ಪ್ರತಿ ಟನ್‌ ಕಬ್ಬಿಗೆ ₹3200 ನೀಡುವಂತೆ ರೈತರ ಪಟ್ಟು

| Published : Nov 06 2024, 11:49 PM IST

ಸಾರಾಂಶ

ಕಾರ್ಖಾನೆಯವರು ಕಬ್ಬು ಬೆಳೆಗಾರರ ಬಾಕಿಯನ್ನು ಪಾವತಿಸಬೇಕು. ಲಾಭದಾಯಕ ಬೆಲೆ ಹೊರತುಪಡಿಸಿ ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸಬೇಕು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯವರು ಕಬ್ಬು ಬೆಳೆಗಾರರೊಂದಿಗೆ ದ್ವಿಪಕ್ಷೀಯ ಒಪ್ಪಂದದ ಸಭೆಯನ್ನು ನಡೆಸಿಯೇ ಕಾರ್ಖಾನೆಯನ್ನು ಆರಂಭಿಸಬೇಕು.

ಹಳಿಯಾಳ: ಪ್ರಸಕ್ತ ವರ್ಷ ಕಬ್ಬಿಗೆ ಪ್ರತಿ ಟನ್‌ಗೆ ₹3200 ನೀಡಬೇಕು. ಇಲ್ಲವಾದಲ್ಲಿ ಹೆಚ್ಚಿನ ದರ ನೀಡುವ ಕಾರ್ಖಾನೆಗೆ ಕಬ್ಬನ್ನು ಕಳಿಸಿಕೊಡುತ್ತೇವೆ ಎಂದು ಇಲ್ಲಿನ ಕಬ್ಬು ಬೆಳೆಗಾರರು ಜಿಲ್ಲಾಡಳಿತದ ಮುಂದೆ ಬಿಗಿಪಟ್ಟು ಹಿಡಿದು ಆಗ್ರಹಿಸಿದ್ದಾರೆ.

ಬುಧವಾರ ಸಂಜೆ ತಾಲೂಕಾಡಳಿತ ಕಚೇರಿಯಲ್ಲಿ ಕಾರವಾರ ಸಹಾಯಕ ಆಯುಕ್ತ ಕನಿಷ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರ ಸುದೀರ್ಘ ಸಭೆ ನಡೆಸಿದರು.

ಈ ವೇಳೆ ರೈತರು ಮಾತನಾಡಿ, ಕಾರ್ಖಾನೆಯವರು ಕಬ್ಬು ಬೆಳೆಗಾರರ ಬಾಕಿಯನ್ನು ಪಾವತಿಸಬೇಕು. ಲಾಭದಾಯಕ ಬೆಲೆ ಹೊರತುಪಡಿಸಿ ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸಬೇಕು ಹಾಗೂ ಕಾರ್ಖಾನೆಯ ಆಡಳಿತ ಮಂಡಳಿಯವರು ಕಬ್ಬು ಬೆಳೆಗಾರರೊಂದಿಗೆ ದ್ವಿಪಕ್ಷೀಯ ಒಪ್ಪಂದದ ಸಭೆಯನ್ನು ನಡೆಸಿಯೇ ಕಾರ್ಖಾನೆಯನ್ನು ಆರಂಭಿಸಬೇಕು ಆಗ್ರಹಿಸಿದರು. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಆಲಿಸಿದ ಸಹಾಯಕ ಆಯುಕ್ತರ ಅವರ ಆಕ್ಷೇಪಣೆಗಳನ್ನು ಸಮಗ್ರವಾಗಿ ಪಟ್ಟಿ ಮಾಡಿದರು.

ತುರ್ತು ಸಭೆ: ರಾಜ್ಯದೆಲ್ಲೆಡೆ ನ. 15ರಿಂದ ಕಾರ್ಖಾನೆ ಆರಂಭಿಸಲು ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಇತ್ತೀಚೆಗೆ ಆದೇಶ ಮರುಪರಿಶೀಲಿಸಿ ನ. 8ರಿಂದ ಕಾರ್ಖಾನೆ ಆರಂಭಿಸಲು ಪರವಾನಗಿ ನೀಡಿದ ಹಿನ್ನೆಲೆ ಸ್ಥಳೀಯ ಈಐಡಿ ಸಕ್ಕರೆ ಕಾರ್ಖಾನೆಯವರು ತರಾತುರಿಯಲ್ಲಿ ಕಾರ್ಖಾನೆ ಆರಂಭಿಸಲು ಸಿದ್ಧತೆ ನಡೆಸಿರುವುದನ್ನು ಆಕ್ಷೇಪಿಸಿ ಕಬ್ಬು ಬೆಳೆಗಾರರು ಮಧ್ಯಾಹ್ನ ತಾಲೂಕಾಡಳಿತ ಸೌಧಕ್ಕೆ ತೆರಳಿ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರೊಂದಿಗೆ ಸಭೆ ನಡೆಸಿ ತಮ್ಮ ಬೇಡಿಕೆಗಳನ್ನು ಪ್ರಸ್ತಾಪಿಸಿದರು.

ಕಬ್ಬು ಬೆಳೆಗಾರರ ಅಹವಾಲು ಆಲಿಸಿದ ತಹಸೀಲ್ದಾರರು ಮಧ್ಯಾಹ್ನದ ನಂತರ ಕಾರವಾರ ಸಹಾಯಕ ಆಯುಕ್ತರು ಹಳಿಯಾಳಕ್ಕೆ ಆಗಮಿಸುತ್ತಿದ್ದು, ಅವರ ಉಪಸ್ಥಿತಿಯಲ್ಲಿ ಸಭೆಯನ್ನು ನಡೆಸುವುದು ಸೂಕ್ತ ಎಂದು ನೀಡಿದ ಸಲಹೆಗೆ ಕಬ್ಬು ಬೆಳೆಗಾರರು ಒಪ್ಪಿ ಸಂಜೆ ಸಹಾಯಕ ಆಯುಕ್ತರೊಂದಿಗೆ ಸಭೆ ನಡೆಸಿ ತಮ್ಮ ದೂರು- ದುಮ್ಮಾನಗಳನ್ನು ತೋಡಿಕೊಂಡರು.ಅತ್ಯಂತ ಕಡಿಮೆ ದರ: ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ ಮಾತನಾಡಿ. ಹಳಿಯಾಳದ ಇಐಡಿ ಕಾರ್ಖಾನೆಯ ಮೇಲೆ ನಮಗೆ ನಂಬಿಕೆ ಇಲ್ಲವಾಗಿದೆ. ಅಕ್ಕಪಕ್ಕದ ಕಾರ್ಖಾನೆಗಳಿಗಿಂತ ಅತ್ಯಂತ ಕಡಿಮೆ ದರವನ್ನು ನೀಡುವುದಲ್ಲದೇ ಕಬ್ಬು ಕಟಾವು ಮತ್ತು ಸಾಗಾಟದ ದರ ಆಕರಣೆಯಲ್ಲೂ ಅನ್ಯಾಯವೆಸಗಿದ್ದಾರೆ. ಅದಕ್ಕಾಗಿ ರೈತರಿಗೆ ನಮಗೆ ಅನ್ಯಾಯವಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು. ಮತ್ತೆ ರೈತರು ಬೀದಿಗಿಳಿದು ಹೋರಾಟ ಮಾಡದಂತೆ ಕಾಳಜಿ ವಹಿಸಿ ಎಂದರು.₹3200 ದರ ನೀಡಿ: ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕಾಜಗಾರ ಮಾತನಾಡಿ, ಪ್ರತಿ ಟನ್‌ಗೆ ₹3200 ದರವನ್ನು ನೀಡಬೇಕು. ಇಲ್ಲವಾದಲ್ಲಿ ಕಬ್ಬನ್ನು ಈ ಕಾರ್ಖಾನೆಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಡಿಸಿ ಸಭೆ ನಡೆಯಬೇಕು: ನ. 8ರಿಂದ ಕಬ್ಬು ನುರಿಸುವ ಹಂಗಾಮನ್ನು ಕಾರ್ಖಾನೆಯವರು ಆರಂಭಿಸುತ್ತಿರುವುದರಿಂದ ಅದಕ್ಕೂ ಮೊದಲು ಜಿಲ್ಲಾಧಿಕಾರಿಗಳು ಹಳಿಯಾಳದಲ್ಲಿ ಸಭೆ ನಡೆಸಿಯೇ ಕಾರ್ಖಾನೆ ಆರಂಭಿಸಲು ಅನುಮತಿ ನೀಡಬೇಕೆಂದು ಕಬ್ಬು ಬೆಳೆಗಾರರು ಬಿಗಿಪಟ್ಟು ಹಿಡಿದರು. ಅದಕ್ಕೆ ಸ್ಪಂಧಿಸಿದ ಸಹಾಯಕ ಆಯುಕ್ತರು ಜಿಲ್ಲಾಧಿಕಾರಿಗಳೊಂದಿಗೆ ಪೋನ್ ಮೂಲಕ ಚರ್ಚಿಸಿದರು. ಸಂಘದ ಕಾರ್ಯದರ್ಶಿ ಅಶೋಕ ಮೇಟಿ ಮಾತನಾಡಿದರು. ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ, ಸಿಪಿಒ ಜಯಪಾಲ ಪಾಟೀಲ, ಪಿಎಸ್‌ಐ ವಿನೋದ ರೆಡ್ಡಿ, ಕಬ್ಬು ಬೆಳೆಗಾರರ ಪ್ರಮುಖರಾದ ಎಂ.ವಿ. ಘಾಡಿ, ಸುರೇಶ ಶಿವಣ್ಣನವರ, ಸಾತೇರಿ ಗೊಡೆಮನಿ, ಗಿರೀಶ್ ಠೊಸುರ, ಸುರೇಶ ಕೊಕಿತಕರ ಇತರರು ಇದ್ದರು.ಶನಿವಾರ ಡಿಸಿ ನೇತೃತ್ವದಲ್ಲಿ ಸಭೆ

ಜಿಲ್ಲಾಧಿಕಾರಿಗಳು ಹಳಿಯಾಳದಲ್ಲಿ ಸಭೆ ನಡೆಸಲು ಆಗಮಿಸುವುದನ್ನು ತಿಳಿಸಿದ ಸಹಾಯಕ ಆಯುಕ್ತರು, ನ. 9ರಂದು ಹಳಿಯಾಳದಲ್ಲಿ ಡಿಸಿಯವರು ಸಭೆ ನಡೆಸಲಿದ್ದಾರೆ. ಗುರುವಾರ ಜಿಲ್ಲಾಡಳಿತವು ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಪೂರ್ವಭಾವಿ ಸಭೆ ನಡೆಸಿ ರೈತರ ಬೇಡಿಕೆಗಳ ಬಗ್ಗೆ ಚರ್ಚಿಸಲಿದೆ ಎಂದರು.