ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ರೈತರಲ್ಲಿ ಸಂಘಟನೆಯ ಕೊರತೆ ಮನೆ ಮಾಡಿದೆ. ಆದ್ದರಿಂದಲೇ ಅವರ ಹೋರಾಟಗಳಿಗೆ ಸರಿಯಾದ ಪ್ರತಿಫಲ ದೊರಕುತ್ತಿಲ್ಲ. ಅವರು ಸಂಘಟಿತರಾದರೆ ದೇಶದ ಭವಿಷ್ಯವನ್ನೇ ಬದಲಿಸಬಹುದು ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಸಿರಿಗೆರೆಯ ಪಶು ಚಿಕಿತ್ಸಾಲಯ, ಗ್ರಾ.ಪಂ, ಪಶು ವೈದ್ಯಕೀಯ ಸೇವಾ ಇಲಾಖೆ ಚಿತ್ರದುರ್ಗ, ಸಿರಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಶ್ರದ್ಧಾಂಜಲಿ ಅಂಗವಾಗಿ ಭಾನುವಾರ ಆಯೋಜಿಸಿದ್ದ ಬರಡುರಾಸು ಚಿಕಿತ್ಸೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತರಲ್ಲಿ ಸಂಘಟನೆಯ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ತತ್ಪರತೆ ಇಲ್ಲ. ಆದುದರಿಂದ ಅವರ ಶಕ್ತಿಯನ್ನು ದೇಶ ಅರ್ಥ ಮಾಡಿಕೊಳ್ಳುತ್ತಿಲ್ಲ. ರೈತರು ಪರಿಶ್ರಮಜೀವಿಗಳು. ಅವರಲ್ಲಿ ಸಂಘಟನೆಯ ಕೊರತೆ ಇದೆ. ಯಾರಿಗೂ ತೊಂದರೆ ಕೊಡದೆ ನೀತಿವಂತರಾಗಿ ದುರಾಸೆಗೆ ಬಲಿಯಾಗದೆ ಬದುಕುತ್ತಿದ್ದಾರೆಂದರು.ಕೆ.ಎಂ.ಎಫ್. ನಿರ್ದೇಶಕ ಓಬವ್ವ ನಾಗತಿಹಳ್ಳಿ ರೇವಣಸಿದ್ದಪ್ಪ ಮಾತನಾಡಿ, ದೇಶ ಹೈನುಗಾರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 100 ಲಕ್ಷ ಲೀ. ಹಾಲು ಉತ್ಪಾದನೆ ಆಗುತ್ತಿದ್ದು, ದಾವಣಗೆರೆಯಲ್ಲಿ ₹288 ಕೋಟಿ ವೆಚ್ಚದ ಹಾಲಿನ ಘಟಕ ಹಾಗೂ ಚಿತ್ರದುರ್ಗದಲ್ಲಿ 1.50 ಲಕ್ಷ ಲೀ. ಹಾಲುಸಂಗ್ರಹಿಸುವ ಡೈರಿಯನ್ನು ನಿರ್ಮಿಸಲಾಗುವುದು ಎಂದರು.ಉಪನಿರ್ದೇಶಕರಾದ ಡಾ. ಕುಮಾರ್ ಮಾತನಾಡಿ, ವಿಶ್ವದಲ್ಲಿ ಭಾರತ 233 ಮಿಲಿಯನ್ ಮೆಟ್ರಿಕ್ ಟನ್ ಹಾಲು ಉತ್ಪಾದಿಸುತ್ತಿದೆ. ದಿನದಿಂದ ದಿನಕ್ಕೆ ಜಾನುವಾರುಗಳ ಆರೋಗ್ಯ ಸುಧಾರಿಸುತ್ತಿದೆ. ಹಾಲು ಉತ್ಪಾದಿಸುವ ರೈತರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿಸಿದರು. ಬರಡು ರಾಸುಗಳು, ಕರುಗಳು, ಮಿಶ್ರ ತಳಿ ಹಸು, ಗೀರ್ ತಳಿಗಳು, ಅಮೃತ್ ಮಹಲ್ ತಳಿ, ನಾಟಿ ಎಮ್ಮೆ ತಳಿ, ಇತರೆ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು. ಬರಡು ರಾಸುಗಳ ಫಲವತ್ತತೆಗೆ ಅನುಕೂಲವಾಗುವ ಔಷಧಗಳನ್ನು ಉಚಿತವಾಗಿ ನೀಡಲಾಯಿತು. ಚಿಕ್ಕೇನಹಳ್ಳಿ ಜಯಣ್ಣ ಹಾಗೂ ಲೋಕೇಶ್ ಅವರ ಉತ್ತಮ ಹಸುಗಳಿಗೆ ಪ್ರಥಮ ಬಹುಮಾನ ವಿತರಿಸಲಾಯಿತು.ಪಶುಸಂಗೋಪನಾ ಇಲಾಖೆಯ ಡಾ. ಇಂದಿರಾಬಾಯಿ, ಡಾ. ಮುರುಗೇಶ್, ಡಾ. ಯೋಗಾನಂದ, ಡಾ. ಸ್ವಾಮಿ, ಡಾ. ಶಶಿಧರ್, ಡಾ. ಸಿದ್ದೇಶ್ವರ, ಪರೀಕ್ಷಕರಾದ ಪುನೀತ್‌ಕುಮಾರ್, ರವಿಚಂದ್ರ, ಕೆ.ಎಂ.ಎಫ್ ಅಧಿಕಾರಿಗಳಾದ ಕೆ.ಪಿ ಸಂಜಯ್, ಮುಕುಂದನಾಯಕ್, ಟಿ.ಎಮ್.ಪಿ ತಿಪ್ಪೇಸ್ವಾಮಿ, ಗ್ರಾ.ಪಂ. ಅಧ್ಯಕ್ಷೆ ಹಾಲಮ್ಮಭೈರಪ್ಪ, ಸದಸ್ಯರಾದ ಕೆ.ಎನ್.ಬಿ. ಮೋಹನ್, ಎಂ.ಜಿ. ದೇವರಾಜ್, ನಾಗರಾಜ್‌ಬೆಲ್ಲದ್, ನರೇಂದ್ರಕುಮಾರ್, ವಿಜಯ್‌ಕುಮಾರ್, ಗ್ರಾಮಸ್ಥರು ರೈತರು ಇದ್ದರು.