ಗಂಗಾವತಿ ಭಾಗದಲ್ಲಿ ಉತ್ತಮ ಮಳೆ, ರೈತರಿಗೆ ಸಂತಸ

| Published : May 18 2024, 12:32 AM IST

ಸಾರಾಂಶ

ಕಳೆದ ಮೂರು ದಿನಗಳಿಂದ ಗಂಗಾವತಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ರೈತರು ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸಿದ್ದಾರೆ. ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಉತ್ತಮ ಮಳೆ ಸುರಿದಿದೆ.

ರಾಮಮೂರ್ತಿ ನವಲಿ

ಗಂಗಾವತಿ: ಕಳೆದ ಮೂರು ದಿನಗಳಿಂದ ಗಂಗಾವತಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತರು ಸಂತಸಗೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಮಳೆಯಾಗದ ಕಾರಣ ತೀವ್ರ ಬರಗಾಲ ಅನುಭವಿಸಿದ್ದಲ್ಲದೆ, ಕುಡಿಯುವ ನೀರಿಗೂ ತತ್ವಾರ ಉಂಟಾಗಿತ್ತು. ಪ್ರಸ್ತುತ ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗೆ ಸಿದ್ಧತೆ ನಡೆಸಿದ್ದಾರೆ.

ಗಂಗಾವತಿ, ಕನಕಗಿರಿ ಮತ್ತು ಕಾರಟಗಿ ತಾಲೂಕುಗಳಲ್ಲಿ ಉತ್ತಮ ಮಳೆ ಸುರಿದಿದೆ. ಬಿಸಿಲಿನಿಂದ ತತ್ತರಿಸಿದ್ದ ಜನತೆ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ಒಟ್ಟು 26,176 ಹೆಕ್ಟೇರ್ ಭೂಮಿ ಇದ್ದು, ಇದರಲ್ಲಿ 3,996 ಹೆಕ್ಟೇರ್ ಪ್ರದೇಶ ಒಣ ಬೇಸಾಯ ಇದೆ. 22,180 ಹೆಕ್ಟೇರ್ ಪ್ರದೇಶ ನೀರಾವರಿ ಆಧಾರಿತವಾಗಿದೆ. ಕನಕಗಿರಿ ತಾಲೂಕಿನಲ್ಲಿ ಒಟ್ಟು 39,475 ಹೆಕ್ಟೇರ್ ಪ್ರದೇಶ ಇದ್ದು, ಅದರಲ್ಲಿ 28,970 ಹೆಕ್ಟೇರ್ ಪ್ರದೇಶ ಒಣ ಬೇಸಾಯ ಇದ್ದು, 10,505 ಹೆಕ್ಟೇರ್ ಪ್ರದೇಶ ನೀರಾವರಿ ಆಧಾರಿತವಾಗಿದೆ. ಕಾರಟಗಿ ತಾಲೂಕಿನಲ್ಲಿ ಒಟ್ಟು 37,380 ಹೆಕ್ಟೇರ್ ಪ್ರದೇಶ ಇದ್ದು, 6,345 ಹೆಕ್ಟೇರ್ ಪ್ರದೇಶ ಒಣ ಬೇಸಾಯ ಹೊಂದಿದೆ. 31,355 ಹೆಕ್ಟೇರ್ ಪ್ರದೇಶ ನೀರಾವರಿ ಆಧಾರಿತವಾಗಿದೆ.

ರೈತರಲ್ಲಿ ಸಂತಸ: ಗಂಗಾವತಿ ತಾಲೂಕಿನ 4 ಹೋಬಳಿಗಳಲ್ಲಿ ಮೇ 17ರಂದು ಉತ್ತಮ ಮಳೆ ಸುರಿದಿದೆ. ಗಂಗಾವತಿ ಹೋಬಳಿಯಲ್ಲಿ 12.5 ಮಿಮೀ, ವೆಂಕಟಗಿರಿ ಹೋಬಳಿಯಲ್ಲಿ 41.2 ಮಿಮೀ, ಮರಳಿ ಹೋಬಳಿಯಲ್ಲಿ 66.1 ಮಿಮೀ, ವಡ್ಡರಹಟ್ಟಿ 34.2 ಮಿಮೀ ಮಳೆ ಸುರಿದಿದೆ. ಅದರಂತೆ ಕನಕಗಿರಿ ತಾಲೂಕಿನ ಕನಕಗಿರಿ ಹೋಬಳಿಯಲ್ಲಿ 8.4 ಮಿಮೀ, ಹುಲಿಹೈದರ್ ಹೋಬಳಿಯಲ್ಲಿ 39.2 ಮಿಮೀ, ನವಲಿ ಹೋಬಳಿಯಲ್ಲಿ 89. 4 ಮಿಮೀ ಮಳೆ ಸುರಿದಿದೆ. ಕಾರಟಗಿ ತಾಲೂಕಿನ ಕಾರಟಗಿ ಹೋಬಳಿಯಲ್ಲಿ 23.4 ಮಿಮೀ ಮಳೆಯಾಗಿದ್ದು, ಸಿದ್ದಾಪುರ ಹೋಬಳಿಯಲ್ಲಿ 14.0 ಮಿಮೀ ಮಳೆಯಾಗಿದೆ.

