ರ್ಕಾರದ ರಿಯಾಯಿತಿ ದರದ ಬೀಜ ನಂಬಿ ಬಂದರೆ ನಮಗೆ ದ್ರೋಹ
ಕುಕನೂರು: ಮುಂಗಾರು ಹಂಗಾಮಿಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಇಲ್ಲಿನ ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ವಿತರಿಸಲು ಕಳಪೆ ಗುಣಮಟ್ಟದ ಹೆಸರು ಬೀಜ ದಾಸ್ತಾನು ಮಾಡಿರುವುದನ್ನು ಖಂಡಿಸಿ ಸ್ಥಳೀಯ ರೈತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಕನೂರಿನ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಮುಂಗಾರು ಬೆಳೆ ಹೆಸರು ಮತ್ತು ತೊಗರೆ ಬೀಜ ವಿತರಣೆ ಮಾಡುವುದಕ್ಕಾಗಿ ಸಂಗ್ರಹಣೆ ಮಾಡಿದ್ದ 2,400 ಕೆಜಿ ಹೆಸರು ಬೀಜ ಕಳಪೆ ಗುಣಮಟ್ಟದಾಗಿದೆ ಎಂದು ಕುಕನೂರು ತಾಲೂಕಿನ ರೈತ ಮುಖಂಡರು ಖಂಡಿಸಿ ವಿರೋಧ ವ್ಯಕ್ತಪಡಿಸಿದರು.ರೈತ ಮುಖಂಡ ದೇವಪ್ಪ ಸೋಬಾನದ ಮಾತನಾಡಿ, ಸರ್ಕಾರದ ರಿಯಾಯಿತಿ ದರದ ಬೀಜ ನಂಬಿ ಬಂದರೆ ನಮಗೆ ದ್ರೋಹ ಬಗೆಯಲಾಗುತ್ತಿದೆ.ಕೀಟಬಾಧೆ, ಧೂಳು ಮಿಶ್ರಿತ ಬೀಜ, ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ನೂರಾರು ಚೀಲ ಹೆಸರು ಬೀಜಗಳು ಪೂರೈಕೆಯಾಗಿವೆ. ಆದರೆ, ವಿತರಣೆಗೆ ಮುನ್ನ ಬೀಜಗಳ ಗುಣಮಟ್ಟ ಪರಿಶೀಲಿಸಿದ ರೈತರಿಗೆ ತೀವ್ರ ನಿರಾಶೆಯಾಗಿದೆ ಎಂದರು.
ಈ ಬೀಜ ಬಿತ್ತಿದರೆ ಮೊಳಕೆಯೊಡೆಯುವ ಗ್ಯಾರಂಟಿ ಇಲ್ಲ. ಒಂದು ವೇಳೆ ಮೊಳಕೆ ಬಂದರೂ ರೋಗಬಾಧೆ ಗ್ಯಾರಂಟಿ. ಕಷ್ಟಪಟ್ಟು ಭೂಮಿ ಹದಗೊಳಿಸಿದ ನಮಗೆ ಅಧಿಕಾರಿಗಳು ಇಂತಹ ಕಳಪೆ ಬೀಜ ನೀಡಿ ಕೈ ತೊಳೆದುಕೊಳ್ಳಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಯಲಬುರ್ಗಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಮೋದ್ ಕುಮಾರ್ ತುಂಬಳ ಈ ಬಗ್ಗೆ ಪ್ರತಿಕ್ರಿಯಿಸಿ, ಬೀಜಗಳ ಗುಣಮಟ್ಟದ ಕುರಿತು ರೈತರು ಆಕ್ಷೇಪ ಎತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ವಿತರಣೆ ಸ್ಥಗಿತಗೊಳಿಸಲಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು, ಬೀಜಗಳ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ರೈತರಿಗೆ ಯಾವುದೇ ಅನ್ಯಾಯವಾಗಲು ಬಿಡುವುದಿಲ್ಲ, ಶೀಘ್ರದಲ್ಲೇ ಪರ್ಯಾಯ ಗುಣಮಟ್ಟದ ಬೀಜದ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರಮುಖರಾದ ಶರಣಪ್ಪ ಚಂಡೂರ, ಬಸವರಾಜ ದಿವಟರ, ಈಶಪ್ಪ ಶಬರದ, ಬಸವರಾಜ ಇಬೇರಿ, ದೊಡ್ಡ ಶರಣಪ್ಪ ಚಂಡೂರ, ಯಲ್ಲಪ್ಪ ಕಲಾಲ್ ಇತರರಿದ್ದರು.