ಸಾರಾಂಶ
-ಸುತ್ತೋಲೆ ವಾಪಸ್ ಪಡೆಯಲು ರಾಜ್ಯ ರೈತ ಸಂಘ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಸರ್ಕಾರಕ್ಕೆ ಒತ್ತಾಯ
---ಕನ್ನಡಪ್ರಭವಾರ್ತೆ ಚಳ್ಳಕೆರೆ
ರಾಜ್ಯ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿ, ರೈತರ ಪಹಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಆದೇಶ ಹೊರಡಿಸಿದೆ. ಇದರಿಂದ, ರೈತರಿಗೆ ಇರಿಸುಮುರಿಸು ಉಂಟಾಗುವುದಲ್ಲದೆ, ರೈತರ ಗಮನಕ್ಕೆ ತಾರದೆ ರೈತ ಸಂಘಟನೆ ಸಂಪರ್ಕಿಸದೆ ಸರ್ಕಾರ ಏಕಪಕ್ಷೀಯ ಸುತ್ತೋಲೆ ಹೊರಡಿಸಿದ್ದು, ಖಂಡನೀಯ. ಕೂಡಲೇ ಅದನ್ನು ವಾಪಾಸ್ ಪಡೆಯಬೇಕೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಅವರು, ನಗರದ ಬೆಸ್ಕಾಂ ಕಚೇರಿ ಮುಂಭಾಗ ರೈತ ಸಂಘದ ಪ್ರತಿನಿಧಿಗಳೊಂದಿಗೆ ಪ್ರತಿಭಟನೆ ನಡೆಸಿ, ಸರ್ಕಾರ ಈ ಆದೇಶದ ಬಗ್ಗೆ ರೈತ ಗಮನಕ್ಕೆ ತಾರದೆ ಬೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ರೈತರ ಜಮೀನುಗಳ ಪಹಣಿಗೆ ಆಧಾರ್ ಲಿಂಕ್ ಮಾಡುವಂತೆ ಮನೆ, ಮನೆಗೂ ತೆರಳಿ ಪ್ರಚಾರ ಮಾಡುತ್ತಿದ್ಧಾರೆ. ರೈತರು ಪ್ರಶ್ನಿಸಿದರೆ ಅವರು ಸೂಕ್ತ ಉತ್ತರ ನೀಡುತ್ತಿಲ್ಲ. ಬದಲಾಗಿ ಮೇಲಾಧಿಕಾರಿಗಳ ಆದೇಶದಂತೆ ನಾವು ನಡೆದುಕೊಳ್ಳುತ್ತಿದ್ದೇವೆಂದು ಸಮಜಾಯಿಸಿ ನೀಡುತ್ತಿದ್ಧಾರೆ.
ದೇಶಕ್ಕೆ ಅನ್ನಕೊಡುವ ಅನ್ನದಾತ ರೈತನ ಬಗ್ಗೆ ಸರ್ಕಾರ ಯಾವುದೇ ಉತ್ತಮ ಕಾರ್ಯ ರೂಪಿಸಿಲ್ಲ. ರೈತ ಕೃಷಿ ಚಟುವಟಿಕೆ ನಡೆಸುವುದೇ ಕಷ್ಟವಾಗಿದೆ. ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಎಲ್ಲಾ ದರಗಳನ್ನು ಹೆಚ್ಚಿಸಿದೆ. ಸಕಾಲದಲ್ಲಿ ರೈತರಿಗೆ ಬೀಜ, ಗೊಬ್ಬರ ಸಿಗುತ್ತಿಲ್ಲ, ಅಲ್ಪಸ್ವಲ್ಪ ಮಳೆಯಿಂದ ರೈತ ಬಿತ್ತನೆ ಮಾಡಲು ಸಿದ್ದತೆ ಮಾಡಿಕೊಂಡು, ಕೆಲವೆಡೆ ಹಲವಾರು ಸಮಸ್ಯೆಗಳ ನಡುವೆಯೂ ಸ್ವಲ್ಪ ಜಮೀನಿಗೆ ಬಿತ್ತನೆ ಮಾಡಿದ್ಧಾರೆ. ಆದರೆ, ಈ ಮಧ್ಯೆ ಬೆಸ್ಕಾಂ ಅಧಿಕಾರಿಗಳು ಪಹಣಿಗೆ ಆಧಾರ ಲಿಂಕ್ ಮಾಡುವ ಒತ್ತಾಯ ಹೇರುತ್ತಿದ್ಧಾರೆ.ಕಂದಾಯ ಇಲಾಖೆ ಅಧಿಕಾರಿಗಳು ಸಹ ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ. ಕಾರಣ, ರೈತರ ಪಹಣಿ ಸೇರಿದಂತೆ ಎಲ್ಲಾ ದಾಖಲಾತಿಗಳು ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತಿವೆ. ಆದ್ದರಿಂದ, ತಹಸೀಲ್ದಾರ್ ಮಧ್ಯಪ್ರವೇಶಿಸಿ, ಈ ಅವೈಜ್ಞಾನಿಕ ಕಾನೂನು ಕೈಬಿಡುವಂತೆ ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ರೈತರ ಪರವಾಗಿ ಒತ್ತಾಯಿಸಬೇಕೆಂದು ತಿಳಿಸಿದ್ಧಾರೆ.
ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಮೂರ್ತಿ, ಬುಡ್ನಹಟ್ಟಿತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಸವರಾಜು, ಜಿ.ಎಚ್.ಹನುಮಂತಪ್ಪ, ರಾಜಣ್ಣ, ಪ್ರಕಾಶ್, ಮೈರಾಡ ಚಂದ್ರಣ್ಣ, ಬಿ.ಸಿ.ಓಬಯ್ಯ, ಸಿ.ಪಿ.ಮಹೇಶ್‌ಕುಮಾರ್, ಜಯಣ್ಣ, ತಿಪ್ಪೇಸ್ವಾಮಿ, ಪಾಲಮ್ಮ, ಸಣ್ಣಪಾಲಯ್ಯ, ಬೊಮ್ಮಯ್ಯ ಇದ್ದರು.-----
ಪೋಟೋ: ೨೨ಸಿಎಲ್ಕೆ೧ಚಳ್ಳಕೆರೆ ನಗರದ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಪ್ರೊ.ಬಣ) ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.