ರೈತನಿಗೆ ಗುಂಡು: ನಾಳೆ ಮಂಚೇನಹಳ್ಳಿ ತಾಲೂಕು ಬಂದ್‌

| Published : Apr 27 2025, 01:30 AM IST

ಸಾರಾಂಶ

ಆರೋಪಿ ಸಕಲೇಶ್‌ಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯ ಮಂಚೇನಹಳ್ಳಿ ಶಾಂತಿಯುತವಾಗಿ ಬಂದ್ ಮಾಡಲಾಗುತ್ತದೆ, ಇದಕ್ಕೆ ಯಾವುದೇ ಅಧಿಕಾರಿಗಳು ಅಡ್ಡಿ ಪಡಿಸಬಾರದೆಂದು ರೈತಸಂಘ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಂಚೇನಹಳ್ಳಿ ತಾಲೂಕಿನ ಕನಗಾನಕೊಪ್ಪ ಗ್ರಾಮದ ಬಳಿ ಕಲ್ಲು ಕ್ವಾರಿ ವಿಚಾರದಲ್ಲಿ ರೈತನ ಮೇಲೆ ಗುಂಡು ಹಾರಿಸಿರುವುದು ಖಂಡನೀಯ. ಕೂಡಲೆ ಕ್ವಾರಿ ಪರವಾನಿಗೆ ರದ್ದು ಪಡಿಸುವಂತೆ ಆಗ್ರಹಿಸಿ ಏ. 28ರಂದು ಸೋಮವಾರ ಮಂಚೇನಹಳ್ಳಿ ತಾಲೂಕು ಬಂದ್‌ಗೆ ಕರೆ ನೀಡಲಾಗಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ( ಪುಟ್ಟಣ್ಣಯ್ಯ ಬಣ)ರಾಜ್ಯ ಉಪಾಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ ತಿಳಿಸಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಿಂದೆ ಅವರು ಕೊಟ್ಟಿದ್ದರು, ಆದರೆ ತಡೆ ಹಿಡಿಯಲಾಗಿತ್ತು ಎಂದು ಹೇಳಿದ್ದಾರೆ. ಈಗಿನ ಶಾಸಕರು ಮತ್ತೆ ಅನುಮತಿ ನೀಡಿದ್ದಾರೆ ಎಂಬುದು ಸಂಸದರ ಆರೋಪವಾಗಿದೆ. ಈ ವಿಚಾರದಲ್ಲಿ ಸತ್ಯ ಏನೇ ಇದ್ದರೂ ಕೂಡಲೇ ಕ್ವಾರಿ ಪರವಾನಿಗೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಆರೋಪಿಗೆ ಶಿಕ್ಷೆ ಆಗಬೇಕು

ಆರೋಪಿ ಸಕಲೇಶ್‌ಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದ್ದು, ಸೋಮವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ ಆರು ಗಂಟೆಯ ಮಂಚೇನಹಳ್ಳಿ ಶಾಂತಿಯುತವಾಗಿ ಬಂದ್ ಮಾಡಲಾಗುತ್ತದೆ, ಇದಕ್ಕೆ ಯಾವುದೇ ಅಧಿಕಾರಿಗಳು ಅಡ್ಡಿ ಪಡಿಸಬಾರದು ಎಂದು ಮನವಿ ಮಾಡಿದರು.28ರಂದು ನಡೆಯಲಿರುವ ಮಂಚೇನಹಳ್ಳಿ ಬಂದ್‌ಗೆ ನಾಲ್ಕು ಜಿಲ್ಲೆಗಳ ರೈತರು ಸೇರುತ್ತಿದ್ದಾರೆ. ಜಿಲ್ಲಾಡಳಿತಕ್ಕೆ ಮತ್ತು ಶಾಸಕರಿಗೆ ಇದು ಎಚ್ಚರಿಕೆಯ ಗಂಟೆ. ಮಂಚೇನಹಳ್ಳಿ ತಾಲೂಕಿನ ಕನಗಾಣಕೊಪ್ಪದಲ್ಲಿ ನಡೆದಿರೋದು ಹೇಯ ಕೃತ್ಯ, ಗಣಿ ಹೆಸರಿನಲ್ಲಿ ಶ್ರೀಮಂತರು ಪ್ರಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಅಧಿಕಾರಿಗಳು, ಜಿಲ್ಲಾಡಳಿತ, ಶಾಸಕರು ಗೂಂಡಾಗಳಿಗೆ ಮಾರಕಾಸ್ತ್ರ ನೀಡಿ ರೈತರ ಮೇಲೆ ಗುಂಡು ಹಾರಿಸಲು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದರು.ಅಧಿಕಾರಿಗಳ ನಿರ್ಲಕ್ಷ್ಯ ಕಾರಣ

