ಸರ್ಕಾರ ಹಾಗೂ ರೈತರ ಮಧ್ಯೆ ಕೃಷಿಕ ಸಮಾಜ ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
- ಸೀತೂರು ಸಹಕಾರ ಸಂಘದ ಅನಂತರಾಮ ಉಪಾಧ್ಯ ಸಭಾಂಗಣದಲ್ಲಿ ಕೃಷಿ ಮೌಲ್ಯವರ್ಧನೆ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಸರ್ಕಾರ ಹಾಗೂ ರೈತರ ಮಧ್ಯೆ ಕೃಷಿಕ ಸಮಾಜ ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದು ಶಾಸಕ ಟಿ.ಡಿ. ರಾಜೇಗೌಡ ತಿಳಿಸಿದರು.
ಸೋಮವಾರ ಸೀತೂರು ಸಹಕಾರ ಸಂಘದ ಅನಂತರಾಮ ಉಪಾಧ್ಯ ಸಭಾಂಗಣದಲ್ಲಿ ಸೀತೂರು ವಿವಿಧೋದ್ದೇಶ ಪ್ರಾ.ಕೃ. ಗ್ರಾ. ಸಹಕಾರ ಸಂಘ ಹಾಗೂ ತಾಲೂಕು ಕೃಷಿಕ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೃಷಿ, ತೋಟ ಗಾರಿಕೆ ಮತ್ತು ಕೃಷಿಗೆ ಸಂಬಂಧಿತ ವಿವಿಧ ಇಲಾಖೆಗಳ ಆಶ್ರಯದಲ್ಲಿ ನಡೆದ ಕೃಷಿ ಮೌಲ್ಯವರ್ಧನೆ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಕೃಷಿ, ತೋಟಗಾರಿಕೆ, ಪಶು ಸಂಗೋಪನಾ ಇಲಾಖೆ ಕಾರ್ಯಕ್ರಮಗಳನ್ನು ಕೃಷಿಕ ಸಮಾಜ ರೈತರಿಗೆ ತಲುಪಿಸುತ್ತಿದೆ. ಸಹಕಾರಿ ಕ್ಷೇತ್ರದಲ್ಲಿ ಬಹು ದೊಡ್ಡ ಬದಲಾವಣೆಯಾಗಿದೆ. ಸಹಕಾರಿ ಕ್ಷೇತ್ರಕ್ಕೆ ಗಾಂಧಿ, ನೆಹರೂ ದೊಡ್ಡ ಕೊಡುಗೆ ನೀಡಿದ್ದು ಅವರ ಆಶಯ ಈಗ ಈಡೇರುತ್ತಿದೆ. ಸರ್ಕಾರ ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದರಿಂದ ದೇಶದ ಆರ್ಥಿಕತೆ ಬೆಳೆದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ರಾಜ್ಯ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ನಗರದ ಮಹದೇವಪ್ಪ ಮಾತನಾಡಿ, ನಮ್ಮ ರೈತರೇ ಈ ದೇಶದ ವಿಜ್ಞಾನಿಗಳು.ಅಡಕೆಗೆ ಬಂದ ಎಲೆ ಚುಕ್ಕಿ ರೋಗದಿಂದ ಸಾವಿರಾರು ಎಕ್ರೆ ತೋಟ ನಾಶವಾಗಿರುವ ಹಿನ್ನೆಲೆಯಲ್ಲಿ ಪರ್ಯಾಯ ಬೆಳೆ ಕಂಡು ಹಿಡಿಯಬೇಕು. ಮಲೆನಾಡು ಭಾಗದಲ್ಲಿ ಅಡಕೆ ಸಂಶೋಧನಾ ಕೇಂದ್ರ ತೆರೆಯಬೇಕಿದೆ. ಬರಗಾಲದಿಂದ ಈ ವರ್ಷ ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.2013 ರಲ್ಲಿ ಅತಿಯಾದ ಮಳೆಯಿಂದ ಅಡಕೆ, ಕಾಳು ಮೆಣಸು ಬೆಳೆಗೆ ಕೊಳೆ ರೋಗ ಬಂದಿತ್ತು. ಆ ಸಂದರ್ಭದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲಾ ಕೃಷಿಕ ಸಮಾಜದ ಒತ್ತಾಯದ ಮೇರೆಗೆ ಸರ್ಕಾರ ಬಜೆಟ್ ನಲ್ಲಿ ₹60 ಕೋಟಿ ಮೀಸಲಿಟ್ಟಿತ್ತು.ಈ ಬಾರಿ ₹10 ಕೋಟಿ ಬಜೆಟ್ ನಲ್ಲಿ ಮೀಸಲು ಇಡಲಾಗಿದೆ ಎಂದರು.
ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಸಂಸ್ಥೆಗಳ ಮಹಾ ಮಂಡಳದ ನಿರ್ದೇಶಕ ವೈ.ಎಸ್. ಸುಬ್ರಮಣ್ಯ ಮಾತನಾಡಿ ಮಲೆನಾಡಿನಲ್ಲಿ ಬೆಳೆ ಬೆಳೆಯಲಾಗುತ್ತಿರುವ ಅನೇಕ ಬೆಳೆಗಳ ಮೌಲ್ಯ ವರ್ಧನೆಯಾಗಲಿ. ಮುಖ್ಯವಾಗಿ ಹಸಿ ಹಾಗೂ ಒಣ ಅಡಕೆ ಮೌಲ್ಯ ವರ್ಧನೆಯಾಗಬೇಕಾಗಿದೆ.ಅಡಕೆಯಿಂದ ಅಡಕೆ ಪುಡಿ, ಸೋಪ್, ಚಾಕಲೇಟ್ ಸೇರಿದಂತೆ ಹಲವು ವಸ್ತುಗಳಾದ ಅಡಕೆ ತಟ್ಟೆ, ವ್ಯಾನಿಟಿ ಬ್ಯಾಗ್, ಪೈಂಟ್ ಸಹ ಮಾಡಬಹುದು. ಹಲಸಿನಿಂದ ಹಪ್ಪಳ, ಜ್ಯೂಸ್,ಐಸ್ ಕ್ರೀಂ, ಮೂಲಕ ಮೌಲ್ಯವರ್ಧನೆ ಮಾಡಿದರೆ ಮಾರುಕಟ್ಟೆಯ ಕೊರತೆ ಎದುರಾಗುವುದಿಲ್ಲ. ಮುಖ್ಯವಾಗಿ ರೈತರು ಗುಣಮಟ್ಟದ ಅಡಕೆ ತಯಾರಿಸಬೇಕು. ಪ್ರಸ್ತುತ ದೇಶದಲ್ಲಿ ಶೇ.30 ರಷ್ಟು ಅಡಕೆ ಕೊರತೆ ಇದೆ ಎಂದರು.ಸಭೆಯಲ್ಲಿ ಉಪಸ್ಥಿತರಿದ್ದ ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕ ಎಂ.ತಿರುಮಲೇಶ್ ಮಾಹಿತಿ ನೀಡಿ, ರೈತರು ಬೆಳೆದ ಬೆಳೆಗಳು ಹಾಗೇ ಮಾರುಕಟ್ಟೆಗೆ ಹೋದರೆ ಬೆಲೆ ಕಡಿಮೆಯಾಗುತ್ತದೆ. ಅದನ್ನು ಪರಿವರ್ತನೆ ಮಾಡಿ ಮೌಲ್ಯ ವರ್ಧನೆ ಮಾಡಿ ಮಾರುಕಟ್ಟೆಗೆ ಬಿಟ್ಟರೆ ಬೆಲೆ ಜಾಸ್ತಿ ಸಿಗಲಿದೆ. ಹಿಂದೆ ರಾಗಿ ಬೆಳೆಯುತ್ತಿದ್ದಾಗ ಕೇವಲ ರಾಗಿ ಮುದ್ದೆಗೆ ಸೀಮಿತ ವಾಗಿತ್ತು. ಮುಂದೆ ಮೌಲ್ಯ ವರ್ಧನೆ ಮಾಡಿದ್ದರಿಂದ ಬೇಕರಿಗಳಲ್ಲಿನ ಅರ್ಧ ಪದಾರ್ಥಗಳಲ್ಲಿ ರಾಗಿಯಿಂದ ತಯಾರಿಸಿದ ವಸ್ತುಗಳೇ ಆಗಿದೆ. ರೈತರೇ ವಿಜ್ಞಾನಿಗಳಾಗಿದ್ದು ರೈತರಿಂದ ಸಾಕಷ್ಟು ವಿಚಾರ ಕಲಿಯಬೇಕಾಗಿದೆ ಎಂದರು.
