ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ರೈತರ ಕುರಿತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಲಘು ಹೇಳಿಕೆ ವಿರೋಧಿಸಿ ಸಚಿವರ ಪ್ರತಿಕೃತಿ ದಹಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.ರಾಜ್ಯ ರೈತ ಸಂಘದ ಸಮೂಹ ಸಂಘಟನೆಗಳ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಲ್ಲಿ ಸೇರಿದ ರೈತ ಕಾರ್ಯಕರ್ತರು ಸಚಿವ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಕಾರ್ಯಕರ್ತರ ದಿಢೀರ್ ಪ್ರತಿಭಟನೆಯಿಂದಾಗಿ ಬೆಂಗಳೂರು- ಮೈಸೂರು ಹೆದ್ದಾರಿ ಹಾಗೂ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಂಸದೆ ಸುಮಲತಾ ಅಂಬರೀಶ್ ಹಾಗೂ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.ಇದೇ ವೇಳೆ ರೈತರ ರಸ್ತೆ ತಡೆಯನ್ನು ಭೇದಿಸಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರನಿಗೆ ರೈತರ ಗುಂಪೊಂದು ತರಾಟೆಗೆ ತೆಗೆದುಕೊಂಡು ಹಲ್ಲೆ ನಡೆಸಿದ ಪ್ರಸಂಗವೂ ಜರುಗಿತು.
ಮೇಲಿಂದ ಮೇಲೆ ಬರಗಾಲ ಬರಲಿ ಬಂದರೆ ಸಾಲ ಮನ್ನಾ ಆಗುತ್ತೆ ಎಂದು ರೈತರು ನಿರೀಕ್ಷೆ ಮಾಡುತ್ತಿದ್ದಾರೆ ಎಂದು ಲಘುವಾಗಿ ಮಾತನಾಡಿರುವ ಸಕ್ಕರೆ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರೈತ ಮುಖಂಡರು ಒತ್ತಾಯಿಸಿದರು.ರೈತರು ಈ ದೇಶದ ಜನರಿಗೆ ಅನ್ನ ಹಾಕುವ ಪ್ರವೃತ್ತಿ ಉಳ್ಳವರು ಹೊರತು ಬೇಡುವವರಲ್ಲ. ಇಂತಹ ರೈತ ಕುಲವನ್ನು ಟೀಕಿಸಿರುವ ಪಾಟೀಲ್ ಜನಪ್ರತಿ ನಿಧಿಯಾಗಲು ಯೋಗ್ಯರಲ್ಲ. ಇವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಧರಣಿ ನಿರತ ರೈತ ಮುಖಂಡರು ಒತ್ತಾಯಿಸಿದರು.
ರಾಜ್ಯವನ್ನು ಕಾಡುತ್ತಿರುವ ಭೀಕರ ಬರಗಾಲದಿಂದ ರೈತರು ಬೆಳೆದ ಬೆಳೆಗಳು ಕೈಗೆ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಸಾಲಮನ್ನಾ ಮಾಡುವ ಹಕ್ಕುತ್ತಾಯಗಳನ್ನು ಸದನದಲ್ಲಿ ಮಂಡಿಸಬೇಕಾದ ಸಚಿವರು ರೈತರ ಬಗ್ಗೆ ಲಘುವಾಗಿ ಮಾತನಾಡಿ ರೈತರ ಕುಲಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.ಸಚಿವರನ್ನು ಸಂಪುಟದಿಂದ ವಜಾ ಮಾಡಿದಿದ್ದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ರೈತ ಮುಖಂಡ ಸೋಶಿ ಪ್ರಕಾಶ್ ಎಚ್ಚರಿಕೆ ನೀಡಿದರು. ನಂತರ ತಹಸೀಲ್ದಾರ್ ಸೋಮಶೇಖರ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡ ಪ್ರತಿಭಟನಾ ರೈತರು ಬೇಡಿಕೆಗಳ ಕುರಿತಂತೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎರಗನಹಳ್ಳಿ ರಾಮಕೃಷ್ಣಯ್ಯ, ಅಣ್ಣೂರು ಮಹೇಂದ್ರ, ರಾಮಲಿಂಗೇಗೌಡ, ಪ್ರಭುಲಿಂಗ, ಸೀತಾರಾಮ, ವೆಂಕಟೇಶ, ಶಿವಲಿಂಗಯ್ಯ, ಚಂದ್ರಶೇಖರ್, ಕೆ.ಜಿ.ಉಮೇಶ್, ಪುಟ್ಟಸ್ವಾಮಿ, ಮಲ್ಲೇಶ್, ಕೆಂಪೇಗೌಡ, ಬಿಳಿಗೌಡ, ಬೋರಪ್ಪ, ಗೋಪಿನಾಥ್, ರಮೇಶ್ ಹಲವರು ಭಾಗವಹಿಸಿದ್ದರು.----------ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯ
ಕೆಆರ್‌ಎಸ್ ಜಲಾಶಯದಿಂದ ಜನಜಾನುವಾರುಗಳಿಗೆ ಹಾಗೂ ಬೆಳೆದ ನಿಂತಿರುವ ಬೆಳೆಗಳಿಗೆ ನಾಲೆಗಳ ಮೂಲಕ ಈ ಕೂಡಲೇ ನೀರು ಹರಿಸಬೇಕು ಎಂದು ರೈತರು ಆಗ್ರಹಿಸಿದರು.ತಹಸೀಲ್ದಾರ್‌ಗೆ ಮನವಿ, ರೈತರು ಬ್ಯಾಂಕ್‌ಗಳಿಂದ ಪಡೆದಿರುವ ಎಲ್ಲ ಸಾಲಮನ್ನಾ ಮಾಡಬೇಕು. ಬೆಳೆ ನಷ್ಟಕ್ಕೆ ಪ್ರತಿ ಎಕರೆಗೆ 25 ಸಾವಿರ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಕಬ್ಬಿನ ಬಾಕಿ ಕೊಡಲು ವಿಳಂಬ ಮಾಡುತ್ತಿರುವ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿ ವಿರುದ್ಧ ಸರ್ಕಾರ ಕ್ರಮ ಜರುಗಿಸುವ ಮೂಲಕ ಕಬ್ಬಿನ ಬಾಕಿ ಪಾವತಿಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.ಹೈನುಗಾರರಿಂದ ಖರೀದಿ ಮಾಡುವ ಪ್ರತಿ ಲೀಟರ್ ಹಾಲಿನ ದರವನ್ನು ಕಡಿತ ಮಾಡಿರುವ ಮನ್ ಮುಲ್ ವಿರುದ್ಧ ಕ್ರಿಮಿನಲ್ ಮೊಕದ್ದಮ್ಮೆ ಹೂಡುವಂತೆ ಪ್ರಕಾಶ್ ಆಗ್ರಹ ಪಡಿಸಿದರು.