ಪ್ರಧಾನಿ, ಕೃಷಿ ಮಂತ್ರಿ ಪ್ರತಿಕೃತಿ ಸುಡಲು ಯತ್ನಿಸಿದ ರೈತರ ಬಂಧನ

| Published : Jan 14 2025, 01:03 AM IST

ಪ್ರಧಾನಿ, ಕೃಷಿ ಮಂತ್ರಿ ಪ್ರತಿಕೃತಿ ಸುಡಲು ಯತ್ನಿಸಿದ ರೈತರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ದೇಶಾದ್ಯಂತ ಭಾಷಣ ಮಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ತಿಳಿಸಿ ಅಧಿಕಾರಕ್ಕೆ ಬಂದರು ಸಮಸ್ಯೆ ಬಗೆಹರಿಸಲಿಲ್ಲ. ರೈತರ ಹೋರಾಟದ ಸಮಸ್ಯೆಗಳ ಬಗ್ಗೆ ಪರಿಹಾರ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಹೈ ಕೋರ್ಟ್‌ ನ್ಯಾಯಾಧೀಶರ ಅಧ್ಯಕ್ಷತೆಯ ನವಾಬಸಿಂಗ್ ಸಮಿತಿ ಮಧ್ಯಂತರ ವರದಿಯನ್ನು ನ.22 ರಂದು ನೀಡಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರೈತ ವಿರೋಧಿ ಕೇಂದ್ರ ಸರ್ಕಾರದ ವರ್ತನೆ ಖಂಡಿಸಿ, ದಲೈವಾಲಾ ಹೋರಾಟವನ್ನು ಬೆಂಬಲಿಸಿ ಪ್ರಧಾನಿ, ಕೃಷಿ ಮಂತ್ರಿ ಪ್ರತಿಕೃತಿ ದಹಿಸಲು ಮುಂದಾದ ರಾಜ್ಯ ಕಬ್ಬುಬೆಳೆಗಾರರ ಸಂಘ ಮತ್ತು ರೈತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳನ್ನು ಪೊಲೀಸರು ಬಂಧಿಸಿದರು.

ರೈತರ ಬಳಿ ಇದ್ದ ಪ್ರತಿಕೃತಿ ವಶಕ್ಕೆ ಪಡೆಯಲು ಪೊಲೀಸರು ಮುಂದಾದಾಗ ಆಕ್ರೋಶ ವ್ಯಕ್ತಪಡಿಸಿದ ರೈತರು ಬೆಂಕಿ ಹಚ್ಚಿದರು. ತಕ್ಷಣವೇ ಪೊಲೀಸರು ತಳ್ಳಿ ಪ್ರತಿಕೃತಿ ವಶಕ್ಕೆ ಪಡೆದರು.

ದಲೈವಾಲಾ ದೇಶದ ರೈತರಿಗಾಗಿ ಪ್ರಾಣ ಕಳೆದುಕೊಳ್ಳಲು ಸಿದ್ಧ ಎಂದು 49 ದಿನದಿಂದ ಸಹಸ್ರಾರು ರೈತರ ಸಮ್ಮುಖದಲ್ಲಿ ಉಪವಾಸ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಮಾಡಿರುವುದು ಖಂಡನೀಯ. ರೈತ ವಿರೋಧಿ ಧೋರಣೆಗೆ ಧಿಕ್ಕಾರ ಎಂದು ಕೂಗಿದರು.

ನಗರದ ಗನ್ ಹೌಸ್ ವೃತ್ತದಲ್ಲಿ ನೂರಾರು ರೈತರು ಧರಣಿಗೆ ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು.

ಪೊಲೀಸರು ಮತ್ತು ರೈತರ ನಡುವಿನ ತಳ್ಳಾಟದ ವೇಳೆ ಕಾರ್ಯಕರ್ತ ಮಹದೇವಸ್ವಾಮಿ ಎಂಬವರ ಕಾಲು ಮುರಿದಿದೆ. ಅವರಿಗೆ ಹಚ್ಚಿನ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ರೈತರು ಪ್ರತಿಕೃತಿ ಕಿತ್ತೊಯ್ಯಲು ಕಾರಣವೇನು ಉತ್ತರಿಸಬೇಕು ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪ್ರಶ್ನಿಸಿದರು.

ಕೇಂದ್ರ ಸರ್ಕಾರ ರೈತ ಚಳವಳಿಯನ್ನು ದುರ್ಬಲಗೊಳಿಸಲು ಧಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಯಾರು ಸೊಪ್ಪು ಹಾಕುತ್ತಿಲ್ಲ. ಚಳವಳಿಗಾರರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿದೆ. ಇದು ಸರಿಯಾದ ಬೆಳವಣಿಗೆ ಅಲ್ಲ. ಇದೇ ಚಳವಳಿಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಶುಭಕರಣ ಸಿಂಗ್ ಕುಟುಂಬಕ್ಕೆ ಸರ್ಕಾರ ಒಂದು ಕೂಟಿ ರು.ಪರಿಹಾರ ನೀಡಲು ಹೋಗಿತ್ತು. ಆದರೆ, ಅವರ ಕುಟುಂಬ ಪರಿಹಾರ ಬೇಡ ಎಂದು ತಿರಸ್ಕರಿಸಿ, ಮೊದಲು ರೈತರ ಸಮಸ್ಯೆ ಬಗೆಹರಿಸಿ ಎಂದು ಸರ್ಕಾರಕ್ಕೆ ಎಚ್ಚರಿಸಿತು. ಇದು ರೈತರ ಚಳಿವಳಿಯ ಬದ್ಧತೆಯನ್ನು ಎತ್ತಿ ತೋರಿಸಿದೆ ಎಂದರು.

ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ದೇಶಾದ್ಯಂತ ಭಾಷಣ ಮಾಡಿ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ತಿಳಿಸಿ ಅಧಿಕಾರಕ್ಕೆ ಬಂದರು ಸಮಸ್ಯೆ ಬಗೆಹರಿಸಲಿಲ್ಲ.

ರೈತರ ಹೋರಾಟದ ಸಮಸ್ಯೆಗಳ ಬಗ್ಗೆ ಪರಿಹಾರ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ನೇಮಿಸಿದ್ದ ಹೈ ಕೋರ್ಟ್‌ ನ್ಯಾಯಾಧೀಶರ ಅಧ್ಯಕ್ಷತೆಯ ನವಾಬಸಿಂಗ್ ಸಮಿತಿ ಮಧ್ಯಂತರ ವರದಿಯನ್ನು ನ.22 ರಂದು ನೀಡಿದೆ. ರೈತರ ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ ಖಾತ್ರಿ ವ್ಯವಸ್ಥೆ ಜಾರಿ ಮಾಡುವುದು ಅತ್ಯವಶ್ಯಕ ಎಂದು ಸಮಿತಿ ವರದಿ ನೀಡಿದ್ದರೂ ಕೂಡ ಕೇಂದ್ರ ಸರ್ಕಾರ ಏನು ಪ್ರತಿಕ್ರಿಯೆ ನೀಡುತ್ತಿಲ್ಲ. ಇದರರ್ಥ ಏನು ಎಂದು ಅವರು ಪ್ರಶ್ನಿಸಿದರು.

ಕೃಷಿ ಕ್ಷೇತ್ರದ ಸಮಸ್ಯೆ ನಿವಾರಣೆಗಾಗಿ ದೇಶದಲ್ಲಿ ಒಬ್ಬ ಕೃಷಿ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದ್ದಾರೆ. ಅವರು ನಿದ್ರೆ ಮಾಡುತ್ತಿದ್ದಾರೆಯೇ ಎಂಬುದು ನಮ್ಮ ಪ್ರಶ್ನೆ. ಇವರಿಗೆ ನೈತಿಕತೆ ಇದ್ದರೆ ಸ್ವಪ್ರತಿಷ್ಠೆ ಬಿಟ್ಟು. ಪಂಜಾಬ್, ಹರಿಯಾಣ ರಾಜ್ಯಗಳ ಮಂತ್ರಿಗಳ ಜೊತೆಯಲ್ಲಿ ಹೋಗಿ ಉಪವಾಸ ನಿರತ ದಲೈವಾಲ ಜೊತೆ ಮಾತುಕತೆ ನಡೆಸಿ ಉಪವಾಸ ಕೈಬಿಡುವಂತೆ ಮನವಿ ಮಾಡಿ ಪ್ರಾಣ ಅಪಾಯ ತಪ್ಪಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಇವರೇ ಕಾರಣರಾಗುತ್ತಾರೆ ಎಂದು ಅವರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಪಿ.ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರ್ ಶಂಕರ್, ನೀಲಕಂಠಪ್ಪ, ಕೆ.ಸಿದ್ದೇಶ್, ವಿಜಯೇಂದ್ರ ಪೈ, ವೆಂಕಟೇಶ್, ಪರಶಿವಮೂರ್ತಿ, ಕೆಂಡಗಣ್ಣಪ್ಪ, ಮಹದೇವಸ್ವಾಮಿ, ಪ್ರದೀಪ್, ಮಂಜುನಾಥ್, ಬಸವರಾಜು, ಹಂಪಾಪುರ ರಾಜೇಶ್, ವರಕೋಡು ನಾಗೇಶ್, ಮಂಜುನಾಥ್, ಕಾಟೂರು ಮಹದೇವಸ್ವಾಮಿ, ನಾಗೇಶ್, ಶ್ರೀಕಂಠ, ಗೌರಿಶಂಕರ್, ಪಿ.ರಾಜು, ಕೋಟೆ ಸುನಿಲ್, ವಾಜಮಂಗಲ ನಾಗೇಂದ್ರ, ಮಾಲಿಂಗ ನಾಯಕ, ಚಾಮರಾಜು, ಧನಗಳ್ಳಿ ಕೆಂಡಗಣ್ಣ ಸ್ವಾಮಿ, ಚುಂಚುರಾಯನ ಹುಂಡಿ ಗಿರೀಶ್, ಕೂಡನಹಳ್ಳಿ ಸೋಮಣ್ಣ, ಪ್ರಕಾಶ್ ದೇವನೂರು ಮಹದೇವಸ್ವಾಮಿ, ತಗಡೂರು ಮಾದೇವಸ್ವಾಮಿ ಮೊದಲಾದವರು ಇದ್ದರು.