ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ರೈತರು ಕೃಷಿ ಕಾಯಕದ ಜತೆಯಲ್ಲಿ ಆರ್ಥಿಕವಾಗಿ ಮೇಲೆ ಬರಲು ಉಪಕಸುಬುಗಳಿಗೂ ಒತ್ತು ನೀಡುವಂತೆ ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ. ಶಿವಲಿಂಗೇಗೌಡ ಸಲಹೆ ನೀಡಿದರು.ನಗರದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ಕೃಷಿಕ ಸಮಾಜ, ಕೃಷಿ ಇಲಾಖೆ, ಆತ್ಮ ಯೋಜನೆ, ರೈತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ಶೇ. ೭೦ರಿಂದ ೮೦ರಷ್ಟು ಜನರು ಗ್ರಾಮೀಣ ಪ್ರದೇಶಗಳಿದ್ದು ಹೆಚ್ಚಿನವರು ರೈತ ಕುಟುಂಬಗಳೇ ಆಗಿವೆ. ಇವರು ಈ ದೇಶದ ಬೆನ್ನುಲುಬು ಸಹ ಆಗಿದ್ದು, ಇವರ ಕೈ ಬಲಪಡಿಸುವ ಕಾರ್ಯವನ್ನು ನಮ್ಮ ಸರಕಾರಗಳು ಮಾಡಬೇಕಿದೆ. ಸಾಂಪ್ರದಾಯಿಕ ವ್ಯವಸಾಯ ಪದ್ಧತಿ ಇದ್ದ ಸಂದರ್ಭದಲ್ಲಿ ವೈಜ್ಞಾನಿಕ ಬೆಳೆಗೆ ಉತ್ತೇಜನ ನೀಡಿದವರು ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್. ರೈತರ ಶ್ರೇಯೋಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದ ಇವರ ನೆನಪಿನಲ್ಲಿ ಡಿ.೨೩ ರಾಷ್ಟ್ರೀಯ ರೈತರ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.ಸಾವಯವ ಕೃಷಿಗೆ ಒತ್ತು ನೀಡಿ: ವೈಜ್ಞಾನಿಕತೆ ಬೆಳೆದಂತೆ ಬೆಳೆಗಳಿಗೆ ಹಲವು ರಾಸಾಯನಿಕ ಔಷಧಿಗಳನ್ನು ಸಿಂಪಡಿಸುತ್ತಿದ್ದು ಮನುಷ್ಯನ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಈ ಹಿಂದೆ ಕೊಟ್ಟಿಗೆ ಗೊಬ್ಬರ ಸೇರಿದಂತೆ ಇತರೆ ಗೊಬ್ಬರಗಳನ್ನು ಬಳಸಿಕೊಂಡು ಬೆಳೆ ಬೆಳೆಯಲಾಗುತ್ತಿತ್ತು. ಆದರೆ ಇಂದು ಸಾವಯವ ಕೃಷಿ ಮಾಡುವವರು ಕಡಿಮೆಯಾಗಿದ್ದು ಉತ್ತಮ ಬೆಳೆಗಳಿಗಾಗಿ ಸಾವಯವದತ್ತ ಮತ್ತೇ ಮುಖಮಾಡುವಂತೆ ಹೇಳಿದರು. ಕೃಷಿ ಉತ್ಪನ್ನಗಳನ್ನು ದೀರ್ಘಾವಧಿಗೆ ಕಾಪಾಡಲು ಕೋಲ್ಡ್ ಸ್ಟೋರೇಜ್ ಕೂಡ ಪ್ರಾರಂಭ ಆಗಲಿದೆ. ನಬಾರ್ಡ್ ಸಂಸ್ಥೆಗಳು ಸೇರಿದಂತೆ ಸರಕಾರಗಳು ಬಡ್ಡಿರಹಿತ ಸಾಲ ನೀಡಲು ಮುಂದಾಗಬೇಕು. ಇಂದು ರೈತ ಕುಟುಂಬ ಹೆಣ್ಣುಮಕ್ಕಳು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಭಾಗಿಯಾಗಿ ಹಣಕಾಸು ವ್ಯವಹಾರಗಳನ್ನು ವ್ಯವಹರಿಸುವಷ್ಟು ಪ್ರಬುದ್ಧರಾಗಿದ್ದಾರೆ ಎಂದರು.ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಮಾತನಾಡಿ, ರಾಜ್ಯ ಸರಕಾರದ ಐದು ಗ್ಯಾರಂಟಿಗಳ ಯೋಜನೆಗಳ ಪ್ರಯೋಜನ ರೈತರ ಕುಟುಂಬಕ್ಕೆ ವರದಾನವಾಗಿದೆ. ಎತ್ತಿನ ಹೊಳೆ ಯೋಜನೆ ಅನುಷ್ಠಾನ ಶೀಘ್ರದಲ್ಲೇ ಮುಗಿಯಲಿದ್ದು, ಈ ಯೋಜನೆ ಮೂಲಕ ಕೆರೆಗೆ ನೀರು ತುಂಬುವುದರೊಂದಿಗೆ ಅಂತರ್ಜಲ ವೃದ್ಧಿಯಾಗಲಿದೆ. ಈ ಬೆಳವಣಿಗೆಯಿಂದ ರೈತರ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ ಎಂದರು.ಮೇಲನಹಳ್ಳಿ ರೈತ ರಮೇಶ್ ಮಾತನಾಡಿ, ಮದ್ಯಪಾನಕ್ಕೆ ಇರುವ ಬೆಲೆ ಹಸುವಿನ ಹಾಲಿಗೆ ಇಲ್ಲ. ಹಾಲಿನ ಬೆಲೆ ಕೇವಲ ೩೦ ರುಪಾಯಿಗಳಾಗಿದ್ದು ಸರಕಾರ ಗಮನಹರಿಸಿ ಹಾಲಿನ ಬೆಲೆ ಹೆಚ್ಚಳ ಮಡಬೇಕು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿ ರೈತರಿಗೆ ರಕ್ಷಣೆ ನೀಡುವ ಅವಶ್ಯಕತೆ ಇದೆ ಎಂದರು.ಕೃಷಿ ಇಲಾಖೆ ಆತ್ಮಯೋಜನೆಯಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಹಾಯಧನ ಅಡಿಯಲ್ಲಿ ಯಂತ್ರೋಪಕರಣಗಳು ಮತ್ತು ಸಾಮಾಗ್ರಿಗಳನ್ನು ಅರ್ಹಫಲಾನುಭವಿಗಳಿಗೆ ವಿತರಿಸಲಾಯಿತು.
ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನು?ನ ಸಮಿತಿಯ ಉಪಾಧ್ಯಕ್ಷ ಮುರುಂಡಿ ಜವನಪ್ಪ, ಜಾಜೂರು ಸಿದ್ದೇಶ್, ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೀಮಾ, ತಾಂತ್ರಿಕ ಅಧಿಕಾರಿ ಕಾಂತರಾಜು, ಪ್ರಭಾವತಿ, ಕೃಷಿ ಅಧಿಕಾರಿ ಸುಬ್ರಹ್ಮಣ್ಯ, ದೀಪ್ತಿ ಪಾಟೀಲ್, ರೈತ ಮುಖಂಡರಾದ ಬೋರನಕೊಪ್ಪಲು ಶಿವಲಿಂಗಪ್ಪ, ಅಣ್ಣಾಯಕನಹಳ್ಳಿ ಶಿವಮೂರ್ತಪ್ಪ ಸೇರಿದಂತೆ ವಿವಿಧ ರೈತ ಸಂಘಟನೆ ಸದಸ್ಯರು ಭಾಗವಹಿಸಿದ್ದರು.ಫೋಟೋ:ಕೃಷಿ ಇಲಾಖೆ ಆತ್ಮ ಯೋಜನೆಯಡಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕೃಷಿಕರಿಗೆ ನೀಡುವ ಪ್ರಶಸ್ತಿ ಪಡೆದ ರೈತರನ್ನು ಶಾಸಕರು ಹಾಗೂ ಮುಖಂಡರು ಸನ್ಮಾನಿಸಿದರು.