-ಕೃಷಿ ಶ್ರಮ–ಸಮಯ ಉಳಿತಾಯಕ್ಕೆ ಆಳಂದದ ಸಾಲೆಗಾಂವ್‌ ರೈತನ ಹೊಸ ಪ್ರಯೋಗ

--

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಆಳಂದ

ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಬದಲಾಗಿ ಆಧುನಿಕ ತಂತ್ರಜ್ಞಾನ ಹಾಗೂ ಯಾಂತ್ರೀಕರಣದತ್ತ ರೈತರು ಹೆಜ್ಜೆ ಇಡುತ್ತಿರುವ ದೃಶ್ಯ ತಾಲೂಕಿನ ಸಾಲೇಗಾಂವ್‌ ವ್ಯಾಪ್ತಿಯಲ್ಲಿ ಕಂಡು ಬಂದಿದೆ.


ಅಳಿದುಳಿದ ತೇವಾಂಶದಲ್ಲಿ ಕಳೆದ ವಾರ ಸುರಿದ ಮಳೆಯಿಂದ ಚೇತರಿಸಿಕೊಂಡ ಬೆಳೆಯಲ್ಲಿ ರೈತರು ಔಷಧಿ ಸಿಂಪರಣೆ, ಕಸ ನಿರ್ವಹಣೆ ಹಾಗೂ ಎಡೆಸಾಗು ಮಾಡುವಲ್ಲಿ ತೊಡಗಿದ್ದಾರೆ.

ರೈತರು ತಮ್ಮ ಕೃಷಿಯನ್ನು ಉಳಿಸಿಕೊಳ್ಳಲು ಬೆಳೆಯಲ್ಲಿ ಎತ್ತುಗಳು ಹಾಗೂ ಇಬ್ಬರಿಂದ ಮೂವರು ಕಾರ್ಮಿಕರು ಬೇಕಾಗುತ್ತದೆ. ಆದರೆ, ಇದಕ್ಕೆ ಪರ್ಯಾಯವಾಗಿ ಹೆಚ್ಚಿನ ಕೆಲಸ ಒಂದೇ ದಿನದಲ್ಲಿ ಮುಗಿಸಲು ದ್ವಿಚಕ್ರವಾಹನದ ಮೂಲಕ ಎಡೆ ಸಾಗುಮಾಡುವ ಪರ್ಯಾಯ ಮಾರ್ಗವನ್ನು ಕಂಡುಕೊಂಡು ಸಾಲೆಗಾಂವ್‌ ರೈತ ಮಹಾದೇವಪ್ಪ ಕಂಬಾರ ಇತರ ರೈತರಿಗೆ ಪ್ರೇರಣೆಯಾಗಿದ್ದಾನೆ.

ಕಡಿಮೆ ವೆಚ್ಚದಲ್ಲಿ ಕೃಷಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಮೋಟಾರ್‌ ಸೈಕಲ್‌ಗೆ ಕೃಷಿ ಉಪಕರಣವನ್ನು ಅಳವಡಿಸಿಕೊಂಡು ರೈತ ಮಹಾದೇವಪ್ಪ ಕಂಬಾರ ಅವರು ತಮ್ಮ ಹೊಲದಲ್ಲಿ ಬೆಳೆಯಲ್ಲಿ ಎಡೆ ಸಾಗುಮಾಡಿ ಸಮಯ ಹಾಗೂ ಖರ್ಚು ಉಳಿಸಿದ್ದು ಅಲ್ಲದೆ, ಎತ್ತುಗಳ ಮೂಲಕ ದಿನಕ್ಕೆ 2ಎಕರೆ ಎಡೆ ಸಾಗುಮಾಡಿದರೆ ಈ ದ್ವಚಕ್ರ ವಾಹನದ ಸಹಾಯದಿಂದ ದಿನಕ್ಕೆ 6 ಎಕರೆ ಬೆಳೆಯಲ್ಲಿ ಎಡೆ ಸಾಗುಮಾಡಬಹುದಾಗಿದೆ ಎಂದು ರೈತ ಮಹಾದೇವಪ್ಪ ಕಂಬಾರ ಹೇಳಿದ್ದಾರೆ.

ಹೊಲದಲ್ಲಿ ಕಳೆ ನಿಯಂತ್ರಣ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಯಾಂತ್ರೀಕರಣ ಅಳವಡಿಸಿಕೊಳ್ಳುವುದರಿಂದ ರೈತರ ಶ್ರಮ ಹಾಗೂ ಸಮಯ ಉಳಿತಾಯಕ್ಕೆ ಮುಂದಾಗಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಜೊತೆಗೆ, ರೈತರಿಗೆ ಕೈಗೆಟುಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಸಂಬಂಧಿಸಿದ ಇಲಾಖೆ ಹಾಗೂ ಕೃಷಿ ಸಂಸ್ಥೆಗಳು ಉತ್ತೇಜನ ನೀಡಬೇಕು ಎಂಬುದು ರೈತರು ಒತ್ತಾಯಿಸಿದ್ದಾರೆ.

ಫೋಟೋ- ಬೈಕ್‌ ಎಡೆ

ಆಳಂದ ಸಾಲೇಗಾಂವ್‌ ರೈತ ಮಹಾದೇವಪ್ಪ ಕಂಬಾರ ಅವರು ತಮ್ಮ ಬೆಳೆಯಲ್ಲಿ ಎತ್ತುಗಳ ಸಹಾಯವಿಲ್ಲದೆ, ದ್ವಿಚಕ್ರವಾಹನ ಮೂಲಕ ಕೃಷಿ ಉಪಕರಣ ಅಳವಡಿಸಿಕೊಂಡು ಮೂರು ಸಾಲಿನ ಎಡೆ ಸಾಗುಮಾಡಿ ಗಮನ ಸೆಳೆದರು.