ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ರಾಜ್ಯಕ್ಕೆ ಆಗಮಿಸಿದ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧ್ಯಯನ ತಂಡವು ಗುರುವಾರ ನಗರದಲ್ಲಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಸಚಿವ, ಶಾಸಕರು, ರೈತ ಸಂಘಟನೆಗಳ ಮುಖಂಡರು, ಕೃಷಿ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ರಾಜ್ಯಕ್ಕೆ ಆಗಮಿಸಿದ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧ್ಯಯನ ತಂಡವು ಗುರುವಾರ ನಗರದಲ್ಲಿ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ಸಚಿವ, ಶಾಸಕರು, ರೈತ ಸಂಘಟನೆಗಳ ಮುಖಂಡರು, ಕೃಷಿ ತಜ್ಞರೊಂದಿಗೆ ಮಹತ್ವದ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿತು. ಸಭೆಯಲ್ಲಿ ಪ್ರಮುಖವಾಗಿ ಕಬ್ಬಿನ ಎಫ್‌ಆರ್‌ಪಿ ದರವನ್ನು 5500 ರು.ಗಳಿಗೆ ಹೆಚ್ಚಿಸಬೇಕು, ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್‌ಪಿ) 60 ರು.ಗೆ ಏರಿಸಬೇಕೆಂಬ ಬೇಡಿಕೆ ಮಂಡಿಸಲಾಗಿದೆ.ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ನೇತೃತ್ವದ ಅಧ್ಯಯನ ತಂಡವು ನಗರದ ಕುಮಾರಕೃಪಾ ಅತಿಥಿ ಗೃಹದಲ್ಲಿ ಸಭೆ ನಡೆಸಿತು. ಸಭೆಯಲ್ಲಿ ಸಹಕಾರ ಸಚಿವ ಲಕ್ಷ್ಮಣ ಸವದಿ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ಮತ್ತಿತರರು ಭಾಗವಹಿಸಿ ಕಬ್ಬು ಬೆಳೆಗಾರರಿಗೆ ನ್ಯಾಯಯುತ ಬೆಲೆ ದೊರಕಿಸುವುದು, ಕಬ್ಬಿನ ತೂಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಸಕ್ಕರೆ ಇಳುವರಿ ಪ್ರಮಾಣದ ವೈಜ್ಞಾನಿಕ ಮೌಲ್ಯಮಾಪನ, ಕಬ್ಬು ಕಟಾವು ಮತ್ತು ಸಾಗಣೆ ವೆಚ್ಚ ಹಾಗೂ ರೈತರಿಗೆ ಸಕಾಲದಲ್ಲಿ ಹಣ ಪಾವತಿಸುವುದು ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಸಮಿತಿಗೆ ಮನವಿ ಮಾಡಿದರು.ರಾಜ್ಯದ ಕಬ್ಬು ಬೆಳೆಗಾರರ ಸಂಕಷ್ಟ ಪರಿಹಾರಕ್ಕೆ ಆಗಾಗ್ಗೆ ಪ್ರತಿಭಟನೆಗಳು, ಅರ್ಜಿಗಳನ್ನು ಹಿಡಿದು ಅಲೆಯುವುದನ್ನು ತಪ್ಪಿಸಬೇಕು ಹಾಗೂ ಸಮಗ್ರ ಬದಲಾವಣೆಗಳನ್ನು ತರಬೇಕು ಎಂದು ಕರ್ನಾಟಕದ ರೈತ ಮುಖಂಡರು, ಕೃಷಿ ತಜ್ಞರು ಒತ್ತಾಯಪೂರ್ವಕ ಬೇಡಿಕೆಗಳನ್ನು ಮಂಡಿಸಿದರು.
