ಸುರಪುರ: ಟ್ರಾನ್ಸ್‌ಫಾರ್ಮರ್‌ಗಾಗಿ ರೈತ ಅಹೋರಾತ್ರಿ ಧರಣಿ

| Published : Feb 10 2024, 01:47 AM IST

ಸಾರಾಂಶ

ಕೆ. ತಳ್ಳಳ್ಳಿ ಗ್ರಾಮದ ರೈತ ನಿಂಗಣ್ಣ ದೊರೆ ಎಂಬುವರ ಹೊಲದಲ್ಲಿ ಅಳವಡಿಸಲಾದ ವಿದ್ಯುತ್ ಪರಿವರ್ತಕ ಸುಟ್ಟು ಒಂದು ತಿಂಗಳಾದರೂ ಜೆಸ್ಕಾಂ ಅಧಿಕಾರಿಗಳು ಕೊಡದೆ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಸುರಪುರ

ಒಂದು ತಿಂಗಳಿಂದ ವಿದ್ಯುತ್ ಪರಿವರ್ತಕವನ್ನು ಜೆಸ್ಕಾಂ ಇಲಾಖೆ ನೀಡದಿರುವುದನ್ನು ಖಂಡಿಸಿ ಗುರುವಾರ ಮತ್ತು ಶುಕ್ರವಾರ ಕಚೇರಿ ಎದುರು ತಾಲೂಕಿನ ಕೆ. ತಳ್ಳಳ್ಳಿ ಗ್ರಾಮದ ರೈತರೊಬ್ಬ ಆಹೋರಾತ್ರಿ ಧರಣಿ ನಡೆಸಿ, ಪ್ರತಿಭಟಿಸಿದರು.

ಕೆ. ತಳ್ಳಳ್ಳಿ ಗ್ರಾಮದ ರೈತ ನಿಂಗಣ್ಣ ದೊರೆ ಎಂಬುವರ ಹೊಲದಲ್ಲಿ ಅಳವಡಿಸಲಾದ ವಿದ್ಯುತ್ ಪರಿವರ್ತಕ ಸುಟ್ಟು ಒಂದು ತಿಂಗಳಾದರೂ ಜೆಸ್ಕಾಂ ಅಧಿಕಾರಿಗಳು ಕೊಡದೆ ನಿರ್ಲಕ್ಷ್ಯವಹಿಸಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು.ದೂರು: ನಿಂಗಣ್ಣನು ಟಿಸಿ ಸುಟ್ಟು ಹೋಗಿರುವ ಬಗ್ಗೆ 2023 ಡಿ.28ರಂದು ಜೆಸ್ಕಾಂ ಸಹಾಯವಾಣಿ 1012 ಕರೆ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಒಂದು ತಿಂಗಳಾದರೂ ಟಿಸಿ ನೀಡದೆ ಜ.25ರಂದು ರೈತ ನಿಂಗಣ್ಣಗೆ ಟಿಸಿ ನೀಡಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಸೆಕ್ಷನ್ ಆಫೀಸರ್ ಶಾಂತಪ್ಪ ಕುರಿಯವರು ದೂರಿಗೆ ಮುಕ್ತಾಯ ಮಾಡಿದ್ದಾರೆ. ತಮಗೆ ನೀಡಬೇಕಾದ ಟಿಸಿ ಬೇರೆಯವರಿಗೆ ಮಾರಾಟ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಅನ್ನೋದು ಅವರ ಆರೋಪ.

4 ಎಕರೆ ಜಮೀನಿನಲ್ಲಿ ಪಪ್ಪಾಯಿ, 2 ಎಕರೆಯಲ್ಲಿ ದಾಳಿಂಬೆ ಬೆಳೆದಿದ್ದಾರೆ. ಲಕ್ಷಾಂತರ ವೆಚ್ಚ ಮಾಡಿದ್ದಾರೆ. ಒಂದು ವಾರದಿಂದ ಕರೆಂಟ್ ಇಲ್ಲದೆ ಬೆಳೆಗಳು ಒಣಗುತ್ತಿರುವುದು ಇವರನ್ನು ಕುಗ್ಗಿಸಿತ್ತು.

