ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನರೇಗಾ ಯೋಜನೆಯಡಿ ಬಾಳೆ ಬೆಳೆ ಅಭಿವೃದ್ಧಿಗೆ ನೀಡುತ್ತಿದ್ದ ಸೌಲಭ್ಯ ಸ್ಥಗಿತಗೊಳಿಸಿರುವ ತೋಟಗಾರಿಕಾ ಇಲಾಖೆ ಕ್ರಮ ಖಂಡಿಸಿದ ರೈತ ಸಂಘದ ಮುಖಂಡರು ಬಾಳೆ ಬೆಳೆಗೆ ನರೇಗಾ ಯೋಜನೆ ಮೂಲಕ ನೀಡುತ್ತಿರುವ ಸೌಲಭ್ಯ ಮರು ಜಾರಿಗೊಳಿಸುವಂತೆ ಒತ್ತಾಯಿಸಿದರು.ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ನೇತೃತ್ವದಲ್ಲಿ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್ ಅವರನ್ನು ಭೇಟಿ ಮಾಡಿದ ರೈತ ಮುಖಂಡರು, ನರೇಗಾ ಯೋಜನೆ ಬಾಳೆ ಬೆಳೆ ಸೌಲಭ್ಯ ಮುಂದುವರಿಸುವಂತೆ ಒತ್ತಾಯಿಸಿದರು.
ಕೇಂದ್ರ ಸರ್ಕಾರದ ನರೇಗಾ ಮೂಲಕ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಿರುವುದು ರೈತರಿಗೆ ವರದಾನವಾಗಿದೆ. ಕೃಷಿ ಹೊಂಡ ನಿರ್ಮಾಣ, ಬದು ಹಾಕಿಕೊಳ್ಳುವುದು, ತೆಂಗು ಅಭಿವೃದ್ಧಿ, ಬಾಳೆ ಬೇಸಾಯ ಮುಂತಾದ ಹತ್ತು ಹಲವು ತೋಟಗಾರಿಕಾ ಬೆಳೆಗಳಿಗೆ ನರೇಗಾ ಯೋಜನೆ ಅನುಕೂಲ ಕಲ್ಪಿಸುತ್ತಿತ್ತು. ಆದರೆ, ಏಕಾಏಕಿ ನರೇಗಾ ವ್ಯಾಪ್ತಿಯಿಂದ ಬಾಳೆ ಬೆಳೆಯನ್ನು ಹೊರಗಿಟ್ಟಿರುವುದು ರೈತರಿಗೆ ಮಾಡಿರುವ ಮಹಾ ವಂಚನೆ ಎಂದು ದೂರಿದರು.ತಾಲೂಕಿನಲ್ಲಿ ಬಾಳೆ ಬೇಸಾಯ ಮಾಡುವ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರೈತರಿಗೆ ಉಪಯುಕ್ತವಾದ ಬೇಸಾಯಕ್ಕೆ ತೋಟಗಾರಿಕಾ ಇಲಾಖೆ ಸಹಕಾರ ನೀಡದಿದ್ದರೆ ಸರ್ಕಾರದ ಯೋಜನೆಗಳಿಂದ ರೈತರಿಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ತಾಲೂಕಿನ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಅಡಿಕೆ ಬೆಳೆಯುತ್ತಿದ್ದಾರೆ. ಸರ್ಕಾರ ತಾಲೂಕನ್ನು ಅಡಿಕೆ ಬೇಸಾಯ ಕೃಷಿ ವ್ಯಾಪ್ತಿಗೆ ಒಳಪಡಿಸದ ಕಾರಣ ಅಡಿಕೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಹಾಗೂ ತಾಂತ್ರಿಕ ನೆರವಿನ ಸಹಕಾರ ದೊರಕುತ್ತಿಲ್ಲ ಎಂದು ದೂರಿದರು.ನರೇಗಾ ಯೋಜನೆ ಮೂಲಕವೂ ರೈತರು ಅಡಿಕೆ ಬೆಳೆಯಲು ಸೌಲಭ್ಯ ದೊರಕುತ್ತಿಲ್ಲ. ಸರ್ಕಾರ ಅಡಿಕೆ ಬೆಳೆಗೆ ಇರುವ ಪ್ರಾದೇಶಿಕ ಮಿತಿ ತೆಗೆದು ಹಾಕಿ ಅಡಿಕೆ ತೋಟಗಳ ಸಮಗ್ರ ಮಾಹಿತಿ ಪಡೆದು ತಮ್ಮ ಮೇಲಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವಂತೆ ಪುಟ್ಟೇಗೌಡ ಒತ್ತಾಯಿಸಿದರು.
ನರೇಗಾ ಯೋಜನೆ ಮೂಲಕ ರೈತರು ಬೆಳೆದಿರುವ ಬೆಳೆಗಳಿಗೆ ಜಾಬ್ ಕಾರ್ಡ್‌ದಾರರ ಕೂಲಿ ಹಣವನ್ನು ಮಾತ್ರ ನೀಡುತ್ತಿದ್ದು ರೈತರು ಕೊಂಡು ತಂದ ಪರಿಕರಗಳ ಸಾಮಗ್ರಿ ಬಿಲ್ ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಹಲವು ಸಲ ತಾಲೂಕು ರೈತಸಂಘ ಪ್ರತಿಭಟನೆ ಮಾಡಿದ್ದರೂ ಫಲ ಮಾತ್ರ ಸಿಕ್ಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತರ ಅಹವಾಲು ಆಲಿಸಿ ಮಾತನಾಡಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಡಿ.ಲೋಕೇಶ್, ಸಪ್ಲೆ ಬಿಲ್ ಬಗ್ಗೆ ಉಂಟಾಗುತ್ತಿರುವ ತಾಂತ್ರಿಕ ದೋಷಗಳನ್ನು ವಿವರಿಸಿದರು. ಬಾಳೆ ಬೇಸಾಯಗಾರರಿಗೆ ಆಗುತ್ತಿರುವ ನಷ್ಟವನ್ನು ನಮ್ಮ ಇಲಾಖೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗುವುದು. ಸರ್ಕಾರದ ನಿರ್ದೇಶನವನ್ನು ನಾವು ಪಾಲಿಸಲೇಬೇಕಾಗಿದೆ ಎಂದರು
ಈ ವೇಳೆ ರೈತಮುಖಂಡರಾದ ಹೊನ್ನೇಗೌಡ, ಕೃಷ್ಣಾಪುರ ರಾಜಣ್ಣ ಸೇರಿದಂತೆ ಹಲವರಿದ್ದರು.