ಕೃಷಿಕನ ಮಗಳು ಕೆ- ಸೆಟ್‌ ರಸಾಯನಶಾಸ್ತ್ರದಲ್ಲಿ ರಾಜ್ಯಕ್ಕೇ ಮೊದಲು

| Published : May 30 2024, 12:56 AM IST / Updated: May 30 2024, 11:56 AM IST

ಕೃಷಿಕನ ಮಗಳು ಕೆ- ಸೆಟ್‌ ರಸಾಯನಶಾಸ್ತ್ರದಲ್ಲಿ ರಾಜ್ಯಕ್ಕೇ ಮೊದಲು
Share this Article
  • FB
  • TW
  • Linkdin
  • Email

ಸಾರಾಂಶ

2024ರ ಜನೇವರಿ ತಿಂಗಳಲ್ಲಿ ಕೆಇಎ ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ- ಸೆಟ್‌) ಯಲ್ಲಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಪೂಜಾ ಹರಳಯ್ಯ ರಸಾಯನಶಾಸ್ತ್ರ ವಿಷಯದಲ್ಲಿ ರಾಜ್ಯಕ್ಕೇ ಮೊದಲ ರ್‍ಯಾಂಕ್‌ ಪಡೆದು ಸರ್ವರ ಗಮನ ಸೆಳೆದಿದ್ದಾಳೆ.

ಶೇಷಮೂರ್ತಿ ಅವಧಾನಿ

 ಕಲಬುರಗಿ :  2024ರ ಜನೇವರಿ ತಿಂಗಳಲ್ಲಿ ಕೆಇಎ ನಡೆಸಿದ್ದ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ- ಸೆಟ್‌) ಯಲ್ಲಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡ ಗ್ರಾಮದ ಪೂಜಾ ಹರಳಯ್ಯ ರಸಾಯನಶಾಸ್ತ್ರ ವಿಷಯದಲ್ಲಿ ರಾಜ್ಯಕ್ಕೇ ಮೊದಲ ರ್‍ಯಾಂಕ್‌ ಪಡೆದು ಸರ್ವರ ಗಮನ ಸೆಳೆದಿದ್ದಾಳೆ.

ಕರ್ನಾಟಕ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅರ್ಹತೆ ಹೊಂದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೆ- ಸೆಟ್‌ ಪರೀಕ್ಷೆ ನಡೆಸುತ್ತದೆ. ಇದನ್ನು ಶೈಕ್ಷಣಿಕ ವಲಯದಲ್ಲಿ ಪ್ರಮುಖ ಪರೀಕ್ಷೆಯಾಗಿ ಪರಿಗಣಿಸಲಾಗುತ್ತದೆ.

ಈ ಪರೀಕ್ಷೆಯಲ್ಲೇ ರಸಾಯನಶಾಸ್ತ್ರ ವಿಷಯದಲ್ಲಿ ಕಲಬುರಗಿಯ ಪೂಜಾ 300 ಅಂಕಗಳ ಪೈಕಿ 204 ಅಂಕಳನ್ನು ಪಡೆದು ಮೊದಲ ರ್‍ಯಾಂಕ್‌ ಗಿಟ್ಟಿಸಿದ್ದಾಳೆ.

ಪೂಜಾ ಹರಳಯ್ಯ ಜಿಲ್ಲೆಯ ಸೇಡಂ ತಾಲೂಕಿನ ಕಿಗಿಣಾ ನದಿ ತೀರದ ಮಳಖೇಡದ ನಿವಾಸಿ. ಈಕೆ ಎಸ್ಸೆಸ್ಸೆಲ್ಸಿಯವರೆಗೂ ಓದಿದ್ದೆಲ್ಲಾ ಸರಕಾರಿ ವ್ಯವಸ್ಥೆಯಲ್ಲೇ, ಅದೂ ಕೂಡಾ ಕನ್ನಡ ಮಾಧ್ಯಮದಲ್ಲೇ ಎಂಬುದು ಗಮನಾರ್ಹ ಸಂಗತಿ.

ಮಳಖೇಡದಲ್ಲೇ ಹೈಸ್ಕೂಲ್‌ವರೆಗೂ ಕನ್ನಡ ಮಾಧ್ಯಮದಲ್ಲಿ ಸರಕಾರಿ ಶಾಲೆಗಳಲ್ಲೇ ಓದಿದ್ದ ಪೂಜಾ ನಂತರ ಪಿಯುಸಿ ಸೈನ್ಸ್‌ ಕೂಡಾ ಸರಕಾರಿ ಶಾಲೆಯಲ್ಲೇ ಓದಿದವಳು. ನಂತರ ಕೇಂದ್ರೀಯ ವಿವಿ ಕಲಬುರಗಿಯಲ್ಲಿ ಪ್ರವೇಶ ಪಡೆದುಕೊಂಡು ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿನಿಯಾಗಿ 2023 ರಲ್ಲಿ ಸ್ನಾತಕೋತ್ತರ ಪದವಿ ಪಾಸಾದವಳು.