ಬಿತ್ತನೆಗೆ ಸಿದ್ಧತೆ: ಪೂರ್ವ ಮುಂಗಾರು ಮಳೆ ಬಿದ್ದಿದ್ದರಿಂದ ರೈತರು ಬೀಜ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ. ಕೃಷಿ ಇಲಾಖೆಯ ಪ್ರಕಾರ ಜೂ. 1ರಿಂದ ಮುಂಗಾರು ಮಳೆಯಾಗಬೇಕಾಗಿದೆ. ಪ್ರಸ್ತುತ ಪೂರ್ವ ಮುಂಗಾರು ಮಳೆಯಾಗಿದೆ. ಆದರೂ ರೈತರು ಕೃಷಿ ಚಟುವಟಿಕೆಗೆ ಮುಂದಾಗಿದ್ದಾರೆ. ಪ್ರಮುಖ ಬೆಳೆಗಳಾದ ತೊಗರಿ, ಸೆಜ್ಜೆ ಬೆಳೆ ಬೆಳೆಯಲು ಸಿದ್ಧತೆ ನಡೆಸಿದ್ದಾರೆ. ನೀರಾವರಿ ಆಧಾರಿತ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆ ಬೆಳೆಯಲು ಸಿದ್ಧತೆ ನಡೆಸಿದ್ದಾರೆ. ಪ್ರಸ್ತುತ ಅಖಂಡ ಗಂಗಾವತಿ ತಾಲೂಕಿನಲ್ಲಿ ಮಳೆಯಾಗಿದ್ದರಿಂದ ರೈತರಲ್ಲಿ ಸಂತಸ ಮೂಡಿದೆ.ಅಖಂಡ ಗಂಗಾವತಿ ತಾಲೂಕಿನಲ್ಲಿ ಪೂರ್ವ ಮುಂಗಾರು ಮಳೆ ಬಿದ್ದಿದೆ. ರೈತರು ಬಿತ್ತನೆಗೆ ಮುಂದಾಗಬಾರದು. ಜೂ. 1ರಿಂದ ಬರುವ ಮಳೆಗೆ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಅವಸರದಲ್ಲಿ ಈ ಮಳೆಗೆ ಬಿತ್ತನೆ ಕೈ ಹಾಕದೆ ಕೃಷಿ ಚಟುವಟಿಕೆಗೆ ಮಾತ್ರ ಸಿದ್ಧತೆ ಕೈಗೊಳ್ಳಬೇಕು ಎಂದು ಗಂಗಾವತಿ ಸಹಾಯಕ ಕೃಷಿ ನಿರ್ದೇಶಕ ಸಂತೋಷ ಪಟ್ಟದಕಲ್ಲು ಹೇಳುತ್ತಾರೆ.ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗಿದೆ. ಈಗ ಭೂಮಿ ಹಸಿಯಾಗಿದ್ದು, ಸ್ವಲ್ಪಮಟ್ಟಿಗೆ ಭೂಮಿ ಒಣಗಿದರೆ ಬಿತ್ತನೆ ಮಾಡಬೇಕೆಂಬ ಚಿಂತನೆ ನಡೆದಿದೆ. ಆದರೂ ಕೃಷಿ ಅಧಿಕಾರಿಗಳ ಸಲಹೆ ಪಡೆದು ಕೃಷಿ ಚಟುವಟಿಕೆಗೆ ಮುಂದಾಗುತ್ತೇವೆ ಎಂದು ನವಲಿ ರೈತ ಮಲ್ಲಪ್ಪ ಕುರಬರ ಹೇಳುತ್ತಾರೆ.