ಸಾರಾಂಶ
ಚಿತ್ರದುರ್ಗ: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಶ್ರೀಮಂತರನ್ನು ಮುಟ್ಟಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ವಕ್ಫ್ ಹೆಸರಲ್ಲಿ ರೈತರ ಭೂಮಿಗೆ ಕೈ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ರೈತರು ಹಾಗೂ ಮಠಗಳ ಆಸ್ತಿ ಕದಿಯಲು ಅವಕಾಶ ಮಾಡಿಕೊಡುವುದಿಲ್ಲ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಅನ್ಯಾಯ ಮಾಡಿದರೆ ಇದಕ್ಕೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ. ಬಿಜೆಪಿ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬೀದಿಗೆ ಇಳಿದು ಹೋರಾಟ ಮಾಡಲು ಮುಂದಾಗಿದೆ ಎಂದರು. ರಾಜ್ಯದಲ್ಲಿ ವಕ್ಫ್ ಬೋರ್ಡ್ ಗೊಂದಲ ಸೃಷ್ಟಿಯಾಗಿದೆ. ಕೊಡುಗೆ, ದಾನ ಕೊಟ್ಟಿದ್ದರೆ ಅದು ವಕ್ಫ್ ಆಸ್ತಿ. ಆದರೆ ರೈತರ ಭೂಮಿ, ಮಠ ಮಾನ್ಯಗಳು, ಆಸ್ತಿಗಳು ವಕ್ಫ್ ಸೇರಿದೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮೂಡಿದೆ. 1954ರಲ್ಲಿ ವಕ್ಫ್ ಬೋರ್ಡ್ ಸ್ಥಾಪನೆ ಆಗಿದೆ. ಏಳನೇ ಶತಮಾನದಲ್ಲಿ ಇಸ್ಲಾಂ ಪ್ರಪಂಚಕ್ಕೆ ಬಂದಿದೆ. ಭಾರತ ದೇಶಕ್ಕೆ ವಕ್ಫ್ ಯಾಕೆ ಬಂತು ಎಂಬ ಪ್ರಶ್ನೆ ಕಾಡುತ್ತಿದೆ ಎಂದರು. 1947ರಲ್ಲಿ ಭಾರತ- ಪಾಕಿಸ್ತಾನ ಇಬ್ಬಾಗ ಆಯ್ತು. ಹಿಂದೂಸ್ಥಾನದಲ್ಲಿ ವಕ್ಫ್ ಇದೆ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಇಲ್ಲ. ನೆಹರೂ ವಕ್ಫ್ ಸೃಷ್ಟಿ ಮಾಡಿದ್ದು, ಇದಕ್ಕೆ ಕಾರಣವಾಗಿದೆ. ಅವರು ಅರ್ಟಿಕಲ್ 370 ಜಾರಿ ಕೂಡಾ ತಂದಿದ್ದು, ಕಾಂಗ್ರೆಸ್ ಒಂದು ದಿನವೂ ಕೂಡಾ ಕಾಶ್ಮೀರದಲ್ಲಿ ಸಂವಿಧಾನ ಜಾರಿ ಮಾಡುವುದರ ಕುರಿತು ಚಿಂತನೆ ಮಾಡಿಲ್ಲ. ಈ ದೇಶ ಮತ್ತು ರಾಜ್ಯಕ್ಕೆ ವಕ್ಫ್ ಕಂಟಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 1974ರಲ್ಲಿ ಗೆಜೆಟ್ ಆಗಿದ್ದು, ಇದೀಗ ವಕ್ಫ್ ಬೋರ್ಡ್ ಆಗಿದೆ. ಇದರ ಸೃಷ್ಟಿಕರ್ತರು ಕಾಂಗ್ರೆಸ್ಸಿಗರು. ವಕ್ಫ್ ಬೋರ್ಡ್ ಗೆ ಕಾಂಗ್ರೆಸ್ ಪರಮಾಧಿಕಾರ ನೀಡಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಅಧಿಕಾರ ರಾಜಕೀಯ ಪಕ್ಷಗಳಿಗೆ ಅಧಿಕಾರ ನೀಡಿದೆ. ಜನ ಪ್ರಶ್ನೆ ಮಾಡಿದರೆ ಅದನ್ನು ನ್ಯಾಯಾಲಯದಲ್ಲಿ ಇತ್ಯರ್ಥ್ಯ ಮಾಡಲಾಗುತ್ತದೆ. ಆದರೆ ವಕ್ಫ್ ವಿಚಾರದಲ್ಲಿ ಕೋರ್ಟ್ ಕೂಡಾ ತಲೆ ಹಾಕುವ ಅಧಿಕಾರ ಇಲ್ಲದಂತಾಗಿದೆ. ಇಂಥಹ ಸರ್ವಾಧಿಕಾರಕ್ಕೆ ನಾವು ಉತ್ತರ ಕೊಡಬೇಕಾಗಿದೆ ಎಂದರು.ಸಿಎಂ ಸಿದ್ದರಾಮಯ್ಯ ಅವರು ವಕ್ಫ್ 11 ನೇ ಕಾಲಂ ವಾಪಸ್ ತೆಗೆಯುತ್ತೇವೆ ಎಂದಿದ್ದಾರೆ. ಆದರೆ ಇದನ್ನು ಸೇರ್ಪಡೆ ಮಾಡಿದ್ಯಾಕೆ ? ಎಂದು ಪ್ರಶ್ನಿಸಿದರು.
ಸಚಿವ ಜಮೀರ್ ಅವರು ಸಿದ್ದರಾಮಯ್ಯ ಆಶಿರ್ವಾದ ಪಡೆದು, ಟ್ರಿಬಿನಲ್‌ನಲ್ಲಿ ಹೇಳಿದ್ದೇನೆ ಎನ್ನುತ್ತಾರೆ. ಅಲ್ಲಾನ ಪ್ರಾರ್ಥನೆ ಮಾಡುವವರು ಉತ್ತಮರಂತೆ, ಬೇರೆಯವರು ಕನಿಷ್ಠರಂತೆ ಇದು ಹೇಗೆ. ಸಚಿವ ಜಮೀರ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದೀಗ ಯೂ ಟರ್ನ್ ಪಡೆದು ಕೊಂಡಿದೆ. ಕಾಲಂ 11 ವಕ್ಫ್ ಎಂಬುದನ್ನು ತೆಗೆಯುತ್ತೇವೆ ಎಂದಿದ್ದಾರೆ. ರೈತರ ಬಗ್ಗೆ ಕಾಳಜಿ ಇದ್ದರೇ 1974 ಗೆಜೆಟ್ ರದ್ದು ಮಾಡಬೇಕು ಎಂದು ಆಗ್ರಹಿಸಿದರು.ಪ್ರಧಾನಿ ಮೋದಿ ಅವರು ಜೆಪಿಸಿ ಸಮಿತಿ ಮಾಡಿದ್ದಾರೆ, ಸದನ ಸಮಿತಿ ಮುಂದೆ ವಿವರಣೆ ನೀಡುತ್ತೇವೆ. ರಾಜ್ಯ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇವೆ. ಮತ ಬ್ಯಾಂಕ್ ಓಲೈಕೆ ರಾಜಕಾರಣ ಮೊದಲು ಬಿಡಬೇಕು. 54 ಸಾವಿರ ಎಕರೆಯಲ್ಲಿ 26 ಸಾವಿರ ಎಕರೆ ಜಾಗವನ್ನು ಮುಸ್ಲಿಂ ಮುಖಂಡರಿಗೆ ನೀಡಿದ್ದಾರೆ ಎಂದು ವರದಿ ನೀಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ, ಧರ್ಮಸಿಂಗ್ ಹೆಸರು ಕೂಡಾ ಪಟ್ಟಿಯಲ್ಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸುನಿಲ್ ಕುಮಾರ್, ಎಂ.ಚಂದ್ರಪ್ಪ,ವಿಪ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ವೈ.ಎ.ನಾರಾಯಣಸ್ವಾಮಿ ಇದ್ದರು.
ಒಂದೇ ಮನೆಗೆ ಸ್ಮಶಾನಕ್ಕೆ ಐದು ಎಕರೆ ಬೇಕಾಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನ ನಂದನ ಹೊಸೂರು ಗ್ರಾಮದಲ್ಲಿ ಸರ್ವೆ 166ರಲ್ಲಿ 5.68 ಗುಂಟೆ ಸುನ್ನಿ ಕಬರ್‌ಸ್ತಾನ್ ಎಂದು ಹೇಳಲಾಗಿದೆ. ಆ ಗ್ರಾಮದಲ್ಲಿ ಒಂದೇ ಒಂದು ಮನೆ ಮಾತ್ರ ಮುಸ್ಲೀಮರದ್ದು ಇದೆ. ಅವರನ್ನ ಹೂಳಲು 5 ಎಕರೆ ಜಾಗ ಬೇಕಾ ಸ್ವಾಮಿ ? ಮುಸ್ಲಿಮರಿಲ್ಲದ ಗ್ರಾಮದಲ್ಲಿ ಕಬಸ್ಥಾನ್ ಯಾಕೆ ಬಂತು ಎಂದು ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು. ಚಳ್ಳಕೆರೆ ನಗರದಲ್ಲಿ ಚರ್ಮ ಹದ ಮಾಡುವ ಜಾಗದ ಪಕ್ಕದಲ್ಲಿ ಮಸೀದಿ ಇದೆ. ಜಾಮೀಯಾ ಮಸೀದಿಯಿಂದ ತಹಸೀಲ್ದಾರ್ ಹಾಗೂ ನಗರಸಭೆಗೆ ಒಂದು ಪತ್ರ ಬರೆಯುತ್ತಾರೆ. ಚರ್ಮ ಹದ ಮಾಡುವ ಜಾಗವನ್ನು ವಕ್ಫ್ ಬೋರ್ಡ್ ಗೆ ಸೇರಿಸುವಂತೆ ಮನವಿ ಮಾಡುತ್ತಾರೆ. ಈ ಮನವಿ ಪತ್ರದಿಂದ ಆ ಜಾಗವನ್ನ ವಕ್ಫ್ ಗೆ ಸೇರ್ಪಡೆ ಮಾಡುತ್ತಾರೆ. ತೋಳ ಕುರಿಯನ್ನ ನುಂಗಿದಂತ ಕಥೆ ಸದ್ಯದ ಸ್ಥಿತಿಯಾಗಿದೆ ಎಂದರು.