ಸಾರಾಂಶ
ದಾಬಸ್‍ಪೇಟೆ: ತ್ಯಾಮಗೊಂಡ್ಲು ಹೋಬಳಿಯ ಬಿದಲೂರು, ಕೋಡಿಪಾಳ್ಯ ಗ್ರಾಮದ 386 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವಂತೆ ಸ್ಥಳ ವೀಕ್ಷಣೆಗೆ ಆಗಮಿಸಿದ್ದ ಕೆಐಎಡಿಬಿ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರು.
ತ್ಯಾಮಗೊಂಡ್ಲು ಹೋಬಳಿಯ ಕೋಡಿಪಾಳ್ಯ, ಬಿದಲೂರು ಹಾಗೂ ಹನುಮಂತಪುರ ಭಾಗದ ಭೂಸ್ವಾಧೀನ ಕೃಷಿ ಭೂಮಿ ವೀಕ್ಷಿಸಲು ಬಂದ ಕೆಐಎಡಿಬಿ ಸಿಇಒ ಮಹೇಶ್ ನೇತೃತ್ವದ ತಂಡದ ಮುಂದೆ ಈ ಭಾಗದ ರೈತರು ತಮ್ಮ ಅಳಲು ತೋಡಿಕೊಂಡರು. 386 ಎಕರೆ ಭೂಪ್ರದೇಶದಲ್ಲಿ 250 ಎಕರೆಯಷ್ಟು ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳಿವೆ. ಯಾವುದೇ ಕಾರಣಕ್ಕೂ ಭೂಸ್ವಾಧಿನಕ್ಕೆ ರೈತರು ಒಪ್ಪಿಗೆ ನೀಡುವುದಿಲ್ಲ, ರೈತರ ಬದುಕಿಗೆ ಭೂಮಿ ಬಿಡಿ ರೈತರ ಜೀವ ಉಳಿಸಿ ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಮನವಿ ಮಾಡಿದರು.ಹನುಮಂತಪುರ ಗ್ರಾಮದ ರೈತ ಮುಖಂಡ ವಿಜಯ್‍ಕುಮಾರ್ ಮಾತನಾಡಿ, ಕೈಗಾರಿಕಾ ಉದ್ದೇಶಕ್ಕೆ ಕೆಐಎಡಿಬಿ ಮೂಲಕ ತ್ಯಾಮಗೊಂಡ್ಲು ಹೋಬಳಿಯ ಹನುಮಂತಪುರ, ಕೋಡಿಪಾಳ್ಯ ಹಾಗೂ ಬಿದಲೂರು ಗ್ರಾಮಗಳ ಸುಮಾರು 485 ಎಕರೆ ಕೃಷಿ ಭೂಮಿ ಸ್ವಾಧೀನಕ್ಕೆ ಕಳೆದ ಒಂದು ವರ್ಷದಿಂದ ಪ್ರಯತ್ನಗಳು ನಡೆಯುತ್ತಿವೆ. ರೈತರ ಹೋರಾಟದ ಫಲವಾಗಿ 485 ಎಕರೆ ಪ್ರದೇಶದಲ್ಲಿ 100 ಎಕರೆ ಪ್ರದೇಶ ಕೈಬಿಡಲಾಗಿದೆ, ಅದೇ ರೀತಿಯಲ್ಲಿ ನಮ್ಮ ಭಾಗದ ಭುಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡುವಂತೆ ಮನವಿ ಮಾಡುತ್ತಿದ್ದೇವೆ. ಪಕ್ಕದಲ್ಲಿರುವ ರಾಜಕಾರಣಿಗಳ ಜಮೀನನನ್ನು ಸ್ವಾಧೀನದಿಂದ ತಪ್ಪಸಿದ್ದೀರಿ. ಅದೇ ರೀತಿ ಬಡರೈತರ ಜಮೀನುಗಳನ್ನು ಕೈಬಿಡಿ ಎಂದು ಮನವಿ ಮಾಡಿದರು.
ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ:ಸೋಂಪುರ ಹಾಗೂ ತ್ಯಾಮಗೊಂಡ್ಲು ಕೈಗಾರಿಕಾ ಪ್ರದೇಶದಲ್ಲಿ ರಾತ್ರಿ ವೇಳೆ ಅಕ್ರಮವಾಗಿ ಮಣ್ಣು ತೆಗೆದು ಮಾರಾಟ ಮಾಡುತ್ತಿದ್ದಾರೆ. ಇವರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಗ್ಗೆ ಪೊಲೀಸರಾಗಲಿ, ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಸಿಇಒ ಮಹೇಶ್ ಗಮನಕ್ಕೆ ತಂದರು. ಈ ಬಗ್ಗೆ ರಾತ್ರಿ ವೇಳೆ ನಮ್ಮ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಮಣ್ಣು ಲೂಟಿ ಮಾಡುವವರ ವಿರುದ್ಧ ಎಫ್ ಐಆರ್ ದಾಖಲಿಸಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಗಮನಕ್ಕೆ ತರುತ್ತೇವೆ:ಕೆಎಡಿಬಿಐ ಸಿಇಒ ಮಹೇಶ್ ಪ್ರತಿಕ್ರಿಯಿಸಿ, ತ್ಯಾಮಗೊಂಡ್ಲು ಮತ್ತು ಸೋಂಪುರ ಹೋಬಳಿಯ ರೈತರ ಮನವಿ ಮೇರೆಗೆ ಹಾಗೂ ಇಲ್ಲಿನ ವಾಸ್ತವ ಸ್ಥಿತಿ ವೀಕ್ಷಿಸಲು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದೇವೆ. ರೈತರ ಮನವಿಗೆ ಈಗಾಗಲೇ 100 ಎಕರೆ ತರಿಜಮೀನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲಾಗಿದ್ದು, ಸ್ಥಳೀಯ ರೈತರ ಮನವಿ ಹಾಗೂ ಸ್ಥಳ ಪರಿಶೀಲನೆಯ ವರದಿಯನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಯಾವ ಜಮೀನು ಕೈ ಬಿಡಲಾಗಿದೆ ಅದರ ಬಗ್ಗೆ ಪರಿಶೀಲಿಸುತ್ತೇವೆ. ಅದನ್ನು ಸ್ವಾಧೀನಕ್ಕೆ ಸೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಕೆಎಡಿಬಿಐ ವಿಶೇಷ ಭೂಸ್ವಾಧೀನಾಧಿಕಾರಿ ಶಿವೇಗೌಡ್ರು, ಕಾರ್ಯನಿರ್ವಾಹಕ ಇಂಜಿನಿಯರ್ ಲೀಲಾವತಿ, ಸಿಬ್ಬಂದಿಗಳಾದ ರಾಮಮೂರ್ತಿ, ರಂಗನಾಥ್, ರೈತ ಸಂಘಟನೆ ಜಿಲ್ಲಾಧ್ಯಕ್ಷ ರಾಜೇಶ್, ರೈತ ಮುಖಂಡರಾದ ಗೆದ್ದಲಹಳ್ಳಿ ಚಿದಾನಂದ್, ಬಿ.ವಿ.ನರಸಿಂಹಯ್ಯ, ಶಿವರುದ್ರಪ್ಪ, ರವಿಕುಮಾರ್, ಚಿದಾನಂದ್. ಮಂಜುನಾಥ್, ಬಾಬು, ಅಡವಿಷಯ್ಯ, ರಾಜಣ್ಣ, ಬಲರಾಮಯ್ಯ, ಮಹೇಶ್, ಶಶಿರಾಜು, ಬಿದಲೂರು ಗಿರೀಶ್. ಕೋಡಿಪಾಳ್ಯ ಮಹೇಶ್ ಸೇರಿದಂತೆ ಬಿದಲೂರು, ಕೋಡಿಪಾಳ್ಯ ಹಾಗೂ ಹನುಮಂತಪುರದ ರೈತರು ಉಪಸ್ಥಿತರಿದ್ದರು.(ಒಂದು ಫೋಟೋ ಮಾತ್ರ ಬಳಸಿ)
ಪೋಟೋ 2 :ತ್ಯಾಮಗೊಂಡ್ಲು ಹೋಬಳಿ ಬಿದಲೂರು, ಕೋಡಿಪಾಳ್ಯ ಗ್ರಾಮದ 386 ಎಕರೆ ಕೃಷಿ ಭೂಮಿಯನ್ನು ಕೆಎಡಿಬಿಐ ಸಿಇಒ ಮಹೇಶ್ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಪೋಟೋ 3 :ತ್ಯಾಮಗೊಂಡ್ಲು ಹೋಬಳಿ ಬಿದಲೂರು, ಕೋಡಿಪಾಳ್ಯ ಗ್ರಾಮದ 386 ಎಕರೆ ಕೃಷಿ ಭೂಮಿಯನ್ನು ಭೂಸ್ವಾಧಿನ ಪ್ರಕ್ರಿಯೆಯಿಂದ ಕೈಬಿಡುವಂತೆ ಕೆಎಡಿಬಿಐ ಅಧಿಕಾರಿಗಳಾದ ಮಹೇಶ್, ಶಿವೇಗೌಡ್ರು ಅವರಲ್ಲಿ ರೈತರು ಮನವಿ ಮಾಡಿದರು.