ಕುಮಾರಕೃಪಾ ಅತಿಥಿಗೃಹದಲ್ಲಿ ಗುರುವಾರ ದಿನಪೂರ್ತಿ ನಡೆದ ಸಭೆಯಲ್ಲಿ ಮೊದಲಿಗೆ ರಾಜ್ಯದ ವಿವಿಧೆಡೆಗಳ ರೈತ ಮುಖಂಡರು, ರೈತ ಸಂಘಟನೆಗಳಿಂದ ಅಭಿಪ್ರಾಯ ಸಂಗ್ರಹಿಸಲಾಯಿತು. ಸಂಜೆಯ ನಂತರ ಕೃಷಿ ತಜ್ಞರ ಜೊತೆಯಲ್ಲಿ ಸಂವಾದ ನಡೆಸಲಾಯಿತು.ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದ ನಿಯೋಗವು, ಕಬ್ಬಿನ ಎಫ್‌ಆರ್‌ಪಿ ದರವನ್ನು ಪ್ರತಿ ಟನ್‌ಗೆ ಕನಿಷ್ಠ 4,500 ರು.ನಿಂದ 5,500 ರು.ಗೆ ಹೆಚ್ಚಿಸುವಂತೆ ಆಗ್ರಹಿಸಿತು. ಜೊತೆಗೆ ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್‌ಪಿ) ಪ್ರಸ್ತುತ ಇರುವ 31 ರು.ನಿಂದ 60 ರು.ಗೆ ಏರಿಸಬೇಕು. ರೈತರಿಗೆ ಹೊಲದ ಬಳಿಯೇ ಪೂರ್ಣ ಪ್ರಮಾಣದ ಎಫ್‌ಆರ್‌ಪಿ ದರ ಸಿಗುವಂತೆ ‘ಎಕ್ಸ್-ಫೀಲ್ಡ್’ ಬೆಲೆ ನಿಗದಿ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎನ್ನುವುದೂ ಸೇರಿ ಅನೇಕ ಅಂಶಗಳನ್ನು ಮಂಡಿಸಿದರು.
ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವಿಠ್ಠಲ ಬಿ. ಗಣಾಚಾರಿ ಮಾತನಾಡಿ, ಎಂಎಸ್‌ಪಿಯನ್ನು ಕೇಂದ್ರ ಸರ್ಕಾರ ಪಾರದರ್ಶಕವಾಗಿ ನಿಗದಿಪಡಿಸುತ್ತಿಲ್ಲ. ಕೃಷಿ ವೆಚ್ಚ ಮತ್ತು ದರ ಆಯೋಗವನ್ನು (ಸಿಎಸಿಪಿ) ಸ್ಥಾಪಿಸುವಲ್ಲಿ ಹಿನ್ನಡೆ ಆಗುತ್ತಿದೆ. ಸಿಎಸಿಪಿ ವರದಿ ಆಧಾರದಲ್ಲಿ ಎಂಎಸ್‌ಪಿ ನಗದಿಪಡಿಸಬೇಕು ಎಂದು ಹೇಳಿದರು.ಕೃಷಿ ತಂತ್ರಜ್ಞಾನ ತಜ್ಞ ಡಾ. ರವಿಶಂಕರ್, ಸರ್ಕಾರವು ಕೇವಲ ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಹೆಚ್ಚಿಸುತ್ತಾ ಹೋದರೆ ಸಮಸ್ಯೆ ಬಗೆಹರಿಯುವುದಿಲ್ಲ. ವ್ಯವಸ್ಥೆಯಲ್ಲಿನ ದಕ್ಷತೆ ಮತ್ತು ನಂಬಿಕೆಯನ್ನು ಹೆಚ್ಚಿಸಬೇಕು. ಗೃಹಬಳಕೆಯ ಸಕ್ಕರೆಗೆ ಪ್ರತ್ಯೇಕ ದರ ಹಾಗೂ ವಾಣಿಜ್ಯ ಬಳಕೆಯ ಸಕ್ಕರೆಗೆ ಹೆಚ್ಚಿನ ದರ ವಿಧಿಸುವ ದ್ವಿಮುಖ ಬೆಲೆ ನೀತಿಯನ್ನು ಜಾರಿಗೆ ತರಬೇಕು. ಕೋಲ್ಡ್ ಡ್ರಿಂಕ್ಸ್ ಸೇರಿ ಅನೇಕ ಕಂಪನಿಗಳು ಇದೇ ದರದಲ್ಲಿ ಸಕ್ಕರೆ ಖರೀದಿಸಿ ಶೇ.200-300 ಲಾಭ ಮಾಡುತ್ತವೆ. ಹಾಗಾಗಿ ಅವರಿಗೆ ಪ್ರತ್ಯೇಕ ದರ ವಿಧಿಸಿದರೆ ಸಕ್ಕರೆ ಕಂಪನಿಗಳಿಗೂ ಲಾಭವಾಗುತ್ತದೆ, ರೈತರಿಗೂ ಅನುಕೂಲವಾಗುತ್ತದೆ ಎಂದರು.
