ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ವಿವಾದಿತ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವೇ ವಾಪಸ್ ಪಡೆದಿದ್ದರೂ, ರಾಜ್ಯದಲ್ಲಿ ಕುಂಟುನೆಪ ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ವಂಚಿಸುತ್ತಿದೆ. ಇದನ್ನು ಖಂಡಿಸಿ ಇದೇ 13ರಂದು ಬೆಳಗಾವಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕದ ಅಧ್ಯಕ್ಷ ಹನುಮೇಗೌಡ ತಿಳಿಸಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತರ ನಿರಂತರ ಧರಣಿಗೆ ಮಣಿದ ಕೇಂದ್ರ ಸರ್ಕಾರವು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಿತು. ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಮಾತನಾಡುತಿತ್ತು. ಆದರೆ, ಅಧಿಕಾರಕ್ಕೆ ಒಂದೂವರೆ ವರ್ಷ ಕಳೆದರೂ, ಈ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಪ್ರಸನ್ನ ಮಾತನಾಡಿ, ಸುವರ್ಣಸೌಧ ಮುತ್ತಿಗೆಗೆ ಜಿಲ್ಲೆಯಿಂದ 500ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹೊರಡಲು ಸಿದ್ಧತೆ ನಡೆದಿದೆ. ಈಗಾಗಲೇ ರಾಜ್ಯದ ಇತರೆ ಜಿಲ್ಲೆಗಳಿಂದ ರೈತರು ಬೆಳಗಾವಿಯತ್ತ ಹೊರಟಿದ್ದಾರೆ. ಭೂಸ್ವಾಧೀನದ ವಿರುದ್ಧ ಹೋರಾಟಕ್ಕೆ ಮುಂದಾದ ರೈತರ ಮೇಲೆ ಕೋಲಾರದಲ್ಲಿ ತಹಸೀಲ್ದಾರ್ ಸಮ್ಮುಖದಲ್ಲೇ ಹಲ್ಲೆ ನಡೆಸಿರುವುದು ಖಂಡನೀಯ. ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ವಕ್ಫ್ ಆಸ್ತಿ ವಿಚಾರದಲ್ಲಿ ರೈತರ ಪರವಾಗಿ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ತನ್ನದೇ ಸರ್ಕಾರ ಇದ್ದಾಗ ಅತಿ ಹೆಚ್ಚು ರೈತರ ಜಮೀನುಗಳ ಪಹಣಿಯಲ್ಲಿ ಹೆಸರು ಬದಲಾಗಿದೆ. ರೈತರಿಗೆ ನೋಟಿಸ್‌ಗಳು ಸಹ ಬಂದಿವೆ. ವಕ್ಫ್ ಆಸ್ತಿ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ರೈತರಿಗೆ ಮೋಸ ಮಾಡುತ್ತಿವೆ. ವಕ್ಫ್ ಆಸ್ತಿ ವಿವಾದದಲ್ಲಿ ರೈತರಿಗೆ ಅನ್ಯಾಯವಾಗಲು ರೈತ ಸಂಘ ಬಿಡುವುದಿಲ್ಲ ಎಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆ ನೆಪದಲ್ಲಿ ಸ್ವಾಧೀನ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಸ್ವಾಧೀನ ಮಾಡಿಕೊಂಡಿರುವ ನೂರಾರು ಎಕರೆ ಕೃಷಿ ಭೂಮಿ ಪಾಳುಬಿದ್ದಿದೆ. ಈಗ ಕ್ವಿನ್ ಸಿಟಿ ನೆಪದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮುಖಂಡರಾದ ಸತೀಶ್, ನಾರಾಯಣಗೌಡ, ವಾಸು, ಮಹಾದೇವ್ ಇದ್ದರು.ಫೋಟೋ-11ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅನೇಕ ಮುಖಂಡರು ಪಾಲ್ಗೊಂಡಿದ್ದರು.