ಐಆರ್‌ಐಎಸ್‌ ರಿನಿವೇಬಲ್‌ ಗಾಳಿ ವಿದ್ಯುತ್‌ ಕಂಪನಿ ವಿರುದ್ಧ ರೈತನ ದೂರು

| Published : Jan 25 2025, 01:03 AM IST

ಐಆರ್‌ಐಎಸ್‌ ರಿನಿವೇಬಲ್‌ ಗಾಳಿ ವಿದ್ಯುತ್‌ ಕಂಪನಿ ವಿರುದ್ಧ ರೈತನ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ರಸ್ತೆ ನಿರ್ಮಾಣದ ವೇಳೆಯೆ ಅಪಾರ ಪ್ರಮಾಣದ ಮಳೆ ನೀರು ನನ್ನ ಹೊಲಕ್ಕೆ ನುಗ್ಗುತ್ತದೆ ಇದರಿಂದ ನನ್ನ ಜಮೀನಿಗೆ ಹಾನಿಯಾಗುತ್ತದೆ ಎಂದು ಹಲವಾರು ಬಾರಿ ಮನವಿ ಮಾಡಿದರೂ ಫ್ಯಾನ್ ಕಂಪನಿ ಸಿಬ್ಬಂದಿ ಮಾತ್ರ ಕ್ಯಾರೇ ಎಂದಿಲ್ಲ

ಶಿವಕುಮಾರ ಕುಷ್ಟಗಿ ಗದಗ

ಜಿಲ್ಲೆಯ ಕೊಟುಮಚಗಿ ಗ್ರಾಮದ ರೈತ ಹುಚ್ಚೀರಯ್ಯ ಬಳಗೇರಮಠ ಫ್ಯಾನ್ (ಗಾಳಿ ವಿದ್ಯುತ್‌ ಉತ್ಪಾದನಾ ಘಟಕ) ಅಳವಡಿಕೆಯಿಂದಾಗಿ ತಮಗಾಗಿರುವ ಹಾನಿ ತುಂಬಿಕೊಡುವಂತೆ ಐಆರ್‌ಐಎಸ್‌ ರಿನಿವೇಬಲ್‌ 2 ಕಂಪನಿ ವಿರುದ್ಧ ಗದಗ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.

ಕಳೆದ ಡಿಸೆಂಬರ್‌ ತಿಂಗಳಲ್ಲೇ ಲಿಖಿತ ಮನವಿ ಸಲ್ಲಿಸಿರುವ ರೈತ ಹುಚ್ಚೀರಯ್ಯ, ನನ್ನ 3 ಎಕರೆ ಜಮೀನು (ರಿಸನಂ- 464) ಅಬ್ಬಿಗೇರಿ ಗ್ರಾಮ ವ್ಯಾಪ್ತಿಯಲಿದೆ. ಇದೇ ಜಮೀನಿಗೆ ಹೊಂದಿಕೊಂಡು ಗಾಳಿ ವಿದ್ಯುತ್ ಫ್ಯಾನ್‌ ಅಳವಡಿಸಲು ನನ್ನ ಜಮೀನಿನ ಪಕ್ಕದಲ್ಲಿಯೇ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಮಳೆಗಾಲದಲ್ಲಿ ಅಕ್ಕಪಕ್ಕದ ಹೊಲದಲ್ಲಿನ ನೀರೆಲ್ಲ ನನ್ನ ಹೊಲಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ್ದಲ್ಲದೇ ನೂರಾರು ವರ್ಷಗಳಿಂದ ಫಲವತ್ತಾಗಿದ್ದ ಅಪಾರ ಪ್ರಮಾಣದ ಮಣ್ಣು ಕೊಚ್ಚಿಕೊಂಡು ಹೋಗಿದ್ದರಿಂದ ನನ್ನ ಜಮೀನು ಬರಡಾಗಿದೆ ಮತ್ತು ಉಳುಮೆ ಮಾಡಲು ಸಾಧ್ಯವಾಗದಷ್ಟು ಕೊರಕಲಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ರಸ್ತೆ ನಿರ್ಮಾಣದ ವೇಳೆಯೆ ಅಪಾರ ಪ್ರಮಾಣದ ಮಳೆ ನೀರು ನನ್ನ ಹೊಲಕ್ಕೆ ನುಗ್ಗುತ್ತದೆ ಇದರಿಂದ ನನ್ನ ಜಮೀನಿಗೆ ಹಾನಿಯಾಗುತ್ತದೆ ಎಂದು ಹಲವಾರು ಬಾರಿ ಮನವಿ ಮಾಡಿದರೂ ಫ್ಯಾನ್ ಕಂಪನಿ ಸಿಬ್ಬಂದಿ ಮಾತ್ರ ಕ್ಯಾರೇ ಎಂದಿಲ್ಲ. ದರ್ಪದಿಂದಲೇ ರಸ್ತೆ ನಿರ್ಮಿಸಿ ತಮ್ಮ ಕೆಲಸ ಕಾರ್ಯ ಪೂರ್ಣಗೊಳಿಸಿಕೊಂಡಿದ್ದಾರೆ ಎಂದಿದ್ದಾರೆ.

