ಸಾರಾಂಶ
ತಾಲೂಕಿನ ಕುಣಿಕೇರಿ ಬಳಿ ಕಟಾವು ಹಂತದಲ್ಲಿದ್ದ ಬೆಳೆಗಳನ್ನು ಎಕ್ಸ್ ಇಂಡಿಯಾ ಸ್ಟೀಲ್ ಕಾರ್ಖಾನೆಯವರು ರಾತ್ರೋರಾತ್ರಿ ನಾಶ ಮಾಡಿದ್ದಾರೆ ಎಂದು ರೈತವರ್ಗ ಆಕ್ರೋಶ ವ್ಯಕ್ತಪಡಿಸಿದೆ.
ಉದ್ಯೋಗ ನೀಡುವವರೆಗೂ ಭೂಮಿ ಬಿಟ್ಟು ಕೊಡುವುದಿಲ್ಲ । ಎಕ್ಸ್ ಇಂಡಿಯಾ ಕಂಪನಿ ವಿರುದ್ಧ ರೈತರ ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳತಾಲೂಕಿನ ಕುಣಿಕೇರಿ ಬಳಿ ಕಟಾವು ಹಂತದಲ್ಲಿದ್ದ ಬೆಳೆಗಳನ್ನು ಎಕ್ಸ್ ಇಂಡಿಯಾ ಸ್ಟೀಲ್ ಕಾರ್ಖಾನೆಯವರು ರಾತ್ರೋರಾತ್ರಿ ನಾಶ ಮಾಡಿದ್ದಾರೆ ಎಂದು ರೈತವರ್ಗ ಆಕ್ರೋಶ ವ್ಯಕ್ತಪಡಿಸಿದೆ.ಕಟಾವು ಮಾಡಬೇಕಿದ್ದ ಈರುಳ್ಳಿ, ಶೇಂಗಾ, ಅಲಸಂದಿ ಬೆಳೆಯನ್ನು ನಾಶ ಮಾಡಲಾಗಿದೆ. ಸಾವಿರಾರು ರುಪಾಯಿ ಖರ್ಚು ಮಾಡಿದ್ದ ರೈತರ ಬೆಳೆಯನ್ನು ರಾತ್ರೋರಾತ್ರಿ ರೂಟರ್‌ನಿಂದ ನಾಶ ಮಾಡಿದ್ದಾರೆ. ಇದಕ್ಕೆ ಕಾರಣ ಎಕ್ಸ್ ಇಂಡಿಯಾ ಕಂಪನಿ ಎಂದು ರೈತರು ಆರೋಪಿಸಿದ್ದಾರೆ.
ತಾಲೂಕಿನ ಕುಣಿಕೇರಿ ಬಳಿಯಲ್ಲಿ 2009ರಲ್ಲಿ ಎಕ್ಸ್ ಇಂಡಿಯಾ ಕಂಪನಿಯವರು ಸ್ಟೀಲ್ ಕಾರ್ಖಾನೆ ಆರಂಭಿಸಿದ್ದಾರೆ. ಈ ಕಾರ್ಖಾನೆಗಾಗಿ ಮೂರನೇ ವ್ಯಕ್ತಿಗಳಿಂದ ಭೂಮಿ ಖರೀದಿ ಮಾಡಿದ್ದಾರೆ. ನೇರ ಭೂಮಿ ಖರೀದಿ ಮಾಡದೆ ಇದ್ದರೂ ಭೂಮಿ ಕಳೆದುಕೊಂಡ ರೈತರ ಕುಟುಂಬದವರಿಗೆ ಉದ್ಯೋಗ ನೀಡಬೇಕು. ಆದರೆ ಇಲ್ಲಿಯವರೆಗೂ ಕಾರ್ಖಾನೆಯಲ್ಲಿ ಉದ್ಯೋಗ ನೀಡಿಲ್ಲ. ಈ ಮಧ್ಯೆ ಈಗ ಕಾರ್ಖಾನೆಯು 372 ಎಕರೆಯಲ್ಲಿದೆ. ಇನ್ನೊಂದು ಯುನಿಟ್ ಹಾಕಲು 673 ಎಕರೆ ಭೂಮಿ ಗುರುತಿಸಿ, ಜಾರ್ಜ್ ಕ್ಯೂಮೆನ್ ಥಾಮಸ್ ಎಂಬವರಿಂದ ಭೂಮಿ ಪಡೆದಿದ್ದಾರೆ. ಅವರ ಪರವಾಗಿ ಕೇರಳ ಮೂಲದ ಬ್ಲೇಸನ್ ಎಂಬವರು ರಾತ್ರೋರಾತ್ರಿ ಬೆಳೆದಿರುವ ಬೆಳೆಯನ್ನು ರೂಟರ್ ಮೂಲಕ ನಾಶ ಮಾಡಿದ್ದಾರೆ. ಸಾವಿರಾರು ರುಪಾಯಿ ಖರ್ಚು ಮಾಡಿದ ರೈತನಿಗೆ ಈಗ ಬೆಳೆ ನಷ್ಟವಾಗಿದೆ. ನಮಗೆ ಉದ್ಯೋಗ ನೀಡುವ ವರೆಗೂ ನಾವು ಭೂಮಿ ಬಿಟ್ಟು ಕೊಡುವುದಿಲ್ಲ. ರೈತರು ಉಳುಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಸಹ ತಿಳಿಸಿದ್ದಾರೆ. ಆದರೆ ಕಾರ್ಖಾನೆಯವರು ದೌರ್ಜನ್ಯ ಮಾಡುತ್ತಿದ್ದಾರೆ ಎಂದು ರೈತರು ಹೇಳಿದ್ದಾರೆ.ರಾತ್ರೋರಾತ್ರಿ ಬಂದು ಬೆಳೆ ನಾಶ ಮಾಡಿದ್ದಾರೆ. ಅವರದೇ ಭೂಮಿಯಾಗಿದ್ದರೆ ಹಗಲು ಬಂದು ಕೇಳಬೇಕು. ಈ ರೀತಿ ದೌರ್ಜನ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.