ಬರದಿಂದ ಬೆಳೆ ಕೈಕೊಟ್ಟಿದೆ. ಕಬ್ಬು ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚ ಏರುತ್ತಿದ್ದರೂ ಕಬ್ಬಿನ ದರ ಮಾತ್ರ ರೈತರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ಮೌನವಾಗಿರುವುದು ಏಕೆ? ರೈತರ ಸಮಸ್ಯೆ ಹೇಳಿಕೊಳ್ಳಲು ಹೋದವರನ್ನೇ ಪೊಲೀಸ್ ಕಾವಲಿನಲ್ಲಿ ತಡೆಯುವುದು ಯಾವ ನ್ಯಾಯ? ಎಂದು ರೈತ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಆಳಂದ ಬರದಿಂದ ಬೆಳೆ ಕೈಕೊಟ್ಟಿದೆ. ಕಬ್ಬು ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಉತ್ಪಾದನಾ ವೆಚ್ಚ ಏರುತ್ತಿದ್ದರೂ ಕಬ್ಬಿನ ದರ ಮಾತ್ರ ರೈತರ ನಿರೀಕ್ಷೆಗೆ ತಕ್ಕಂತೆ ಇಲ್ಲ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಕೇಂದ್ರ ಸರ್ಕಾರ ಮೌನವಾಗಿರುವುದು ಏಕೆ? ರೈತರ ಸಮಸ್ಯೆ ಹೇಳಿಕೊಳ್ಳಲು ಹೋದವರನ್ನೇ ಪೊಲೀಸ್ ಕಾವಲಿನಲ್ಲಿ ತಡೆಯುವುದು ಯಾವ ನ್ಯಾಯ? ಎಂದು ರೈತ ಮುಖಂಡರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಿದ್ಧೇಶ್ವರ ಮಠದಲ್ಲಿ ಬರಪೀಡಿತ ರೈತರು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ನಡೆದ ಸಭೆಯಲ್ಲಿ ರೈತ ಮುಖಂಡ ಶ್ರೀಶೈಲ ಪಾಟೀಲ ಹಾಗೂ ಕಬ್ಬು ಬೆಳೆಗಾರರ ಸಂಘದ ಮುಖಂಡ ಮಂಜುನಾಥ ಬುಕ್ಕೆ ಮಾತನಾಡಿ, ಸಂಕಷ್ಟದಲ್ಲಿರುವ ರೈತರಿಗೆ ಕೇಂದ್ರ ಸರ್ಕಾರ ತಕ್ಷಣ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು. ಬರ ಪರಿಹಾರ ಯೋಜನೆಗಳ ಮೂಲಕ ರೈತರ ಕೈಹಿಡಿಯಬೇಕು ಎಂದು ಆಗ್ರಹಿಸಿದರು.ಪ್ರತಿ ಟನ್ಗೆ 500-600 ರು. ನಷ್ಟದ ಆರೋಪ: ಕಬ್ಬು ಬೆಳೆಗಾರರು ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ, ಸಾಗಣೆ ವೆಚ್ಚ ಹಾಗೂ ಕೃಷಿ ನಿರ್ವಹಣೆಯ ಭಾರದಿಂದ ಕಂಗೆಟ್ಟಿದ್ದಾರೆ. ಇಷ್ಟೆಲ್ಲ ಖರ್ಚು ಮಾಡಿದರೂ ಪ್ರತಿ ಟನ್ ಕಬ್ಬಿಗೆ ₹500ರಿಂದ ₹600ರವರೆಗೆ ಕಡಿಮೆ ದರ ನೀಡಲಾಗುತ್ತಿದೆ ಎಂಬುದು ರೈತರ ಆರೋಪ. ಸಕ್ಕರೆ ಕಾರ್ಖಾನೆಗಳು ಕಬ್ಬಿನ ಇಳುವರಿ (ರಿಕವರಿ) ಹೆಸರಿನಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಈ ಅನ್ಯಾಯಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಲು ಎಫ್ಆರ್ಪಿ (ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ) ಹಾಗೂ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಕಬ್ಬಿನ ಬೆಲೆ ನಿಗದಿಯಲ್ಲಿ ರೈತರ ಉತ್ಪಾದನಾ ವೆಚ್ಚ ಮತ್ತು ಬದುಕಿನ ಸಂಕಷ್ಟವನ್ನು ಪರಿಗಣಿಸಬೇಕು. ಇತರ ರಾಜ್ಯಗಳಲ್ಲಿ ಜಾರಿಯಲ್ಲಿರುವಂತೆ ಕರ್ನಾಟಕದಲ್ಲಿಯೂ ಎಥನಾಲ್ ಖರೀದಿಗೆ ಶೇ.80ರಷ್ಟು ಆದ್ಯತೆ ನೀಡಬೇಕು ಎಂಬ ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಆಳಂದ ತಾಲೂಕಿನ ಎನ್ಎಸ್ಎಲ್ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮು ಆರಂಭಿಸುವ ಮುನ್ನವೇ ಕಬ್ಬಿನ ದರ ಪ್ರಕಟಿಸಬೇಕು. ರೈತರಿಗೆ ನ್ಯಾಯಯುತ ಬೆಲೆ ಖಾತರಿಪಡಿಸಿದ ನಂತರವೇ ಕಾರ್ಖಾನೆ ಕಾರ್ಯಾರಂಭಿಸಬೇಕು ಎಂದು ಶ್ರೀಶೈಲ ಪಾಟೀಲ ಒತ್ತಾಯಿಸಿದರು. ರೈತರಾದ ದತ್ತಾತ್ರೆಯ ಬಾಬರೆ, ಈರಣ್ಣ ವರನಾಳೆ, ಶ್ರೀಕಾಂತ ಹತ್ತಿ, ಹುಬ್ಬಣ್ಣ ನಾಗದೆ, ಸೋಮಯ್ಯ ಸ್ವಾಮಿ, ಕಲ್ಯಾಣಿ ಪೂಜಾರಿ, ಶಿವಕುಮಾರ ನವದಗಿ ಹಾಗೂ ಪಿಕೆಪಿಎಸ್ ಅಧ್ಯಕ್ಷ ಭಾರತ ಪಾಟೀಲ ಉಪಸ್ಥಿತರಿದ್ದರು.