ಅಪಾರ ಬೆಳೆ ಹಾನಿ: ಕಂಪನಿ ಅಧಿಕಾರಿಗಳು ಮತ್ತು ಸ್ಥಳೀಯ ರಾಜಕೀಯ ಮುಖಂಡರು, ರೌಡಿಗಳು ಸೇರಿ ಮಾಡಿದ ಅವಾಂತರದಿಂದ ರೈತ ತನ್ನ ಜಮೀನಿನಲ್ಲಿ ಸಾವಿರಾರು ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಹಾಗೂ ಕೆಂಪು ಮೆಣಸಿನಕಾಯಿ, ಅಕ್ಕಪಕ್ಕದ ಜಮೀನು ಹಾಗೂ ರಸ್ತೆಯ ನೀರೆಲ್ಲ ನುಗ್ಗಿ ನಾಶವಾಗಿದೆ. ಈ ಕುರಿತು ಅಗತ್ಯ ದಾಖಲೆಗಳೊಂದಿಗೆ ಆಗಲೇ ಕಂಪನಿಯವರ ಗಮನಕ್ಕೆ ತಂದಾಗ ಸೂಕ್ತ ಪರಿಹಾರ ನೀಡುವುದಾಗಿ ಹೇಳಿ ಕಳಿಸಿದ್ದಾರೆ. ಇದುವರೆಗೂ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಯಿಂದ ಪರಿಹಾರ ಬಂದಿಲ್ಲ.

ಅಂದು ಕಂಪನಿ ಅಧಿಕಾರಿಗಳು ಸುಳ್ಳು ಹೇಳಿ ತಮ್ಮ ಕೆಲಸ ಕಾರ್ಯ ಪೂರ್ಣಗೊಳಿಸಿಕೊಂಡಿದ್ದಾರೆ. ಇದರಿಂದ ರೈತನ ಕುಟುಂಬಕ್ಕೆ ತೀವ್ರ ಅನ್ಯಾಯವಾಗಿದೆ ಇದನ್ನು ಪ್ರಶ್ನಿಸಿದರೆ ಕಂಪನಿ ಅಧಿಕಾರಿಗಳು ಈಗ ಪರಿಹಾರ ಕೊಡಲು ಬರುವುದಿಲ್ಲ ಎನ್ನುವ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಆದರೆ ಜಿಲ್ಲಾಡಳಿತದಿಂದಲೂ ಇದುವರೆಗೂ ರೈತನಿಗೆ ಮಾತ್ರ ನ್ಯಾಯ ಸಿಕ್ಕಿಲ್ಲ. ಹಾಗಾಗಿ ನೊಂದ ರೈತ ನ್ಯಾಯಬೇಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ರೈತನ ಮೇಲೆ ದೌರ್ಜನ್ಯ: ಗಾಳಿ ವಿದ್ಯುತ್ ಉತ್ಪಾದನಾ ಕಂಪನಿಯವರು ಹುಚ್ಚೀರಯ್ಯ ಅವರ ಜಮೀನಿಗೆ ಹೊಂದಿಕೊಂಡು ಮಳೆಗಾಲದಲ್ಲಿಯೇ ರಸ್ತೆ ನಿರ್ಮಿಸಿದ್ದಾರೆ. ಇದಕ್ಕೆ ರೈತ ಹಲವಾರು ಬಾರಿ ಅಡ್ಡಿ ಪಡಿಸಿದರೆ ಅವರ ಮೇಲೆ ದೌರ್ಜನ್ಯ ನಡೆಸಿ ಹೆದರಿಸಿದ್ದಾರೆ. ಇದರಿಂದ ಭಯಭೀಯತರಾದ ರೈತ ಗಾಳಿ ವಿದ್ಯುತ್ ಉತ್ಪಾದನಾ ಕಂಪನಿ ಸಂಚರಿಸುವ ರಸ್ತೆಯಲ್ಲಿ ಬೃಹತ್ ಟ್ರೆಂಚ್ (ತೆಗ್ಗು) ನಿರ್ಮಿಸಿ ವಾಹನ ಸಂಚಾರವಾಗದಂತೆ ತಡೆ ಮಾಡಿದ್ದಾರೆ. ಕಂಪನಿಯ ಕೆಲ ಅಧಿಕಾರಿಗಳು ಸ್ಥಳೀಯ ರೌಡಿಗಳನ್ನು ಸ್ಥಳಕ್ಕೆ ಕರೆಯಿಸಿ ರೈತ ಮತ್ತು ಅವನ ಕುಟುಂಬಸ್ಥರನ್ನು ಎಳೆದಾಡಿ ಹೆದರಿಸಿದ ಘಟನೆಯೂ ನಡೆದಿದೆ.

ಐಆರ್‌ಐಎಸ್‌ ಫ್ಯಾನ್ ಕಂಪನಿಯಿಂದ ನನಗೆ ಅನ್ಯಾಯವಾಗಿದೆ. ನನ್ನ ಹೊಲಕ್ಕೆ ಅಪಾರ ಪ್ರಮಾಣ ನೀರು ನುಗ್ಗಿ ಬೆಳೆಯೂ ನಾಶವಾಗಿದೆ. ಫಲವತ್ತಾದ ಮಣ್ಣು ಕೊಚ್ಚಿಹೋಗಿದೆ. ಜಿಲ್ಲಾಧಿಕಾರಿಗಳು ನನ್ನ ಮನವಿಯನ್ನು ಪರಿಶೀಲಿಸಿ ಕಂಪನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ನೊಂದ ರೈತ ಹುಚ್ಚೀರಯ್ಯ ಬಳಿಗೇರಮಠ ಹೇಳಿದ್ದಾರೆ.