ಸಾರಾಂಶ
ರಾಮನಗರ: ನಗರದ ಹೊರ ವಲಯದ ಅರ್ಚಕರಹಳ್ಳಿಯಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಸಂಕೀರ್ಣ ಕಾಮಗಾರಿ ವೇಳೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಮುಂದಾದ ತಹಸೀಲ್ದಾರ್ ಮತ್ತು ಅಧಿಕಾರಿಗಳೊಂದಿಗೆ ರೈತರು ಮಾತಿನ ಚಕಮಕಿ ನಡೆಸಿ ಅಡ್ಡಿ ಪಡಿಸಿದ ಘಟನೆ ಸೋಮವಾರ ನಡೆಯಿತು.
ಕಳೆದ (ನ.2)ಗುರುವಾರ ಸಂಜೆಯೂ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಆಗಲೂ ರೈತರು ಕಾಂಪೌಂಡ್ ವಾಲ್ ಗಳನ್ನು ನೆಲಕ್ಕುರುಳಿಸಿ ತಡೆವೊಡ್ಡಿದ್ದರು. ಇದೀಗ ತಹಸೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಮುಂದಾದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು.ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಸಂಬಂಧಿಸಿದ ಎಂಜಿನಿಯರ್ ಗಳು ಹಾಗೂ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಗಳು ತಹಸೀಲ್ದಾರ್ ತೇಜಸ್ವಿನಿ ಅವರೊಂದಿಗೆ ಚರ್ಚಿಸಿ ವಿವಿಗೆ ಸೇರಿದ ಜಾಗದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಮುಂದಾದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ರೈತರು ಹೊಸ ಭೂ ಸ್ವಾಧೀನ ಕಾಯ್ದೆ ಪ್ರಕಾರ ಪರಿಹಾರ ಕೊಡುವವರೆಗೆ ಅಥವಾ ನ್ಯಾಯಾಲಯದಲ್ಲಿರುವ ತಮ್ಮ ಅರ್ಜಿ ಇತ್ಯರ್ಥ ಆಗುವವರೆಗೂ ಕಾಮಗಾರಿ ಆರಂಭಿಸಬಾರದೆಂದು ಪಟ್ಟು ಹಿಡಿದರು.
ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣದ ಉದ್ದೇಶಕ್ಕೆ ಗುರುತಿಸಿರುವ ಭೂಮಿಯ ಪೈಕಿ ಸುಮಾರು 88 ಎಕರೆ ಪ್ರದೇಶದ ವಿವಾದ ಇನ್ನು ನ್ಯಾಯಾಲಯದಲ್ಲಿದೆ. ಈ ಭೂಮಿಯ 37 ಮಂದಿ ಭೂಮಾಲೀಕರಿಗೆ ಪರಿಹಾರ ಕೊಡಿಸುವ ವಿಚಾರದಲ್ಲಿ ಯಾರೊಬ್ಬರು ಕಾಳಜಿ ವಹಿಸುತ್ತಿಲ್ಲ. ಸಮಸ್ಯೆ ಪರಿಹರಿಸದೆ ಕಾಮಗಾರಿ ಆರಂಭ ಮಾಡುವುದು ಸರಿಯಲ್ಲ. ಕಾಂಪೌಂಡ್ ನಿರ್ಮಾಣ ಮಾಡಿದರೆ ರೈತರು ತಿರುಗಾಡಲು ತೊಂದರೆಯಾಗುತ್ತದೆ. ಆದ್ದರಿಂದ ಕಾಂಪೌಂಡ್ ನಿರ್ಮಾಣ ಮಾತ್ರವಲ್ಲ ಯಾವ ಕಾಮಗಾರಿ ಆರಂಭಕ್ಕೆ ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.ಈ ವೇಳೆ ತಹಸೀಲ್ದಾರ್ ತೇಜಸ್ವಿನಿರವರು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ ಆದೇಶವಾಗಿರುವ ಜಾಗದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಡ್ಡಿ ಪಡಿಸುವುದು ಸರಿಯಲ್ಲ. ಅಧಿಕಾರಿಗಳು ಕಾನೂನು ಪ್ರಕಾರ ನಿರ್ಮಾಣ ಕೈಗೆತ್ತಿಕೊಳ್ಳುತ್ತಿದ್ದು, ರೈತರು ಸಹಕಾರ ನೀಡಬೇಕು ಎಂದರು.
