ಎಕರೆಗೆ ₹25 ಸಾವಿರ ಬೆಳೆಹಾನಿ ಪರಿಹಾರ ನೀಡಲು ರೈತ ಸಂಘ ಆಗ್ರಹ

| Published : Aug 22 2025, 01:00 AM IST

ಸಾರಾಂಶ

ಗೋವಿನಜೋಳ, ಹತ್ತಿ, ಸೋಯಾಬಿನ್, ಭತ್ತ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ 35 ಸಾವಿರಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಗೆ ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಹಿರೇಕೆರೂರು ತಾಲೂಕಿನ 11,500 ರೈತರು ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ವಿತರಿಸಬೇಕು ಎಂದು ರೈತರು ಒತ್ತಾಯಿಸಿದರು.

ಹಿರೇಕೆರೂರು: ರೈತರ ತಾಳ್ಮೆ ಪರೀಕ್ಷಿಸದೇ ತಕ್ಷಣ ಬೆಳೆಹಾನಿ ಸಮೀಕ್ಷೆ ನಡೆಸಿ, ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ನೀಡಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂರು ತಿಂಗಳಿನಿಂದ ಜಿಲ್ಲಾದ್ಯಂತ ಜಿಟಿ ಜಿಟಿ ಮಳೆಗೆ ಬೆಳೆಗಳು ನಾಶವಾಗಿವೆ. ಈಗಾಗಲೇ ರೈತರು ಸಾಲ ಮಾಡಿ, ಗೊಬ್ಬರ ಬೀಜ ಖರೀದಿಸಿ ಎರಡು ಬಾರಿ ಮೆಕ್ಕೆಜೋಳ ಬಿತ್ತಿದ್ದಾರೆ. ಅತಿವೃಷ್ಟಿಯಿಂದ ಶೇ. 70ರಷ್ಟು ಬೆಳೆನಾಶವಾಗಿದೆ ಎಂದರು.ಗೋವಿನಜೋಳ, ಹತ್ತಿ, ಸೋಯಾಬಿನ್, ಭತ್ತ ಬಿತ್ತನೆಯಾಗಿದ್ದು, ಜಿಲ್ಲೆಯಲ್ಲಿ 35 ಸಾವಿರಕ್ಕೂ ಹೆಚ್ಚು ರೈತರು ಕೃಷಿ ಇಲಾಖೆಗೆ ಬೆಳೆಹಾನಿ ಕುರಿತು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ ಹಿರೇಕೆರೂರು ತಾಲೂಕಿನ 11,500 ರೈತರು ಅರ್ಜಿ ಸಲ್ಲಿಸಿದ್ದಾರೆ. ಅಧಿಕಾರಿಗಳು ಕೂಡಲೇ ಸಮೀಕ್ಷೆ ಮಾಡಿ ಪರಿಹಾರ ವಿತರಿಸಬೇಕು ಎಂದರು.ರಾಜ್ಯ ರೈತ ಸಂಘದ ರಾಜ್ಯ ಸಂಚಾಲಕ ಮಾಲತೇಶ ಪೂಜಾರ, ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಶಾಂತನಗೌಡ ಪಾಟೀಲ, ಈರಪ್ಪ ಮಳ್ಳೂರ, ಶಂಕ್ರಪ್ಪ ಮಕ್ಕಳ್ಳಿ, ಹಾಲಪ್ಪ ಮಡಿವಾಳರ, ಪುಟ್ಟಪ್ಪ ಶಿದ್ದಪ್ಪಳವರ ಇದ್ದರು.ವಾರಸುದಾರರಿಗೆ ಚಿನ್ನದ ಸರ ಹಸ್ತಾಂತರ

ರಾಣಿಬೆನ್ನೂರು: ಸರಗಳ್ಳತನ ಮಾಡಿದ್ದ ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನದ ಸರವನ್ನು ನ್ಯಾಯಾಲಯದ ಆದೇಶದಂತೆ ಪೊಲೀಸ್ ಅಧಿಕಾರಿಗಳು ದೂರುದಾರರಿಗೆ ಹಸ್ತಾಂತರ ಮಾಡಿದ್ದಾರೆ.ನಗರದಲ್ಲಿ ಏಪ್ರಿಲ್ ತಿಂಗಳಿನಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಸುಧಾಬಾಯಿ ಕುಲಕರ್ಣಿ ಎಂಬ ಮಹಿಳೆಯ ₹1.50 ಲಕ್ಷ ಮೌಲ್ಯದ 20 ಗ್ರಾಂ ಚಿನ್ನದ ಸರವನ್ನು ಆರೋಪಿತರಾದ ಸಂತೋಷ ಶಿಂಧೆ ಹಾಗೂ ದ್ಯಾಮಣ್ಣ ನವಸಣ್ಣನವರ ಅಪಹರಿಸಿದ್ದರು. ಈ ಕುರಿತು ಸುಧಾಬಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದರು. ನಂತರ ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಪಿ ಯಶೋದಾ ವಂಟಗೋಡಿ ಮಾರ್ಗದರ್ಶನದಂತೆ ಹೆಚ್ಚುವರಿ ಎಸ್‌ಪಿ ಲಕ್ಷ್ಮಣ ಶಿರಕೋಳ, ಡಿಎಸ್‌ಪಿ ಲೋಕೇಶ, ಶಹರ ಸಿಪಿಐ ಡಾ.ಶಂಕರ್ ದೂರುದಾರರ ಮನೆಗೆ ತೆರಳಿ ಸುಧಾಬಾಯಿ ಕುಲಕರ್ಣಿ ಅವರಿಗೆ ಚಿನ್ನದ ಸರ ಹಸ್ತಾಂತರ ಮಾಡಿದ್ದಾರೆ. ಪೊಲೀಸ್ ಇಲಾಖೆ ಕಾರ್ಯಕ್ಕೆ ಸಾರ್ವಜನಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.