ಇದರಿಂದ ಜೆಸ್ಕಾಂ ಅಧಿಕಾರಿಗಳ ನಡೆಗೆ ಬೇಸತ್ತು ಗುರುವಾರ ರಾತ್ರಿಯಿಂದಲೇ ಸುರಪುರ ನಗರದ ರಂಗಂಪೇಟೆಯಲ್ಲಿರುವ ಕೆಇಬಿ ಕಚೇರಿ ಎದುರು ಅಹೋರಾತ್ರಿ ಧರಣಿ ಆರಂಭಿಸಿದರು. ನಂತರ ಶುಕ್ರವಾರ ಮಧ್ಯಾಹ್ನದ ವೇಳೆಗೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡು ಆಕ್ರೋಶಗೊಂಡ ರೈತರು ವಿವಿಧ ಸಂಘಟನೆಗಳೊಂದಿಗೆ ಸೇರಿ ಕೆಇಬಿ ಕಚೇರಿಯ ಗೇಟ್‌ಗೆ ಬೀಗ ಜಡಿದು ಸುಡು ಬಿರು ಬಿಸಿಲಿನಲ್ಲಿ ಕುಳಿತುಕೊಂಡರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ರೈತ ಅಹೋರಾತ್ರಿ ಧರಣಿಗಿಳಿದ 24 ಗಂಟೆಗಳೊಳಗಾಗಿ ಟಿಸಿ ತೆಗೆದುಕೊಂಡು ಹೋಗಿ ರೈತನ ಜಮೀನಿನಲ್ಲಿ ಅಳವಡಿಸಿದ್ದಾರೆ.

ಪ್ರತಿಭಟನೆ ಸಂದರ್ಭದಲ್ಲಿ ರೈತ ಮುಖಂಡ ರಂಗನಗೌಡ ಬೈರಿಮಡ್ಡಿ, ಜೆಡಿಎಸ್ ಮುಖಂಡ ಶ್ರವಣ ಕುಮಾರ ನಾಯಕ, ಡಿ.ಎಸ್.ಎಸ್. ಮುಖಂಡ ಶಿವಲಿಂಗ ಹಸನಾಪುರ, ಶ್ರೀಕಾಂತ್ ದೊರೆ ಕಚಕನೂರ, ರಾಮನಗೌಡ ಬೈಲಾಪುರ, ಗೊಪರಡ್ಡಿ ಕಾಕರಗಲ್ಲ್, ಭೀಮಶಾ ಕಡಿಮನಿ, ದೇವಣ್ಣ ಕಡಿಮನಿ ಸೇರಿದಂತೆ ರೈತ ಸಂಘದ ಅಧ್ಯಕ್ಷರು ವಿವಿಧ ಗ್ರಾಮಗಳ ರೈತ ಮುಖಂಡರು ಇದ್ದರು.

ಹಣದ ಬೇಡಿಕೆ: ಈ ಹಿಂದೆ ಟಿಸಿ ಸುಟ್ಟಾಗ, ಬದಲಾಯಿಸಲು ಸಿಬ್ಬಂದಿ 7 ಸಾವಿರ ರು. ಗಳು ಬೇಡಿಕೆ ಇಟ್ಟಿದ್ದರು, ಹಣ ಇಲ್ಲದಿರುವ ಕಾರಣ ರೈತ ಟಿಸಿ ಅಳವಡಿಸಿ ಕೊಂಡಿರಲಿಲ್ಲ. ನಂತರ ಅದೇ ಟಿಸಿ ಯನ್ನು ಬೇರೊಬ್ಬ ರೈತನಿಗೆ ಅಳವಡಿಸಿದ್ದಾರೆ. ಒಂದು ವಾರದಿಂದ ಸರಿಯಾಗಿ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ, 7 ಗಂಟೆಗೆಳ ಕಾಲ ವಿದ್ಯುತ್ ನೀಡುತ್ತೇವೆ ಎಂದು ಹೇಳುತ್ತಾರೆ. ಆದರೆ 5 ಗಂಟೆಗಳ ಕಾಲ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ರೈತ ಮುಖಂಡರು ಆರೋಪಿಸಿದರು.

ರೈತ ಅಹೋರಾತ್ರಿ ಧರಣಿ ಕುಳಿತಿರುವುದು ನೋವು ತಂದಿದೆ. ರೈತನ ಜಮೀನಿನಲ್ಲಿ ಟಿಸಿ ಅಳವಡಿಸಿದ್ದೇವೆ. ತಾಲೂಕಿನಲ್ಲಿ ರೈತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ.

- ಅಶೋಕ ಚವ್ಹಾಣ, ಎಇಇ ಸುರಪುರ.