ನಿನ್ನೆ ಕೆಇಎ ತಾತ್ಕಾಲಿಕ ಕೆಎಸ್‍ಇಟಿ (ಕೆ-ಸೆಟ್) ಫಲಿತಾಂಶವನ್ನು ಪ್ರಕಟಿಸಿದೆ. ಪೂಜಾ ಹರಳಯ್ಯ ಇ‍ರು 300 ಅಂಕಗಳಿಗೆ 204 ಅಂಕಗಳನ್ನು ಗಳಿಸಿ ರಸಾಯನಶಾಸ್ತ್ರ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾಮಾನ್ಯ ಪತ್ರಿಕೆಯಲ್ಲಿ 100ಕ್ಕೆ 66 ಮತ್ತು ರಾಸಾಯನಿಕ ವಿಜ್ಞಾನದಲ್ಲಿ 200ಕ್ಕೆ 138 ಅಂಕ ಗಳಿಸಿದ್ದಾರೆ.

ಪೂಜಾ ಬಡ ಗ್ರಾಮೀಣ ಕುಟುಂಬದಿಂದ ಬಂದವರಾಗಿದ್ದು ಆಕೆಯ ತಾಯಿ ಮತ್ತು ತಂದೆ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೆಡ ಗ್ರಾಮದ ಕೃಷಿ ಕಾರ್ಮಿಕರು. ಕಠಿಣ ಪರಿಶ್ರಮಿ ಮತ್ತು ಬುದ್ಧಿವಂತ ಹುಡುಗಿ ಪೂಜಾ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 93.9 ಅಂಕಗಳೊಂದಿಗೆ ಸೇಡಂತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪೂಜಾ 2023 ರಲ್ಲಿ ಸಿಯುಕೆಯಿಂದ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದವಳು. ಪ್ರಸ್ತುತ ರಾಯಚೂರಿನ ಎಸ್ ಆರ್ ಕೆ ಕಾಲೇಜಿನಲ್ಲಿ ಬಿಎಡ್ ಓದುತ್ತಿರುವ ಪೂಜಾ ಕಳೆದ ವರ್ಷ ಡಿಸೆಂಬರ್‍ನಲ್ಲಿ ಯುಜಿಸಿ-ಸಿಎಸ್‍ಐಆರ್ ನವದೆಹಲಿ ನಡೆಸಿದ ಜೆಆರ್‍ಎಫ್ (ಜೂನಿಯರ್ ರಿಸರ್ಚ್ ಫೆಲೋ) ಪರೀಕ್ಷೆಯನ್ನು ಕೂಡ ಪಾಸಾಗಿದ್ದಾಳೆ.

‘ನಾನು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು ಅಥವಾ ಯಾವುದೇ ಉನ್ನತ ಐಐಟಿಯಲ್ಲಿ ಪಿಎಚ್‍ಡಿ ಮಾಡಲು ಬಯಸುತ್ತೇನೆ. ನನ್ನ ಗುರಿಯನ್ನು ಸಾಧಿಸಲು ನನ್ನ ಕುಟುಂಬ ಕೂಡ ನನಗೆ ಸಂಪೂರ್ಣ ಬೆಂಬಲ ನೀಡುತ್ತಿದೆ’ ಎಂದು ಅವರ ಭವಿಷ್ಯದ ಯೋಜನೆಯ ಬಗ್ಗೆ ಪೂಜಾ ಹೇಳಿದ್ದಾರೆ.

‘ನಾನು ಕನ್ನಡ ಮಾಧ್ಯಮದಿಂದ ಬಂದಿದ್ದೇನೆ ಮತ್ತು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಓದಿದ್ದೇನೆ. ಸಿಯುಕೆಯ ಶಿಕ್ಷಕರು ತಮ್ಮ ಉಪನ್ಯಾಸ ಮತ್ತು ಮಾರ್ಗದರ್ಶನದ ಮೂಲಕ ನನಗೆ ಬಹಳಷ್ಟು ಸಹಾಯ ಮಾಡಿದರು. ಬೋಧನೆ ಕೂಡ ಅತ್ಯುತ್ತಮವಾಗಿದೆ. ನನ್ನ ಶಿಕ್ಷಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ’ ಎಂದು ಹೇಳುವ ಪೂಜಾ ಹರಳಯ್ಯ ಸಂತಸದಲ್ಲಿದ್ದಾರೆ. ಮಗಳ ಸಾಧನೆಗೆ ತಂದೆ ಸೂರ್ಯಕಾಂತ ಹಾಗೂ ಆಕೆಯ ತಾಯಿ ಕೂಡಾ ಖುಷಿಯಲ್ಲಿ ಮುಳುಗಿದ್ದಾರೆ.

ಕೇಂದ್ರೀಯ ವಿವಿ ಕುಲಪತಿ ಬಟು ಸತ್ಯನಾರಾಯಣ, ಕುಲಸಚಿವ .ಆರ್.ಆರ್.ಬಿರಾದಾರ್, ಡೀನ್ ವೆಂಕಟರಮಣ ದೊಡ್ಡಿ ಹಾಗೂ ರಸಾಯನಶಾಸ್ತ್ರ ವಿಭಾಗದ ಅಧ್ಯಾಪಕರು ಪೂಜಾ ಹರಳಯ್ಯ ಸಾಧನೆಗೆ ಸಂತಸಪಟ್ಟಿದ್ದು ಆಕೆಯ ಮುಂದಿನ ಭವಿಷ್ಯಕ್ಕೆ ಶುಭ ಕೋರಿದ್ದಾರೆ.