ಚಿಕ್ಕಮಗಳೂರು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಕೆ.ಮಂಗಳಾ ಜಿಲ್ಲೆಯಲ್ಲಿ 2. 20 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿರುವ ತೋಟಗಾರಿಕೆ ಬೆಳೆಯಲ್ಲಿ 1 ಲಕ್ಷ ಹೆಕ್ಚೇರ್ ನಲ್ಲಿ ಅಡಕೆ ಬೆಳೆಯುತ್ತಿದ್ದಾರೆ. ಮಲೆನಾಡಿನಲ್ಲಿ ಅಡಕೆ, ಕಾಳು ಮೆಣಸು, ಕಾಫಿ ಹೆಚ್ಚಾಗಿ ಬೆಳೆಯುತ್ತಾರೆ.ಮಲೆನಾಡು ಭಾಗದಲ್ಲಿ ಅತಿ ಮಳೆಯಿಂದ ಅಡಕೆಗೆ ರೋಗ ಕಾಣಿ ಸುತ್ತಿದೆ. ತರೀಕೆರೆ, ಕಡೂರು ಭಾಗದಲ್ಲಿ ಅಡಕೆಯಿಂದ ಲಾಭ ಹೆಚ್ಚಾಗಿದೆ.ರೈತರು ಅಡಕೆ ಜೊತೆಗೆ ಪರ್ಯಾಯ ಬೆಳೆ ಬಗ್ಗೆ ಗಮನ ನೀಡಬೇಕು.ರೈತರು ಮಿಶ್ರ ಬೆಳೆಯ ಜೊತೆ ಬಟರ್ ಫ್ರೋಟ್ ಬೆಳೆದು ಮೌಲ್ಯವರ್ಧನೆ ಮಾಡಬೇಕು ಎಂದು ಸಲಹೆ ನೀಡಿದರು.ಅಧ್ಯಕ್ಷತೆಯನ್ನು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್, ಸೀತೂರು ವಿ.ಎಸ್.ಎಸ್.ಎನ್.ಅಧ್ಯಕ್ಷ ಬಿ.ಪಿ.ಮೋಹನ್, ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ, ಶೃಂಗೇರಿ ತಾ.ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲ ಹೆಗಡೆ, ಕೊಪ್ಪ ತಾ.ಕೃಷಿಕ ಸಮಾಜದ ಅಧ್ಯಕ್ಷ ಕೆಸಕೊಡಿಗೆ ಕೃಷ್ಣಮೂರ್ತಿ,ತಾ.ಕೃಷಿಕ ಸಮಾಜದ ಉಪಾಧ್ಯಕ್ಷ ಡಿ.ಜಿ.ಮಂಜಪ್ಪ, ಕಾರ್ಯದರ್ಶಿ ನವೀನ್, ಖಜಾಂಚಿ ಚೇತನ್, ನಿರ್ದೇಶಕ ಎನ್.ಪಿ.ರಮೇಶ್ ಇದ್ದರು.ಪಿ.ಕೆ.ಬಸವರಾಜಪ್ಪ ಮಾತನಾಡಿದರು. ಪ್ರಗತಿಪರ ಕೃಷಿಕರಾದ ಮಾವಿನಹಿತ್ತಲು ನಾರಾಯಣ, ಬಿ.ಕೆ.ಜಾನಕೀರಾಮ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಎ.ಎಸ್.ವೆಂಕಟರಮಣ ರೈತ ಗೀತೆ ಹಾಡಿದರು. ಪಿ.ಮೋಹನ್ ಸ್ವಾಗತಿಸಿದರು.ಅನಿಲ್ ಕುಮಾರ್ ವಂದಿಸಿದರು.
--- ಬಾಕ್ಸ್---150 ವರ್ಷಗಳ ಇತಿಹಾಸದಲ್ಲೇ ಈ ವರ್ಷ ತೀವ್ರ ಬರಗಾಲ
ಕಳೆದ 150 ವರ್ಷಗಳ ಇತಿಹಾಸದಲ್ಲೇ ಈ ವರ್ಷ ತೀವ್ರ ಬರಗಾಲ ಬಂದಿದ್ದು ರೈತರು ಮಾಡಿದ ಕೃಷಿ ಸಾಲ ಪಾವತಿ ಅವಧಿಯನ್ನು ಸರ್ಕಾರ 1 ವರ್ಷಕ್ಕೆ ಮುಂದೂಡಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.ರೈತರು ಅನಗತ್ಯವಾಗಿ ನೀರನ್ನು ಪೋಲು ಮಾಡಬಾರದು. ರಾಷ್ಟ್ರೀಯ ಹೆದ್ದಾರಿ, ಲೋಕೋಪಯೋಗಿ ಇಲಾಖೆ ರಸ್ತೆ ಗಳನ್ನು ಶೀಘ್ರವಾಗಿ ದುರಸ್ತಿ ಮಾಡಿಸುತ್ತೇವೆ.ಗ್ರಾಮೀಣ ಭಾಗದ ರಸ್ತೆಗಳನ್ನು ಆದ್ಯತೆ ಮೇಲೆ ದುರಸ್ತಿ ಮಾಡುತ್ತೇವೆ ಎಂದು ಭರವಸೆ ನೀಡಿದರು.