ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಪಹಣಿ ಹಾಗೂ ಎಂಆರ್ ಕಾಫಿ ಪಡೆಯಲು ರೈತರು ಹಾಗೂ ಸಾರ್ವಜನಿಕರು ಕಚೇರಿ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗೆ ಬರುವ ರೈತರಲ್ಲದೆ ಇತರ ಸಾರ್ವಜನಿಕರಿಗೆ ಬೇಕಾಗಿದ್ದ ಪಹಣಿ ನೀಡಲು ಕಚೇರಿಯಲ್ಲಿ ಬಿಳಿ ಪೇಪರ್ ಹಾಗೂ ಇತರೆ ಸ್ಟೇಷನರಿ ವಸ್ತುಗಳಿಲ್ಲದೆ ಪಹಣಿ ನೀಡುವ ಸ್ಥಳವನ್ನು ಬಂದ್ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಿಂಟ್ ಕೊಡಲು ಪೇಪರ್ ಇಲ್ಲ ಎಂದು ಭೂಮಿ ಶಾಖೆಯಲ್ಲಿ ಪಹಣಿ ವಿತರಿಸದೆ ರೈತರನ್ನು ಅಲೆದಾಡಿಸುವ ಅಧಿಕಾರಿಗಳ ಕ್ರಮ ಖಂಡಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ತಾಲೂಕು ಕಚೇರಿಗೆ ಮುತ್ತಿಗೆ ಪ್ರತಿಭಟನೆ ನಡೆಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ಹಾಗೂ ಹಿರಿಯ ಹೋರಾಟಗಾರ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ರೈತ ಸದಸ್ಯರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ತಹಸೀಲ್ದಾರ್ ಅವರನ್ನು ತರಾಟೆ ತೆಗೆದುಕೊಂಡರು.

ಕಳೆದ ಮೂರ್‍ನಾಲ್ಕು ತಿಂಗಳಿಂದಲೂ ಪಹಣಿ ಹಾಗೂ ಎಂಆರ್ ಕಾಫಿ ಪಡೆಯಲು ರೈತರು ಹಾಗೂ ಸಾರ್ವಜನಿಕರು ಕಚೇರಿ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಚೇರಿಗೆ ಬರುವ ರೈತರಲ್ಲದೆ ಇತರ ಸಾರ್ವಜನಿಕರಿಗೆ ಬೇಕಾಗಿದ್ದ ಪಹಣಿ ನೀಡಲು ಕಚೇರಿಯಲ್ಲಿ ಬಿಳಿ ಪೇಪರ್ ಹಾಗೂ ಇತರೆ ಸ್ಟೇಷನರಿ ವಸ್ತುಗಳಿಲ್ಲದೆ ಪಹಣಿ ನೀಡುವ ಸ್ಥಳವನ್ನು ಬಂದ್ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಹಣಿಗಾಗಿ ಕಚೇರಿಗೆ ಅಲೆದು ರೈತರು ಹಿಂದಿರುಗಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪಹಣಿ ಪತ್ರ ಸೇರಿದಂತೆ ಇತರ ದಾಖಲೆಗಳನ್ನು ರೈತರಿಗೆ ನೀಡಬೇಕು ಎಂದು ತಹಸೀಲ್ದಾರ್ ಚೇತನಾ ಅವರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್, ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೂ ಪತ್ರ ಬರೆದು ಭೂಮಿ ಶಾಖೆಗೆ ಪೇಪರ್ ಹಾಗೂ ಇತರ ಸ್ಟೇಷನರಿ ವಸ್ತುಗಳ ಬೇಡಿಕೆ ತಿಳಿಸಲಾಗಿದೆ. ತಕ್ಷಣದಲ್ಲಿ ಸ್ಟೇಷನರಿ ವಸ್ತುಗಳು ಬರುವ ಭರವಸೆ ನೀಡಿದ್ದಾರೆ ಎಂದು ರೈತರಿಗೆ ತಿಳಿಸಿದ ಅವರು ಬಂದ ತಕ್ಷಣ ಭೂಮಿ ಶಾಖೆಯಲ್ಲಿನ ಪಹಣಿ ಪತ್ರ ನೀಡಲು ಮುಂದಾಗತ್ತೇವೆ ಎಂದರು.

ಈ ವೇಳೆ ಸಮಿತಿ ಸದಸ್ಯರಾದ ಹುಂಡವಾಡಿ ಮಹದೇವು, ಶಿವಣ್ಣ, ಮೇಳಾಪುರ ಜಯರಾಮ್, ಮಹದೇವಪುರ ಕೃಷ್ಣ, ಶ್ರೀನಿವಾಸ್ ಸೇರಿದಂತೆ ಇತರ ಸದಸ್ಯರು ಇದ್ದರು.