ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಟ್ರ್ಯಾಕ್ಟರ್ ಮತ್ತು ಎತ್ತಿನಬಂಡಿಗಳ ಬೃಹತ್ ಮೆರವಣಿಗೆ, ರೈತ ಜಾಗೃತಿ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಜಿಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಸರ್ಕಾರಿ ಪದವಿ ಕಾಲೇಜು ಆವರಣದ, ದಿ. ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣದಲ್ಲಿ ಸೆ.9 ರಂದು ಬೆಳಗ್ಗೆ 10 ಕ್ಕೆ ಜರುಗಲಿದೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ್‌ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಶ್ರಯದಲ್ಲಿ ಟ್ರ್ಯಾಕ್ಟರ್ ಮತ್ತು ಎತ್ತಿನಬಂಡಿಗಳ ಬೃಹತ್ ಮೆರವಣಿಗೆ, ರೈತ ಜಾಗೃತಿ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಹಾಗೂ ಜಿಲ್ಲಾ ತಾಲೂಕು ಘಟಕಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಸರ್ಕಾರಿ ಪದವಿ ಕಾಲೇಜು ಆವರಣದ, ದಿ. ವಿಶ್ವನಾಥರಡ್ಡಿ ಮುದ್ನಾಳ ಸಭಾಂಗಣದಲ್ಲಿ ಸೆ.9 ರಂದು ಬೆಳಗ್ಗೆ 10 ಕ್ಕೆ ಜರುಗಲಿದೆ ಎಂದು ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ್‌ ತಿಳಿಸಿದ್ದಾರೆ.

ಭಾನುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆ ನಗರದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ವೃತ್ತದಿಂದ ಸರ್ಕಾರಿ ಪದವಿ ಕಾಲೇಜು ಸಭಾಂಗಣದವರೆಗೆ ಭವ್ಯ ರೈತರ ಎತ್ತಿನ ಬಂಡಿ, ಟ್ರ್ಯಾಕ್ಟರ್ ಗಳ ಮೆರವಣಿಗೆ ನಡೆಯಲಿದೆ. ನಂತರ ನಡೆಯುವ ಜಾಗೃತಿ ಸಮಾವೇಶದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.

ನಂತರ ರೈತರ ಸಮಸ್ಯೆಗಳು ಹಾಗೂ ಸವಾಲುಗಳ ಕುರಿತು ಚಿಂತನ ಮಂಥನ ನಡೆಯಲಿದೆ. ಸಮಾರಂಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಕೃಷಿಗೆ ಸಂಬಂಧಿಸಿದ ಅಧಿಕಾರಿಗಳು ಭಾಗಿಯಾಗಲಿದ್ದು, ಪ್ರಸಕ್ತ ರೈತರ ಸಮಸ್ಯೆಗಳ ಕುರಿತು ಕೂಲಂಕಷ ಚರ್ಚೆ ನಡೆಯಲಿದೆ ಎಂದು ಮಹೇಶ್‌ ಹೇಳಿದರು.

* ಬೇಡಿಕೆಗಳು: ರೈತ ವರ್ಗ ಕಳೆದ 4 ವರ್ಷಗಳಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ತೀರಾ ತೊಂದರೆಯಲ್ಲಿದ್ದು, ಸಮಸ್ಯೆ ಪರಿಹರಿಸಲು ಸರ್ಕಾರಿ, ಮೈಕ್ರೋ ಫೈನಾನ್ಸಗಳ ಹಾಗೂ ಇತರೆ ಖಾಸಗಿ ಬ್ಯಾಂಕುಗಳ ಕೃಷಿ ಸಾಲ, ಟ್ರ‍್ಯಾಕ್ಟರ್‌ ಸಾಲ ಮತ್ತು ಇತರೆ ಸಾಲಗಳ ವಸೂಲಾತಿಯನ್ನು ತಕ್ಷಣದಿಂದ ತಡೆಹಿಡಿಯಬೇಕು.

