ನಾಲೆಗಳಿಗೆ ನೀರು ಹರಿಸುವಂತೆ ರೈತ ಸಂಘದಿಂದ ಹೆದ್ದಾರಿ ತಡೆದು ಪ್ರತಿಭಟನೆ

| Published : Jun 22 2025, 11:47 PM IST

ನಾಲೆಗಳಿಗೆ ನೀರು ಹರಿಸುವಂತೆ ರೈತ ಸಂಘದಿಂದ ಹೆದ್ದಾರಿ ತಡೆದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ರೈತರು ಬೆಳೆದಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೃಷಿ ಚಟುವಟಿಕೆಗಳು ಹಿಂದುಳಿಯುತ್ತಿದೆ. ಈ ಬಾರಿ ಎಲ್ಲೆಡೆ ಉತ್ತಮ ಮಳೆಯಾಗಿದ್ದು, ಕನ್ನಂಬಾಡಿ ಅಣೆಕಟ್ಡೆಯಲ್ಲಿ ಈಗಾಗಲೇ 120 ಅಡಿಗಳಷ್ಡು ನೀರು ಸಂಗ್ರಹಗೊಂಡಿದೆ. ರೈತರ ಕೃಷಿ ಚಟುವಟಿಕೆಗಳಿಗಾಗಿ ನಾಲೆಗಳಿಗೆ ನೀರು ಹರಿಸದೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನವಹಿಸಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ಕೆಳಭಾಗದ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನೂರಾರು ರೈತರು ಹೆದ್ದಾರಿ ತಡೆ ಮಾಡಿ ಪ್ರತಿಭಟಿಸಿದರು.

ಪಟ್ಟಣದ ಕುವೆಂಪು ವೃತ್ತದ ಬಳಿ ಭೂಮಿತಾಯಿ ಹೋರಾಟ ಸಮಿತಿಯಿಂದ ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ರೈತರು ಸೇರಿ ಕೆಲಕಾಲ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಜಿಲ್ಲೆಯ ರೈತರು ಬೆಳೆದಿರುವ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕೃಷಿ ಚಟುವಟಿಕೆಗಳು ಹಿಂದುಳಿಯುತ್ತಿದೆ. ಈ ಬಾರಿ ಎಲ್ಲೆಡೆ ಉತ್ತಮ ಮಳೆಯಾಗಿದ್ದು, ಕನ್ನಂಬಾಡಿ ಅಣೆಕಟ್ಡೆಯಲ್ಲಿ ಈಗಾಗಲೇ 120 ಅಡಿಗಳಷ್ಡು ನೀರು ಸಂಗ್ರಹಗೊಂಡಿದೆ. ಮತ್ತಷ್ಟು ನೀರು ಅಣೆಕಟ್ಟಗೆ ಹರಿದು ಬರುವ ಸಾಧ್ಯತೆಯಿದ್ದರೂ ರೈತರ ಕೃಷಿ ಚಟುವಟಿಕೆಗಳಿಗಾಗಿ ನಾಲೆಗಳಿಗೆ ನೀರು ಹರಿಸದೆ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮೌನವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲೆಯ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕು. ಈಗಾಗಲೇ ಮೂರು ಬಾರಿ ಕಾವೇರಿ ನೀರಾವರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸ್ಥಳೀಯ ಶಾಸಕರಿಗೂ ಮಾಹಿತಿ ನೀಡಲಾಗಿದೆ. ಕೂಡಲೇ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರೆ ಮುಂದಿನ ದಿನದಲ್ಲಿ ಉಸ್ತುವಾರಿ ಸಚಿವರಿಗೆ ಘೇರಾವ್ ಮಾಡಿ ಪ್ರತಿಟಭನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.

ಹೆದ್ದಾರಿ ತಡೆಯಿಂದ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತು ಕೆಲಕಾಲ ಸಂಚಾರ ಅಸ್ತವ್ಯಸ್ಥವಾಗಿತ್ತು. ಪೊಲೀಸರು ಮಧ್ಯೆ ಪ್ರವೇಸಿ ತಿಳಿಗೊಳಿಸಿದರು.

ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರಾದ ಮಹದೇವು ಹುಂಡವಾಡಿ, ಮಹೇಶ್, ಎಂ.ವಿ ಕೃಷ್ಣ, ಪ್ರಕಾಶ್, ಶಿವಣ್ಣ, ರಾಮಕೃಷ್ಣ, ಮಹದೇವು, ಮಹಾಲಿಂಗು, ರಾಮಚಂದ್ರು ಸೇರಿದಂತೆ ಇತರ ರೈತರು ಭಾಗವಹಿಸಿದರು.