ಈಗಾಗಲೇ ವಿವಿಗೆ ಸ್ವಾಧೀನವಾಗಿರುವ ಭೂಮಿಯಲ್ಲಿ ವಿವಿಯ ನಿರ್ಮಾಣ ಕಾರ್ಯ ನಡೆಯಲಿದೆ. ಇದಕ್ಕೆ ಯಾರಾದರು ಅಡ್ಡಿ ಪಡಿಸಿದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ವಹಿಸುವುದು ಅನಿವಾರ್ಯವಾಗಲಿದೆ ಎಂದು ತಹಸೀಲ್ದಾರ್ ಎಚ್ಚರಿಸಿದಾಗ ಪರಿಹಾರ ಪಡೆಯದ ರೈತರು ತಮ್ಮ ಸಮಸ್ಯೆ ಬಗೆಹರಿಸಿದ ನಂತರ ಕಾಮಗಾರಿ ಆರಂಭಿಸುವಂತೆ ಪಟ್ಟು ಹಿಡಿದು ಕಾಮಗಾರಿ ಪ್ರಾರಂಭಿಸದಂತೆ ತಡೆವೊಡ್ಡಿದರು.ಕೊನೆಗೆ ತಹಸೀಲ್ದಾರ್ ತೇಜಸ್ವಿನಿ, ಜಿಲ್ಲಾಧಿಕಾರಿ ಅವಿನಾಶ್ ಅವರನ್ನು ಸಂಪರ್ಕಿಸಿ ಕಾಮಗಾರಿ ಪ್ರಾರಂಭಕ್ಕೆ ರೈತರು ಅಡ್ಡಿ ಪಡಿಸುತ್ತಿರುವ ವಿಚಾರ ತಿಳಿಸಿದರು. ಕೊನೆಗೆ ಅವಿನಾಶ್ ತಮ್ಮ ಕಚೇರಿಗೆ ರೈತರು ಮತ್ತು ಅಧಿಕಾರಿಗಳನ್ನು ಕರೆಸಿಕೊಂಡು ಸಭೆ ನಡೆಸಿದರು.ಬಾಕ್ಸ್...............
ಸರ್ಕಾರಿ ಭೂಮಿಯಲ್ಲಿ ಅಗತ್ಯ ಕಾಮಗಾರಿರಾಮನಗರ: ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಸ್ವಾಧೀನವಾಗಿರುವ ಸರ್ಕಾರಿ ಭೂಮಿಯಲ್ಲಿ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿ ಕೈಗೊಳ್ಳಲಿದ್ದು, ಇದಕ್ಕೆ ಅಡ್ಡಿ ಪಡಿಸದೆ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಅವಿನಾಶ್ ರೈತರ ಮನವೊಲಿಸಿದರು.
ಅರ್ಚಕರಹಳ್ಳಿಯಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಪಡಿಸಿದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಅವಿನಾಶ್ ರೈತರು, ತಹಸೀಲ್ದಾರ್ , ವಿವಿಯ ಎಂಜಿನಿಯರ್ ಹಾಗೂ ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಚರ್ಚೆ ನಡೆಸಿದರು.ರಾಜೀವ್ ಗಾಂಧಿ ಆರೋಗ್ಯ ವಿವಿ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ಹಾಗೂ ರೈತರ ಭೂಮಿ ಸ್ವಾಧೀನಕ್ಕೆ ಆದೇಶವಾಗಿದೆ. ಬಹುತೇಕ ರೈತರು ಪರಿಹಾರ ಪಡೆದುಕೊಂಡು ಭೂಮಿ ಬಿಟ್ಟುಕೊಟ್ಟಿದ್ದಾರೆ. ಈಗ ಸ್ವಾಧೀನವಾಗಿರುವ ಸರ್ಕಾರಿ ಭೂಮಿಯಲ್ಲಿ ಕಾಂಪೌಂಡ್ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿ ಪ್ರಾರಂಭಿಸಲು ಅವಕಾಶ ನೀಡಬೇಕು.
ಭೂ ಸ್ವಾಧೀನಕ್ಕೆ ಆದೇಶವಾಗಿರುವ ಪೈಕಿ ಪರಿಹಾರ ಪಡೆಯದ ಭೂಮಾಲೀಕರ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು. ಇದಕ್ಕಾಗಿ ಗುರುವಾರದೊಳಗೆ ರೈತರು, ಶಾಸಕರು, ವಿವಿಯ ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸುವುದಾಗಿ ಅವಿನಾಶ್ ರೈತರಿಗೆ ಭರವಸೆ ನೀಡಿದರೆನ್ನಲಾಗಿದೆ.ಸಭೆಯಲ್ಲಿ ರೈತರಾದ ಪುರುಷೋತ್ತಮ್ , ಪ್ರಕಾಶ್ , ಮೋಹನ್ ದಾಸ್ , ನಾರಾಯಣ, ಮಹದೇವ ಮತ್ತಿತರರು ಪಾಲ್ಗೊಂಡಿದ್ದರು.
6ಕೆಆರ್ ಎಂಎನ್ 1.ಜೆಪಿಜಿರಾಮನಗರದ ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿ ನಿರ್ಮಾಣ ಸ್ಥಳಕ್ಕೆ ತಹಸೀಲ್ದಾರ್ ತೇಜಸ್ವಿನಿ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.