ನೋಟಿಸ್ ನೀಡಿ, ಟ್ರ‍್ಯಾಕ್ಟರ್‌ ಮುಟ್ಟುಗೋಲು ಹಾಕಿದವರ ಮೇಲೆ ಪೊಲೀಸ್‌ ಕೇಸು ದಾಖಲಿಸಿ ಕ್ರಮ ಜರುಗಿಸುವಂತೆ ಕಟ್ಟು-ನಿಟ್ಟಿನ ಆದೇಶ ಮಾಡಬೇಕು, ಸರ್ಕಾರದಿಂದ ರೈತರಿಗೆ ಬರುವ ಸಮಾಜ ಭದ್ರತಾ ಯೋಜನೆಯ ಹಣ, ಪಿಂಚಣಿ, ಸಹಾಯಧನ, ಗ್ಯಾರಂಟಿ ಹಣ, ಪರಿಹಾರ ಇತರೆ ಯಾವುದೇ ಹಣವನ್ನು ಬ್ಯಾಂಕಿನವರು ಹಿಡಿದುಕೊಳ್ಳಬಾರದು, ಜಿಲ್ಲೆಯನ್ನು ಬರ ಜಿಲ್ಲೆಯನ್ನಾಗಿ ಘೋಷಿಸಿ, ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಬೇಕು ಜೊತೆಗೆ ಒಂದು ಎಕರೆಗೆ 50 ಸಾವಿರ ರು. ಬೆಳೆ ಪರಿಹಾರವನ್ನು ಘೋಷಿಸಿ ಸಕಾಲದಲ್ಲಿ ರೈತರ ಖಾತೆಗೆ ಜಮೆ ಮಾಡಬೇಕು, ಡಾ.ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು, ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಬೆಳೆ ಬೆಳೆಯುವರಿದ್ದು, ಈ ಭಾಗದಲ್ಲಿ ಮೆಣಸಿನಕಾಯಿ ಖರೀದಿ ಕೇಂದ್ರ ಇರುವುದಿಲ್ಲ. ಇದರಿಂದ ದೂರದ ಹಾವೇರಿ ಜಿಲೆಯ ಬ್ಯಾಡಗಿ ನಗರಕ್ಕೆ ಹೋಗುವುದರಿಂದ ಹೆಚ್ಚುವರಿ ಸಾಗಾಣಿಕೆ ವೆಚ್ಚ ರೈತರ ಮೇಲೆ ಬೀಳುತ್ತಿರುವುದರಿಂದ ಶಹಾಪುರ ಎಪಿಎಂಸಿಯಲ್ಲಿ ತಕ್ಷಣ ಮೆಣಸಿನಕಾಯಿ ಖರೀದಿ ಕೇಂದ್ರ ಸ್ಥಾಪಿಸುವುದರ ಜೊತೆಗೆ ಕೋಲ್ಡ್‌ ಸ್ಟೋರೇಜುಗಳನ್ನು ಜಿಲ್ಲೆಯ ಎಲ್ಲಾ ಎಪಿಎಂಸಿಗಳಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ರಸಗೊಬ್ಬರ ಪೂರೈಸುವ ಎಲ್ಲಾ ಕಂಪನಿಗಳ ಪ್ರತಿನಿಧಿಗಳ, ವಿತರಕರು, ಕೃಷಿ ಇಲಾಖೆಯ ಅಧಿಕಾರಿಗಳ, ಕೆಎಸ್‌ಸಿಎಂಎಫ್, ಕೆಎಸ್‌ಸಿಸಿ ಮತ್ತು ನಮ್ಮ ಸಂಘಟನೆಯ ಪ್ರಮುಖ ರೈತ ಮುಖಂಡರನ್ನೊಳಗೊಂಡು ಪ್ರತಿ ವರ್ಷ ತಪ್ಪದೆ ಮುಂಗಾರು ಮತ್ತು ಹಿಂಗಾರು ಬಿತ್ತನೆ ಮುಂಚಿತವಾಗಿ ಪ್ರತ್ಯೇಕ ಸಭೆ ಮಾಡಿ ಅಹವಾಲು ಸ್ವೀಕರಿಸಿ ಚರ್ಚಿಸಿ ಪರಿಹಾರ ಒದಗಿಸಬೇಕು ಎಂದರು.

ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಚೂನಪ್ಪ ಪೂಜೇರಿ, ರಾಜ್ಯ ಗೌರವಾಧ್ಯಕ್ಷರಾದ ಶಶಿಕಾಂತ ಗುರೂಜಿ ಸೇರಿದಂತೆ ಅನೇಕರು ಭಾಗಿಯಾಗಲಿದ್ದು, ರೈತರು ಸಮಸ್ತ ರೈತ ಪರ ಚಿಂತಕರು, ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಶಾಂತರಡ್ಡಿಗೌಡ ಪೊಲೀಸ್‌ ಪಾಟೀಲ್, ರಾಜ್ಯ ಪ್ರಧಾನ ಸಂಚಾಲಕ ನಾಗಯ್ಯಸ್ವಾಮಿ ದೇಸಾಯಿಗುರು, ಜಿಲ್ಲಾಧ್ಯಕ್ಷ ವಿಜಯಕುಮಾರ ಮುಷ್ಟೂರು, ಯುವ ಘಟಕ ಜಿಲ್ಲಾದ್ಯಕ್ಷ ಮಾಂತಗೌಡ ಪಾಟೀಲ್ ಮದ್ದರ್ಕಿ, ಹುಣಸಗಿ ಅಧ್ಯಕ್ಷ ಮಲ್ಲಣ್ಣಗೌಡ ಪೊಲೀಸ್ ಪಾಟೀಲ್‌, ರಾಮನಾಥರಡ್ಡಿ, ಅಂಬ್ರೇಷ್ ಗೌಡ ಕಟ್ಟಿಮನಿ, ಗೌಡಪ್ಪಗೌಡ, ಮೌನೇಶ ಮಲ್ಕಪ್ಪನಳ್ಳಿ ಸೇರಿದಂತೆ ಇನ್ನಿತರರು ಇದ್ದರು.

ರೈತರ ಹಣ ನೀಡದ ಕೋರ್‌ ಗ್ರೀನ್‌: ಆರೋಪ: ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆ ತುಮಕೂರ ಅವರು ಆರೇಳು ವರ್ಷಗಳಿಂದ ರೈತರಿಂದ ಕಬ್ಬು ಖರೀದಿಸಿ 14 ದಿನಗಳ ಒಳಗೆ ಕಬ್ಬಿನ ಮೊತ್ತ ನೀಡದೆ ೮-೧೦ ತಿಂಗಳು ಸತಾಯಿಸಿ ಹಣ ಕೊಡುತ್ತಿದ್ದಾರೆ. ಸುಮಾರು ವರ್ಷಗಳಿಂದ ರೈತರಿಗೆ ಕಬ್ಬಿನ ಬಾಕಿ ನೀಡದೆ ರೈತರ ಬಾಕಿ ಹಣದಿಂದ ಕಾರ್ಖಾನೆ ನಡೆಸುತ್ತಿರುವುದಲ್ಲದೆ ಸದರಿ ವಿಷಯದಲ್ಲಿ ಕೋರ್ಟನಿಂದ ತಡೆಯಾಜ್ಞೆ ತಂದು ಸರ್ಕಾರದ ಹಾಗೂ ರೈತರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಬಡ್ಡಿ ಸಹಿತ ರೈತರ ಬಾಕಿ ಪಾವತಿಸುವ ವರೆಗೆ ಯಾವುದೆ ಕಾರಣಕ್ಕೆ ಸದರಿ ಕಾರ್ಖಾನೆ ಆರಂಭಿಸಲು ಅನುಮತಿ ನೀಡಬಾರದು. ಸದರಿ ವಿಷಯದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರದಂತೆ ಕಂಪನಿ ಮಾಲೀಕರಿಂದ ಘೋಷಣಾ ಪತ್ರ ಪಡೆಯುವುದರ ಜೊತೆಗೆ ನಿಯಮಾನುಸಾರ ರೈತರ ಕಚ್ಚಿನ ಹಣ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಕಾರ್ಯಕ್ರಮದ ಮುಖಾಂತರ ಒತ್ತಾಯಿಸಲಾಗುವುದು ಎಂದು ಮಹೇಶ ಸುಬೇದಾರ್‌ ತಿಳಿಸಿದರು.