ಕನ್ನಡಪ್ರಭ ವಾರ್ತೆ ವಿಜಯಪುರ
ಇಂಗಳೇಶ್ವರದಿಂದ- ಬೊಮ್ಮನಹಳ್ಳಿ- ಡೋಣೂರ ಹಾಗೂ ಬಿಸನಾಳ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಯನ್ನು ದುರಸ್ತಿಗೊಗೊಳಿಸಿ ಡಾಂಬರೀಕರಣ ಮಾಡುವಂತೆ ಆಗ್ರಹಿಸಿ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ರೈತರು ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.ಇಂಗಳೇಶ್ವರದಿಂದ ಬೊಮ್ಮನಹಳ್ಳಿ ವರೆಗೆ ಹೋಗುವ ಹಾಗೂ ಡೋಣೂರ ಹಾಗೂ ಬಿಸನಾಳ ಸಂಪರ್ಕ ರಸ್ತೆ ಇದ್ದು, ಇದೇ ರಸ್ತೆಯನ್ನು ಅನುಸರಿಕೊಂಡು ನೂರಾರು ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗುತ್ತಾರೆ. ನಕ್ಷೆಯಲ್ಲಿ ಸ್ಪಷ್ಟವಾಗಿ 33 ಅಡಿ ಅಗಲವಾದ ರಸ್ತೆಯಿದ್ದು, ಸಂಪೂರ್ಣ ಹದಗೆಟ್ಟಿದೆ. ರೈತರು ಜಮೀನುಗಳಿಗೆ ಹೋಗಲು ಹರಸಾಹಸ ಪಡುತ್ತಿದ್ದಾರೆ. ಮಳೆಗಾಲ ಬಂದರೆ ರಸ್ತೆ ಕೆಸರು ಗದ್ದೆಯಾಗಿ ಮಾರ್ಪಟ್ಟು, ರೈತರು ಜಮೀನುಗಳಿಗೆ ಹೊಗಲಾಗದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ. ರಸ್ತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ರಸ್ತೆ ರಿಪೇರಿಗೊಳಿಸಿ ಡಾಂಬರೀಕರಣ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಸಿ.ಎಸ್.ಪೊಲೀಸಪಾಟೀಲ ಮಾತನಾಡಿ, 15 ದಿನಗಳಲ್ಲಿ ದಾರಿ ದುರಸ್ತಿಗೊಳಿಸಿ ರಸ್ತೆಯುದ್ದಕ್ಕೂ ಬೆಳೆದಿರುವ ಗಿಡಗಂಟಿ, ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ರೈತರು ತಮ್ಮ ಜಮೀನುಗಳಿಗೆ ಹೋಗಲು ಅನುಕೂಲ ಮಾಡಿಕೊಡಲಾಗುವುದು ಎಂದರು.ಸಿದ್ರಾಮಪ್ಪ ಎಮ್ಮಿ, ಅರವಿಂದ ಕುಲಕರ್ಣಿ, ಸಿದ್ದಪ್ಪ ಜಕ್ಕೆನವರ, ಶ್ರೀಧರ ಮಠ, ಜಗದೀಶ ತಕ್ಕೋಡ, ಮುರಿಗೆಪ್ಪ ತಾಳಿಕೋಟಿ, ಶ್ರೀಶೈಲ ಅವಟಿ, ಶ್ರೀಶೈಲ ತಾಳಿಕೋಟಿ, ಶರಣಪ್ಪ ಹಂಡಿ, ನಿಂಗಪ್ಪ ಸಜ್ಜನ, ವಿಠ್ಠಪ್ಪ ಕುಂಬಾರ, ಸಿದ್ದಲಿಂಗಪ್ಪ ಮನಹಳ್ಳಿ, ಗುರಪ್ಪ ಕಾಳಗಿ, ಬಸಗೊಂಡಪ್ಪ ಡಿಗ್ಗಾವಿ, ಅಕ್ಷಯ ತಾಳಿಕೋಟಿ, ಮಲ್ಲನಗೌಡ ಪಾಟೀಲ ಹಾಗೂ ಹಲವು ರೈತರು ಉಪಸ್ಥಿತರಿದ್ದರು.