ಸಾರಾಂಶ
ಸುದ್ದಿ ಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನೀಲೇಶ್ ಆರೋಪ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನಲ್ಲಿ ಪ್ರತಿ ದಿನ ಕಾಡಾನೆಗಳು ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದರೂ ಶಾಸಕರು ನಿರೀಕ್ಷೆಯಷ್ಟು ಸ್ಪಂದಿಸುತ್ತಿಲ್ಲ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿ.ನೀಲೇಶ್ ಆರೋಪಿಸಿದರು.
ಶನಿವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ತಾಲೂಕಿನಲ್ಲಿ ಕಾಡಾನೆಯಿಂದ ಇಬ್ಬರು ರೈತರು ಮೃತಪಟ್ಟಿದ್ದಾರೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಬಜೆಟ್ ನಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರಕ್ಕೆ ಹಣ ಮೀಸಲು ಇಡುತ್ತಾರೆ ಎಂದು ತಾಲೂಕಿನ ರೈತರು ನಿರೀಕ್ಷೆ ಮಾಡಿದ್ದರು. ಆದರೆ, ಮುಖ್ಯ ಮಂತ್ರಿಗಳು ಶಾಶ್ವತ ಪರಿಹಾರಕ್ಕೆ ಹಣ ಇಟ್ಟಿಲ್ಲ. ಬಜೆಟ್ ನಲ್ಲಿ ಹಣ ಇಡಲು ಶಾಸಕರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ದೂರಿದರು.ಬಜೆಟ್ ನಲ್ಲಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ಇಟ್ಟಿಲ್ಲ. ಜಿಲ್ಲೆಯಲ್ಲಿ 5 ಜನ ಕಾಂಗ್ರೆಸ್ ಶಾಸಕರಿದ್ದಾರೆ. ಗ್ರಾಮೀಣ ಭಾಗದ ರಸ್ತೆ ಹಾಳಾಗಿದೆ. ಈ ವರ್ಷ ಅತಿಯಾದ ಮಳೆಯಿಂದ ಅಡಕೆ, ಕಾಫಿ ಬೆಳೆಗೆ ಹಾನಿಯಾದರೂ ತಾಲೂಕನ್ನು ಅತಿವೃಷ್ಠಿ ಪ್ರದೇಶ ಎಂದು ಘೋಷಣೆ ಮಾಡಿಲ್ಲ. ಇದರಲ್ಲಿ ಶಾಸಕರ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಟೀಕಿಸಿದರು.
ಮಾರ್ಚ 10 ಪ್ರತಿಭಟನೆ: ಸರ್ಕಾರ ಜನ ವಿರೋದಿ ನೀತಿ ಖಂಡಿಸಿ ಭಾರತೀಯ ಜನತಾ ಪಾರ್ಟಿಯಿಂದ ಮಾಜಿ ಸಚಿವ ಡಿ.ಎನ್.ಜೀವರಾಜ್ ನೇತೃತ್ವದಲ್ಲಿ ಮಾ.10 ರ ಸೋಮವಾರ ಬೆಳಿಗ್ಗೆ 10.30ರಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ಸಭೆ ಏರ್ಪಡಿಸಲಾಗಿದೆ. ಈ ಪ್ರತಿಭಟನಾ ಸಭೆಗೆ ಎಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಆಗಮಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಮಾ.10 ನಂದು ನಡೆಯುವ ಪ್ರತಿಭಟನಾ ಸಭೆ ಕರಪತ್ರ ಬಿಡುಗಡೆ ಮಾಡಲಾಯಿತು.ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್, ತಾಲೂಕು ಬಿಜೆಪಿ ವಕ್ತಾರ ಎನ್.ಎಂ. ಕಾಂತರಾಜ್, ರಾಜ್ಯ ಬಿಜೆಪಿ ಅಲ್ಪ ಸಂಖ್ಯಾತರ ವಿಭಾಗದ ರಾಜ್ಯ ಸಮಿತಿ ಸದಸ್ಯ ಪರ್ವೀಜ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಸವಿ ಮಂಜುನಾಥ್,ಬಿಜೆಪಿ ಕಸಬಾ ಹೋಬಳಿ ಅಧ್ಯಕ್ಷ ಎಚ್.ಡಿ.ಲೋಕೇಶ್ ಇದ್ದರು.
-- ಬಾಕ್ಸ್ --ಓಟ್ ಬ್ಯಾಂಕ್ ಬಜೆಟ್
ಈ ಬಾರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಓಟ್ ಬ್ಯಾಂಕ್ ಬಜೆಟ್ ಎಂದು ಬಿಜೆಪಿ ರಾಜ್ಯ ಪರಿಷತ್ ಸದಸ್ಯ ಅರುಣಕುಮಾರ್ ಟೀಕಿಸಿದರು.ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಒಂದು ಸಮುದಾಯವರನ್ನು ಓಲೈಸಲು ಬಜೆಟ್ ನಲ್ಲಿ ಸಿಂಹಪಾಲು ಹಣ ನೀಡಲಾಗಿದೆ. ಚಿಕ್ಕಮಗಳೂರಿನಲ್ಲಿ ಮೆಡಿಕಲ್ ಕಾಲೇಜಿನ ಕಟ್ಟಡ ಆಗಿದೆ. ಈ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವಿಲ್ಲ. ಕೊಪ್ಪದಲ್ಲಿ ಪಾಲಿಟೆಕ್ನಿಕ್ ಕಟ್ಟಡ ನಿರ್ಮಾಣವಾಗಿದೆ ಇದಕ್ಕೂ ಹಣ ಮೀಸಲಿಟ್ಟಲ್ಲ ಎಂದರು.