ಕಾರ್ಖಾನೆಯ 1700 ರೈತರಿಗೆ ಸುಮಾರು 60 ಲಕ್ಷ ಹಣವನ್ನು ಪಾವತಿ ಮಾಡಬೇಕಿದೆ. ಜುಲೈ 30 ರಂದು 10 ಮಂದಿ ರೈತರಿಗೆ ಹಣದ ಚೆಕ್ ನೀಡುವ ಮೂಲಕ ಆರಂಭದಲ್ಲಿ ಶೂರತ್ವ ಪ್ರದರ್ಶಿಸಿದ ಅಧ್ಯಕ್ಷರು, ನಂತರದಲ್ಲಿ ಉಳಿದ ರೈತರಿಗೆ ಹಣ ಬಿಡುಗಡೆ ಮಾಡುವಲ್ಲಿ ದಿವ್ಯ ನಿರ್ಲಕ್ಷ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮೈಷುಗರ್ ಕಾರ್ಖಾನೆ ವತಿಯಿಂದ ರೈತರಿಗೆ ನೀಡಬೇಕಾದ ₹50 ಪ್ರೋತ್ಸಾಹ ಧನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ರೈತ ಮುಖಂಡರು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರನ್ನು ಒತ್ತಾಯಿಸಿದರು.ಜುಲೈ ತಿಂಗಳಲ್ಲೇ ₹50 ಪ್ರೋತ್ಸಾಹ ಧನವನ್ನು ರೈತರಿಗೆ ನೀಡುವಂತೆ ಸರ್ಕಾರ ಆದೇಶಿಸಿದ್ದರೂ ಸೆಪ್ಟೆಂಬರ್ ಮುಗಿದರೂ ಇದುವರೆಗೂ ಕಾರ್ಖಾನೆ ವತಿಯಿಂದ ಹಣ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಕಾರ್ಖಾನೆಯ 1700 ರೈತರಿಗೆ ಸುಮಾರು ₹60 ಲಕ್ಷ ಹಣವನ್ನು ಪಾವತಿ ಮಾಡಬೇಕಿದೆ. ಜುಲೈ 30 ರಂದು 10 ಮಂದಿ ರೈತರಿಗೆ ಹಣದ ಚೆಕ್ ನೀಡುವ ಮೂಲಕ ಆರಂಭದಲ್ಲಿ ಶೂರತ್ವ ಪ್ರದರ್ಶಿಸಿದ ಅಧ್ಯಕ್ಷರು, ನಂತರದಲ್ಲಿ ಉಳಿದ ರೈತರಿಗೆ ಹಣ ಬಿಡುಗಡೆ ಮಾಡುವಲ್ಲಿ ದಿವ್ಯ ನಿರ್ಲಕ್ಷ ವಹಿಸಿರುವುದೇಕೆ ಎಂದು ಪ್ರಶ್ನಿಸಿದರು.ಗೌರಿ ಗಣೇಶ ಹಬ್ಬವನ್ನು ಹಣವಿಲ್ಲದೆ ರೈತರು ಸಾಲ ಮಾಡಿ ಆಚರಿಸಿದ್ದಾರೆ. ಇದೀಗ ಪಿತೃಪಕ್ಷ ಸಮೀಪದಲ್ಲಿದೆ. ಈಗಲೂ ರೈತರಿಗೆ ಕಾರ್ಖಾನೆ ವತಿಯಿಂದ ಹಣ ಬಿಡುಗಡೆ ಮಾಡುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಬರಗಾಲದ ನಡುವೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಬೆಳೆ ಬೆಳೆಯಲಾಗದೆ, ಕಬ್ಬಿನ ಹಣವೂ ಬಾರದಿರುವುದರಿಂದ ಆರ್ಥಿಕ ದುಸ್ಥಿತಿಯಲ್ಲಿದ್ದಾರೆ ಎಂದು ರೈತರ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟರು.
ಸರ್ಕಾರದ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡದ ಖಾಸಗಿ ಕಾರ್ಖಾನೆಗಳಿಗೆ ಮುತ್ತಿಗೆ ಹಾಕುವಂತೆ ನೀವೇ ಕರೆ ನೀಡಿದ್ದೀರಿ. ಸರ್ಕಾರಿ ಸ್ವಾಮ್ಯದ ಕಂಪನಿಯೇ ಸರ್ಕಾರದ ಹಣವನ್ನು ಬಿಡುಗಡೆ ಮಾಡುವಲ್ಲಿ ವಿಫಲವಾಗಿರುವುದು ವಿಪರ್ಯಾಸವಾಗಿದೆ. ಈಗ ಕಾರ್ಖಾನೆ ಹಣವನ್ನು ಬಿಡುಗಡೆ ಮಾಡದಿದ್ದರೆ ರೈತರು ಮುತ್ತಿಗೆ ಹಾಕುವುದು ಅನಿವಾರ್ಯವಾಗಲಿದೆ. ಅದಕ್ಕೆ ಅವಕಾಶವಾಗದಂತೆ ಶೀಘ್ರವೇ ಹಣ ಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ಅಧ್ಯಕ್ಷರನ್ನು ಆಗ್ರಹ ಪಡಿಸಿದರು.ರೈತ ಮುಖಂಡರ ಅಹವಾಲುಗಳನ್ನು ಆಲಿಸಿದ ಅಧ್ಯಕ್ಷ ಸಿ.ಡಿ. ಗಂಗಾಧರ್ ಮಾತನಾಡಿ, ಸಕ್ಕರೆಗೆ ಹಿಂದೆಂದಿಗಿಂತಲೂ ಉತ್ತಮ ಬೆಲೆ ಬಂದಿದೆ. ಒಳ್ಳೆಯ ಬೆಲೆಗೆ ಸಕ್ಕರೆ ಮಾರಾಟವಾಗುತ್ತಿದೆ. ಕಾರ್ಖಾನೆಯಲ್ಲಿರುವ ಸಕ್ಕರೆ ಮಾರಾಟಕ್ಕೆ ಅನುಮತಿಯು ದೊರಕಿರುವುದರಿಂದ ಈ ವಾರದಲ್ಲಿ ಸಕ್ಕರೆ ಮಾರಾಟ ಮಾಡಿ ಹಣ ಪಾವತಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಗರಂ ಆದ ರೈತ ಮುಖಂಡರು, ಈ ಹಿಂದೆಯೇ ಎರಡು ಬಾರಿ ಸಕ್ಕರೆ ಮಾರಾಟಕ್ಕೆ ಅನುಮತಿ ತೆಗೆದುಕೊಂಡು ಬಂದಿದ್ದೀರಿ ಆ ಹಣವನ್ನು ಏನು ಮಾಡಿದಿರಿ ಎಂದು ಪ್ರಶ್ನಿಸಿದಾಗ, ಆ ಹಣವನ್ನು ಕಬ್ಬು ಕಡಿಯಲು ಬಂದ ಕೂಲಿ ಕಾರ್ಮಿಕರಿಗೆ ಹಾಗೂ ಕಬ್ಬು ಪೂರೈಸಿದ ರೈತರಿಗೆ ನೀಡಲಾಗಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿರುವ ಬಗ್ಗೆ ನಮಗೂ ಅರಿವಿದೆ. ಆದರೆ ಈಗ ಸಕ್ಕರೆ ಮಾರಾಟಕ್ಕೆ ಅನುಮತಿ ದೊರಕಿರುವುದರಿಂದ ಆದಷ್ಟು ಬೇಗ ಸಕ್ಕರೆಯನ್ನು ವಿಲೇವಾರಿ ಮಾಡಿ ರೈತರಿಗೆ ಹಣ ಪಾವತಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ಇಂಡವಾಳು ಚಂದ್ರಶೇಖರ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಸಾತನೂರು ವೇಣುಗೋಪಾಲ್, ಗೌರವಾಧ್ಯಕ್ಷ ಕೀಲಾರ ಕೃಷ್ಣ, ತುಂಬಕೆರೆ ಮಂಜುನಾಥ್, ಕೀಲಾರ ಪ್ರದೀಪ್, ಮತ್ತಿತರರಿದ್ದರು.