ಸಮರ್ಪಕವಾಗಿ ರಸಗೊಬ್ಬರ ಪೂರೈಸಲು ರೈತ ಸಂಘ ಆಗ್ರಹ

| Published : Jul 29 2025, 01:02 AM IST

ಸಾರಾಂಶ

ರಸಗೊಬ್ಬರಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದರೂ ಸಕಾಲಕ್ಕೆ ಸರ್ಕಾರ ಗೊಬ್ಬರ ಒದಗಿಸುವಲ್ಲಿ ವಿಫಲವಾಗಿವೆ.

ಹಿರೇಕೆರೂರು: ಸಮರ್ಪಕವಾಗಿ ರಸಗೊಬ್ಬರ ಪೂರೈಕೆ, ಅತಿವೃಷ್ಟಿಯಿಂದ ಬೆಳೆನಷ್ಟ ಪರಿಹಾರ ಮತ್ತು ಮಧ್ಯಂತರ ಬೆಳೆವಿಮೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಘಟಕದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಎಂ. ರೇಣುಕಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಸಂಘದ ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಕಳೆದ 20 ದಿನಗಳಲ್ಲಿ ಹಗಲು- ರಾತ್ರಿ ಎಡಬಿಡದೇ ಮಳೆ ಬಿದ್ದಿದೆ. ಇದರಿಂದ ಜಮೀನಿನಲ್ಲಿ ತೇವಾಂಶ ವಿಪರೀತ ಹೆಚ್ಚಳವಾಗಿ ಬೆಳೆಹಾಳಾಗಿದ್ದು, ಮಕ್ಕೆಜೋಳ, ಸೋಯಾಬಿನ್, ಹತ್ತಿ, ಶೇಂಗಾ ಸೇರಿದಂತೆ ಹಲವಾರು ಬೆಳೆಗಳಿಗೆ ನಷ್ಟವಾಗಿದೆ. ಜಮೀನಿನಲ್ಲಿ ಮುಳ್ಳುಸಜ್ಜೆ ಕಳೆ ಬೆಳೆದು ಕಳೆ ಕೀಳಲು ಪ್ರತಿ ಎಕರೆಗೆ ₹10 ಸಾವಿರ ಖರ್ಚಾಗಿದೆ.

ನಿರಂತರ ಮಳೆಗೆ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಪರಿಸ್ಥಿತಿ ಹೀಗಿದ್ದರೂ ಜನ ಪ್ರತಿನಿಧಿಗಳು ಸುಮ್ಮನೆ ಕುಳಿತಿರುವುದು ವಿಪರ‍್ಯಾಸ. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು, ಬೆಳೆ ಸಮೀಕ್ಷೆ ನಡೆಸಿ ಬೆಳೆನಷ್ಟ ಹೊಂದಿದ ರೈತರಿಗೆ ಪರಿಹಾರ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ರಸಗೊಬ್ಬರಕ್ಕೆ ಸಾಕಷ್ಟು ಬಾರಿ ಒತ್ತಾಯಿಸಿದರೂ ಸಕಾಲಕ್ಕೆ ಸರ್ಕಾರ ಗೊಬ್ಬರ ಒದಗಿಸುವಲ್ಲಿ ವಿಫಲವಾಗಿವೆ. ಜಿಟಿ ಜಿಟಿ ಮಳೆಯಿಂದ ಬೆಳೆನಷ್ಟವಾಗಿದೆ. ರೈತರು ಯೂರಿಯಾ ಗೊಬ್ಬರಕ್ಕೆ ಅಲೆದಾಡುತ್ತಿದ್ದು, ಯೂರಿಯಾ ಬಳಸಿ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕೃಷಿ ಇಲಾಖೆ ಅಗತ್ಯಕ್ಕಿಂತ ಹೆಚ್ಚಿನ ಗೊಬ್ಬರ ನೀಡಿದೆ ಎಂದು ಸಬೂಬು ಹೇಳುತ್ತಿದ್ದು, ಕೃಷಿ ಮಂತ್ರಿಗಳು ಹಾಗೂ ಜಿಲ್ಲಾ ಉಸ್ತಾವರಿ ಸಚಿವರು ರಸಗೊಬ್ಬರ ಒದಗಿಸಬೇಕೆಂದರು.ಕಳೆದ ವರ್ಷ ಬೆಳೆವಿಮೆ ನೋಂದಣಿ ಮಾಡಿಸಿದ ರೈತರಿಗೆ ನೂರಾರು ರೈತರಿಗೆ ವಿಮೆ ಬಂದಿಲ್ಲ. ಮರು ಪರೀಶೀಲನೆ ಮಾಡಿ ವಿಮೆ ಪರಿಹಾರ ನೀಡಬೇಕೆಂದು ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಾಯಿಸಲಾಗಿತ್ತು. ಕೂಡಲೇ ವಿಮೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.ಸಹಾಯಕ ಕೃಷಿ ನಿರ್ದೇಶಕ ಹಿತೇಂದ್ರ ಇದ್ದರು. ರೈತ ಸಂಘ ಘಟಕದ ಅಧ್ಯಕ್ಷ ಪ್ರಭುಗೌಡ ಬ. ಪ್ಯಾಟಿ, ಉಪಾಧ್ಯಕ್ಷ ಗಂಗನಗೌಡ ಮುದಿಗೌಡ್ರ, ಪ್ರಧಾನ ಕಾರ‍್ಯದರ್ಶಿ ಶಂಬಣ್ಣ ಮುತ್ತಿಗಿ, ಎಚ್.ಎಚ್. ಮುಲ್ಲಾ, ರಾಜು ಮುತ್ತಿಗಿ, ಶಂಕ್ರಪ್ಪ ಶಿರಗಂಬಿ, ಶಾಂತನಗೌಡ ಪಾಟೀಲ, ಶಂಕ್ರಪ್ಪ ಪುಟ್ಟಕ್ಕಳವರ, ನವೀನ ಹುಲ್ಲತ್ತಿ, ಯಶವಂತ ತಿಮಕಾಪುರ, ಮರಿಗೌಡ, ಪಾಟೀಲ, ಜಗದೀಶ ಕಡೂರು, ಸೋಮಪ್ಪ ಕಳೇರ್, ಮಲ್ಲನಗೌಡ ಮಾಳಗಿ, ಬಸವರಾಜಪ್ಪ, ಕರಬಸಪ್ಪ ಬಣಕಾರ, ಹನುಮಂತಪ್ಪ ಕಾಡಪ್ಪನವರ ಇತರರು ಇದ್ದರು.