ಕನಗಾನಕೊಪ್ಪ ಘಟನೆಯಿಂದ ಇಡೀ ಜಿಲ್ಲೆ ದಿಗ್ರ್ಬಮೆಗೊಂಡಿದೆ. ಮಾಜಿ ಎಂಎಲ್‌ಸಿ ವೈ.ಎ. ನಾರಾಯಣಸ್ವಾಮಿ ಅವರ ಸಂಬಂಧಿ ಗುಂಡು ಹಾರಿಸಿದ್ದಾಗಿ ತಿಳಿದುಬಂದಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಈ ಘಟನೆ ನಿದರ್ಶನವಾಗಿದೆ. ಗ್ರಾಮ ಪಂಚಾಯತ್ ನಿಂದ ಹಿಡಿದು ಜಿಲ್ಲಾಡಳಿತದವರೆಗೂ ಎಲ್ಲ ಅಧಿಕಾರಿಗಳಿಗೆ ರೈತರು ದೂರು ನೀಡಿದ್ದಾರೆ. ಆದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಬಂಡವಾಳ ಶಾಹಿಗಳೊಂದಿಗೆ ಕೈ ಜೋಡಿಸಿದ ಪರಿಣಾಮ ರೈತನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಕಿಡಿ ಕಾರಿದರು.ಇಂತಹ ವ್ಯಕ್ತಿಗಳಿಗೆ ಬುದ್ಧಿ ಕಲಿಸಲು ರೈತರು ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಬೇಕು, ರೈತಪರ, ಕನ್ನಡಪರ ಸಂಘಟನೆಗಳು ಬೆಂಬಲ ನೀಡಬೇಕು, ಅಂದು ನಡೆಯಲಿರುವ ಬಂದ್‌ಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಬಡಗಲಪುರ ನಾಗೇಂದ್ರ, ಚಾಮರ ಮಾಲಿ ಪಾಟೀಲ್ ಸೇರಿದಂತೆ ಇತರೆ ರೈತ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಕನಗಾನಕೊಪ್ಪದಲ್ಲಿ ನೀಡಿರುವ ಗಣಿಗಾರಿಕೆ ಪರವಾನಿಗೆ ರದ್ದು ಮಾಡಬೇಕು, ಮಾಲಿನ್ಯ ತರಲು ಸಹಕಾರ ನೀಡುತ್ತಿರುವ ಜಿಲ್ಲಾಡಳಿತ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವೇ ಇಂದು ರೈತನ ಮೇಲೆ ಗುಂಡು ಹಾರಿಸಲು ಕಾರಣವಾಗಿದೆ. ರೈತರ ಜಮೀನುಗಳಿಗೆ ರಸ್ತೆ ಮಾಡಲು ಅಧಿಕಾರಿಗಳಿಗೆ ಯೋಗ್ಯತೆ ಇಲ್ಲ, ಕಾಲು ದಾರಿ, ಎತ್ತಿನ ಗಾಡಿ ದಾರಿ ಇದ್ದರೂ ರಸ್ತೆ ಮಾಡಲು ಅಧಿಕಾರಿಗಳಿಗೆ ಯೋಗ್ಯತೆ ಇಲ್ಲ, ಗಣಿ ಮಾಲೀಕರಿಗೆ ಮಾತ್ರ ರೈತರ ಜಮೀನಿನಲ್ಲಿಯೇ ರಸ್ತೆ ಮಾಡಲು ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಸುದ್ದಿಗೋಷ್ಟಿಯಲ್ಲಿ ರೈತಸಂಘದ ಪದಾಧಿಕಾರಿಗಳಾದ ಚಿಂತಡ್ತಿ ಮಾರುತಿ, ಎಸ್ ಎಂ. ರವಿಪ್ರಕಾಶ್, ಕೋಟೆ ಚನ್ನೇಗೌಡ, ಟಿ.ಕೆ.ಅರುಣ್ ಕುಮಾರ್, ಶಂಕರ ನಾರಾಯಣ ಮತ್ತಿತರರು ಇದ್ದರು.