್ದಾರೆ. ಪ್ರಾರಂಭದಲ್ಲಿ 1, 2 ಸಾವಿರ ಕಟ್ಟು ತಂದು ಕೊಡುತ್ತಾರೆ. ಆನಂತರ ಅದನ್ನು ಕ್ರಮೇಣ ಹೆಚ್ಚಳ ಮಾಡುತ್ತಾ ಬಂದು ಕೊಡುತ್ತಿದ್ದಾರೆ. ರಥೋತ್ಸವದ ದಿನ ಮತ್ತು ನಂತರ ನಿತ್ಯವೂ ಮೂರು ಸಾವಿರ ಕಟ್ಟು ತಂದು ಕೊಡುತ್ತಾರೆ.

ಹದಿನೆಂಟು ವರ್ಷಗಳ ಸೇವೆ:ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಮಹಾದಾಸೋಹ ಪ್ರಾರಂಭಿಸಿದಾಗಿನಿಂದ ಅವರು ಈ ರೀತಿ ಪಾಲಕ್ ಸೇವೆ ಮಾಡುತ್ತಿದ್ದಾರೆ. ಈಗ ಜಾತ್ರೆಗಾಗಿ ಒಂದು ಎಕರೆ ಪಾಲಕ್ ಬೆಳೆದು ಅದೆಲ್ಲವನ್ನು ಮಹಾದಾಸೋಹಕ್ಕೆ ಸಲ್ಲಿಸುತ್ತಾರೆ. ಹಾಗಾಗಿ ತರಕಾರಿ ಖರೀದಿಸುವುದೇ ಅಪರೂಪ ಎನ್ನುವಂತೆ ಭಕ್ತರು ಸಮರ್ಪಿಸುತ್ತಿದ್ದಾರೆ.

ಸೇವೆಗೆ ಪೈಪೋಟಿ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ವದಲ್ಲಿ ಧನ, ಧಾನ್ಯ ತಂದು ಕೊಡುವ ಭಕ್ತರು ಪೈಪೋಟಿಯಲ್ಲಿ ಸೇವೆ ಮಾಡುತ್ತಾರೆ. ಲಕ್ಷ ಲಕ್ಷ ಭಕ್ತರಿಗೆ ಪ್ರಸಾದ ಬಡಿಸುವ ಈ ಮಹಾದಾಸೋಹದಲ್ಲಿ ಅಡುಗೆ ಸಿದ್ಧ ಮಾಡುವುದರಿಂದ ಹಿಡಿದು ಬಡಿಸುವುದು ಎಲ್ಲರೂ ಸೇವೆ ಮಾಡುವವರು. ಯಾವುದೇ ನಿರೀಕ್ಷೆ ಇಲ್ಲದೆ ನಿತ್ಯವೂ ಸಾವಿರಾರು ಜನರು ಸೇವೆ ಮಾಡುತ್ತಾರೆ. ಸೇವೆಗೆ ಅವಕಾಶ ನೀಡಿ ಎಂದು ದುಂಬಾಲು ಬಿದ್ದಿರುತ್ತಾರೆ.

ನಮ್ಮ ಭಕ್ತಿಯಿಂದ ಮಾಡುತ್ತಿರುವ ಸೇವೆಯಾಗಿದೆ. ಮಹಾದಾಸೋಹಕ್ಕಾಗಿಯೇ ಒಂದು ಎಕರೆ ಪಾಲಕ್ ಬೆಳೆದಿದ್ದು, ಅದೆಲ್ಲವನ್ನು ನಿತ್ಯ ನಡೆಯುವ ಮಹಾದಾಸೋಹಕ್ಕೆ ಅರ್ಪಿಸುತ್ತೇವೆ. ನಿತ್ಯವೂ ಕಟಾವು ಮಾಡಿಕೊಂಡು ಬರುವುದೇ ನಮ್ಮ ಕಾಯಕ ಎಂದು ಚಿಕ್ಕಸಿಂದೋಗಿ ಗ್ರಾಮದ ಈರಣ್ಣ ರಡ್ಡೇರ ತಿಳಿಸಿದ್ದಾರೆ.

ಈರಣ್ಣ ರಡ್ಡೇರ್ ಅವರಂತೆ ಅನೇಕರು ಪ್ರತಿ ವರ್ಷವೂ ಸೇವೆ ಮಾಡುತ್ತಾರೆ. ಹೀಗಾಗಿಯೇ ಮಹಾದಾಸೋಹದಲ್ಲಿ ಲಕ್ಷ ಲಕ್ಷ ಭಕ್ತರಿಗೆ ಪ್ರಸಾದ ಸಾಂಗವಾಗಿ ನಡೆಯುತ್ತದೆ ಎಂದು ಮಹಾದಾಸೋಹ ಉಸ್ತುವಾರಿ ರಾಮನಗೌಡ ತಿಳಿಸಿದ್ದಾರೆ.