ಯುಪಿಎಸ್‌ಸಿಯಲ್ಲಿ ರೈತನ ಮಗನಿಗೆ 529ನೇ ರ್‍ಯಾಂಕ್‌

| Published : Apr 23 2025, 12:32 AM IST

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ರೈತನ ಪುತ್ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 529ನೇ ರ್‍ಯಾಂಕ್‌ ಪಡೆದು ಸಾಧನೆ ಮಾಡಿದ್ದಾನೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಅಕ್ಕಿಮರಡಿ ಗ್ರಾಮದ ರೈತನ ಪುತ್ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 529ನೇ ರ್‍ಯಾಂಕ್‌ ಪಡೆದು ಸಾಧನೆ ಮಾಡಿದ್ದಾನೆ. ಪಾಂಡುರಂಗ ಸದಾಶಿವ ಕಂಬಳಿ ಯುಪಿಎಸ್ಸಿಯಲ್ಲಿ ಸಾಧನೆ ಮಾಡಿದ ಯುವಕ. ಕೃಷಿ ಕುಟುಂಬದಲ್ಲಿ ಜನಿಸಿದ ಪಾಂಡುರಂಗ ಅವರು ಗ್ರಾಮದ ಖಾಸಗಿ ಶಾಲೆಯಲ್ಲಿ ಪ್ರಾಥಮಿಕ, ಬಾದಾಮಿ ತಾಲೂಕಿನ ಕುಳಗೇರಿಯಲ್ಲಿನ ನವೋದಯ ಶಾಲೆಯಲ್ಲಿ (6-10ನೇ ತರಗತಿ) ಪ್ರೌಢಶಿಕ್ಷಣ, ರಬಕವಿ-ಬನಹಟ್ಟಿ ಸಮೀಪದ ಕೊಣ್ಣೂರ ಕಾಲೇಜಿನಲ್ಲಿ ಪಿಯು (ವಿಜ್ಞಾನ) ಅಧ್ಯಯನ ಮಾಡಿದ್ದಾರೆ. ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಎಂಜಿನಿಯರಿಂಗ್‌ (E&C) ಪದವಿ ಮುಗಿಸಿದ್ದು, ಐದು ಬಾರಿ ಪ್ರಿಲಿಮ್ಸ್ ಪಾಸ್ ಆಗಿ,ಮೂರು ಬಾರಿ ಸಂದರ್ಶನ ಹಂತದವರೆಗೆ ಹೋಗಿದ್ದ ಪಾಂಡುರಂಗ ದೆಹಲಿಯ ವೈಜಾರಾಮ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಿದ್ದರು.

ಸದಾಶಿವ ಕಂಬಳಿ ಅವರಿಗೆ ಮೂವರು ಮಕ್ಕಳಿದ್ದು, ಮೂವರು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಬೆಂಗಳೂರಿನ ಕಿರಿಯ ಸಹೋದರ ಲಕ್ಷ್ಮಣರಾವ್‌ ಆರ್‌.ವಿ. ಕಾಲೇಜಿನಲ್ಲಿಯೇ ಎಂಜಿನಿಯರಿಂಗ್‌ ಅಧ್ಯಯನ ಮಾಡುತ್ತಿದ್ದು, ಸಹೋದರಿ ರೂಪಾಲಿ ಬಿಎಎಂಎಸ್‌ ಮುಗಿಸಿದ್ದಾರೆ.