ಕಬ್ಬು ನೋಂದಣಿಯನ್ನು ಹನಿ ನೀರಾವರಿ ಅಳವಡಿಕೆಯೊಂದಿಗೆ ಕಡ್ಡಾಯವಾಗಿ ಸಂಯೋಜಿಸಬೇಕು, ಕಟಾವು ಮಾಡಿದ ಕಬ್ಬನ್ನು ಕಡ್ಡಾಯವಾಗಿ 24 ಗಂಟೆಗಳೊಳಗೆ ನುರಿಸಬೇಕು ಹಾಗೂ ತೂಕ ಮತ್ತು ಇಳುವರಿಯ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕಗೊಳಿಸಿ ಪ್ರತಿ ರೈತರಿಗೂ ಫ್ರೂಟ್ಸ್ ಗುರುತಿನ ಚೀಟಿಯೊಂದಿಗೆ ಲಿಂಕ್ ಆದ ಡಿಜಿಟಲ್ ಬಿಲ್ ನೀಡಬೇಕು ಎಂದು ರವಿಶಂಕರ್ ಪ್ರತಿಪಾದಿಸಿದರು.ಇನ್ನು, ಸಾಮಾನ್ಯ ದಿನಬಳಕೆಗೆ ಸಕ್ಕರೆ ಬಳಸುವವರಿಗೂ ಕೋಲ್ಡ್ ಡ್ರಿಂಕ್ಸ್ ಸೇರಿದಂತೆ ಉತ್ಪನ್ನಗಳಿಗೆ ಸಕ್ಕರೆ ಬಳಸುವವರಿಗೂ ಏಕರೂಪ ದರ ನಿಗದಿಪಡಿಸುವುದರಿಂದಲೇ ಸಮಸ್ಯೆ ಬಿಗಡಾಯಿಸಿದೆ ಎಂದು ಕೃಷಿ ಹಾಗೂ ಮಾರುಕಟ್ಟೆ ತಜ್ಞರ ಜೊತೆಗೆ ನಡೆದ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ತಜ್ಞರೊಂದಿಗಿನ ಸಭೆಯಲ್ಲಿ ಕೃಷಿ ವಿವಿ ಮಾಜಿ ಕುಲಪತಿ ಡಾ. ಚಂಗಪ್ಪ, ಕೃಷಿ ಆರ್ಥಿಕ ತಜ್ಞ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ, ಕೃಷಿ ತಜ್ಞರಾದ ಟಿ.ಎನ್. ಪ್ರಕಾಶ್, ಎ.ಬಿ. ಪಾಟೀಲ್, ಡಾ. ಕಿರೆಸೂರು ಮುಂತಾದವರು ಭಾಗವಹಿಸಿದ್ದರು. ಕೋಟ್:ಬೆಲೆ ನಿಯಂತ್ರಣ ಮಾತ್ರವಲ್ಲದೆ ಒಟ್ಟು ಸಕ್ಕರೆ ಆರ್ಥಿಕತೆಯನ್ನು ಹೇಗೆ ಮರುವಿನ್ಯಾಸ ಮಾಡಬೇಕು ಎಂದು ಸಮಿತಿಗೆ ತಿಳಿಸಿದ್ದು, ಬ್ರೆಜಿಲ್ ಮಾದರಿಯನ್ನು ಅಧ್ಯಯನ ಮಾಡಲು ಮನವಿ ಮಾಡಿದ್ದೇವೆ. ರೈತರು ಪ್ರತಿ ವರ್ಷ ಪ್ರತಿಭಟನೆ ಮಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಸಮಗ್ರ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಕೋರಿದ್ದೇವೆ.
-ದರ್ಶನ್ ಪುಟ್ಟಣ್ಣಯ್ಯ, ಮೇಲುಕೋಟೆ ಶಾಸಕ.ಈ ಸಮಿತಿ ನಮ್ಮ ಅಹವಾಲನ್ನು ಆಲಿಸಿದ್ದು, ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ್ದು. ಇದರ ಅನುಷ್ಠಾನವು ಸಚಿವ ಪ್ರಲ್ಹಾದ ಜೋಶಿ ಅವರ ಮೇಲೆ ಅವಲಂಬಿತವಾಗಿದೆ. ಕೇವಲ ಕೇಂದ್ರದ ಕಡೆಗೆ ಬೊಟ್ಟುಮಾಡಿ ರಾಜ್ಯ ಸರ್ಕಾರ ಸುಮ್ಮನೆ ಇರಲು ಸಾಧ್ಯವಿಲ್ಲ. ತಮಿಳುನಾಡಿನ ಮಾದರಿ ಅನುಷ್ಠಾನ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಲಾಗುವುದಿಲ್ಲ. ದೆಹಲಿ ಸರ್ಕಾರವನ್ನು ನೋಡಿ ಗ್ಯಾರಂಟಿಗೆ 50 ಸಾವಿರ ಕೋಟಿ ರು. ನೀಡಲು ಸಾಧ್ಯವಾದರೆ ತಮಿಳುನಾಡನ್ನು ನೋಡಿ ಕಬ್ಬು ಬೆಳೆಗಾರರಿಗೆ ಪರಿಹಾರ ಏಕೆ ನೀಡಲಾಗುವುದಿಲ್ಲ?-ಕುರುಬೂರು ಶಾಂತಕುಮಾರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ
