ಹಳ್ಳಿಗೊಂದು ಸಮುದಾಯ ಭವನವಿದ್ದರೆ ರೈತರು, ಬಡವರಿಗೆ ಅನುಕೂಲ: ಸಿಎಂ ಸಿದ್ದರಾಮಯ್ಯ

| Published : Dec 05 2024, 12:30 AM IST

ಹಳ್ಳಿಗೊಂದು ಸಮುದಾಯ ಭವನವಿದ್ದರೆ ರೈತರು, ಬಡವರಿಗೆ ಅನುಕೂಲ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಸಿವು ಮುಕ್ತ, ಸಾಲಮುಕ್ತ ರೈತನಾಗಬೇಕು ಎಂಬುದು ತನ್ನ ನಿಲುವು. ಹೆಣ್ಣು ಮಕ್ಕಳು ನೆಮ್ಮದಿಯಿಂದ ಕುಟುಂಬ ನೋಡಿಕೊಳ್ಳಲಿ, ಸಬಲೀಕರಣವಾಗಲಿ. ಪುರುಷರಂತೆ ಸರಿಸಮಾನವಾಗಿ ನಿಲ್ಲಲಿ ಎಂದು ಪಂಚಭಾಗ್ಯ ಕೊಟ್ಟಿದ್ದೇನೆ. ಗ್ರಾಮ ಎಂದರೆ ನನಗೆ ಬಲು ಪ್ರೀತಿ. ಅಲ್ಪಸ್ವಲ್ಪಅನುದಾನ ನೀಡಿರುವೆ. ಎಲ್ಲರೂ ಕ್ರಿಯಾಶೀಲರಾಗಿ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹಳ್ಳಿಗೊಂದು ಸಮುದಾಯ ಭವನವಿದ್ದರೆ ರೈತರು, ಬಡವರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೊಡಿಮಾರನಹಳ್ಳಿಯಲ್ಲಿ ಲಕ್ಷ್ಮೀದೇವಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಗ್ರಾಮಕ್ಕೆ ತಾನು ಬರಲು ಕಷ್ಟಪಟ್ಟು ನಿರ್ಮಿಸಿರುವ ಎಲ್.ದೇವರಾಜು ಹಾಗೂ ಗ್ರಾಮಸ್ಥರ ಶ್ರಮಿಕ ಹೋರಾಟ ಕಾರಣವಾಗಿದೆ. ಗ್ರಾಮ ಎಂದರೆ ನನಗೆ ಬಲು ಪ್ರೀತಿ. ಅಲ್ಪಸ್ವಲ್ಪಅನುದಾನ ನೀಡಿರುವೆ. ಎಲ್ಲರೂ ಕ್ರಿಯಾಶೀಲರಾಗಿ ಗ್ರಾಮಾಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಹಳ್ಳಿಯಲ್ಲಿನ ವಠಾರ, ತೊಟ್ಟಿ, ಹಜಾರ ಮನೆಗಳು ಚಿಕ್ಕದಾಗಿವೆ. ದೊಡ್ಡ ಕುಟುಂಬವಿಲ್ಲ. ದೊಡ್ಡ ಮನೆಗಳಿಲ್ಲದೆ ಮದುವೆ, ಶುಭಕಾರ್ಯ ಮಾಡಲು ಛತ್ರ ಹುಡುಕಬೇಕು. ಲಕ್ಷಗಟ್ಟಲೆ ಹಣ ಕೊಡಬೇಕು. ರೈತರು, ಬಡವರು ಎಲ್ಲಿಂದ ತಾನೆ ಹಣತರಲು ಸಾಧ್ಯ. ಹಳ್ಳಿಗಳಲ್ಲಿ ಸಮುದಾಯಭವನ ಇದ್ದರೆ ನೆಮ್ಮದಿಯಾಗಿ ಮದುವೆ ಮಾಡಬಹುದು. ಶುಭ ಕಾರ್ಯಗಳಿಗೆ ಅನುಕೂಲವಾಗಲಿದೆ ಎಂದರು.

ಹಸಿವು ಮುಕ್ತ, ಸಾಲಮುಕ್ತ ರೈತನಾಗಬೇಕು ಎಂಬುದು ತನ್ನ ನಿಲುವು. ಹೆಣ್ಣು ಮಕ್ಕಳು ನೆಮ್ಮದಿಯಿಂದ ಕುಟುಂಬ ನೋಡಿಕೊಳ್ಳಲಿ, ಸಬಲೀಕರಣವಾಗಲಿ. ಪುರುಷರಂತೆ ಸರಿಸಮಾನವಾಗಿ ನಿಲ್ಲಲಿ ಎಂದು ಪಂಚಭಾಗ್ಯ ಕೊಟ್ಟಿದ್ದೇನೆ ಎಂದರು.

ಹೆಣ್ಣುಮಕ್ಕಳು ಖುಷಿಯಿಂದ ಕೆಲಸಕ್ಕೆ ಹೊರಗಡೆ ಹೋಗಿಬರಲು ಉಚಿತ ಬಸ್ ಸೌಲಭ್ಯ ನೀಡಿರುವೆ. ಬಡತನ ರೇಖೆಗಿಂತ ಕಡಿಮೆ ಇರುವ ಅರ್ಹರು ಮಾತ್ರ ಸವಲತ್ತು ಬಳಸಿಕೊಳ್ಳಬೇಕು. ದುರ್ಬಳಕೆ ಆಗಬಾರದು ಎನ್ನುವುದು ತನ್ನ ಉದ್ದೇಶ. ಪಂಚ ಭಾಗ್ಯಗಳಿಂದ ಮನೆಗಳಲ್ಲಿ ನೆಮ್ಮದಿ ಇದೆ. ರಾಜ್ಯದಲ್ಲಿ ಸಮೃದ್ಧಿ ನೆಲೆಸುವಂತಾಗಿದೆ ಎಂದರು.

ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಮಾತನಾಡಿ, ಶ್ರೀರಂಗಪಟ್ಟಣ- ಚನ್ನರಾಯಪಟ್ಟಣ ರಾಜ್ಯ ಹೆದ್ದಾರಿ ರಸ್ತೆ ಗುಂಡಿ ಬಿದ್ದು ಹಾಳಾಗಿದೆ. ಸಾವು ನೋವು ಸಂಭವಿಸುತ್ತಿವೆ. ಹೇಮಾವತಿ ನಾಲೆ ದುರಸ್ತಿ ಕಾಣದೆ ಕೊನೇ ಭಾಗಕ್ಕೆ ನೀರು ತಲುಪದೆ ರೈತರು ಸಂಕಷ್ಟದಲ್ಲಿದ್ದಾರೆ. ಮೊದಲು ದುರಸ್ತಿ ಮಾಡಿಸಿಕೊಡಿ ಎಂದು ಮನವಿ ಮಾಡಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಸಹಕಾರ ಸಚಿವ ಕೆ.ಎನ್.ರಾಜಣ್ಣ. ಕೆಪಿಸಿಸಿ ಸದಸ್ಯ ಸುರೇಶ್, ಆರ್‌ಟಿಒ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗೇಂದ್ರ, ಲಕ್ಷ್ಮೀದೇವಿ ದೇವಸ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೃಷ್ಣೇಗೌಡ, ಮುಖಂಡರಾದ ವಿಜಯ ರಾಮೇಗೌಡ, ಸಣ್ಣನಿಂಗೇಗೌಡ, ಚಂದ್ರು, ಗೋವಿಂದನಹಳ್ಳಿ ಶಾಮಣ್ಣ, ಮಂಜು, ರುಕ್ಮಾಂಗದ, ಮಂದಾಕಿನಿ ಚೇತನ್, ಚಿಕ್ಕೇಗೌಡ, ಮಂಜೇಗೌಡ, ರಘು, ಸುರೇಶ, ತಮ್ಮಣ್ಣಗೌಡ, ಪುಟ್ಟೇಗೌಡ, ಬಾಲರಾಜ್, ಕೆ.ಕೆ.ದಿನೇಶಬಾಬು, ರಮೇಶ್, ಶಿವೇಗೌಡ, ರವೀಂದ್ರಬಾಬು ಇದ್ದರು.