ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ರೈತ ಸಂಘ ಆಗ್ರಹ

| Published : Jun 18 2024, 12:50 AM IST

ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ರೈತ ಸಂಘ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಕಳೆದ 1996ರಿಂದ ಈವರೆಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ವ್ಯಾಪ್ತಿಗೆ ಒಳಪಟ್ಟು ಕೆಲಸ ನಿರ್ವಹಿಸುತ್ತಿದೆ.

ಹೂವಿನಹಡಗಲಿ: ತಾಲೂಕಿನ ಕೊಯಿಲಾಗಟ್ಟಿ ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡಿರುವ ಸರ್ವೆ ನಂಬರ್‌ 205-ಬಿ ಪಹಣಿಯಲ್ಲಿ 335.53 ಎಕರೆ ಸರ್ಕಾರದ ಜಮೀನಿನಲ್ಲಿ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಶಾಸಕರಿಗೆ ಹಾಗೂ ಸರ್ಕಾರಕ್ಕೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.ತಾಲೂಕಿನ ಕೊಯಿಲಾರಗಟ್ಟಿ ತಾಂಡಾದಲ್ಲಿ ಶಾಸಕ ಕೃಷ್ಣನಾಯ್ಕ ಅವರಿಗೆ ರೈತ ಸಂಘದ ಸದಸ್ಯರು ಮನವಿ ಸಲ್ಲಿಸಿದರು.

ಇಲ್ಲಿನ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರವು ಕಳೆದ 1996ರಿಂದ ಈವರೆಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ವ್ಯಾಪ್ತಿಗೆ ಒಳಪಟ್ಟು ಕೆಲಸ ನಿರ್ವಹಿಸುತ್ತಿದೆ. ಈ ಕೇಂದ್ರದಲ್ಲಿನ ವಿಜ್ಞಾನಿಗಳು ಈ ಭಾಗದ ರೈತ ಸಮೂಹಕ್ಕೆ ಕೃಷಿ ತಂತ್ರಜ್ಞಾನದ ಮಾಹಿತಿಯನ್ನು ತಲುಪಿಸುವಲ್ಲಿ ಕಾರ್ಯನಿರತರಾಗಿದ್ದಾರೆ. ಆದರೆ, ಸಂಶೋಧನೆ, ಬೀಜೋತ್ಪಾದನೆ, ಕೃಷಿ ಶಿಕ್ಷಣ ಹಾಗೂ ಕೃಷಿ ವಿಸ್ತರಣೆ ಹೆಚ್ಚಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ನೂತನ ಜಿಲ್ಲೆಯಾಗಿರುವ ವಿಜಯನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಆರು ತಾಲೂಕಿನ ರೈತ ಸಮೂಹಕ್ಕೆ ಇನ್ನು ಹೆಚ್ಚಿನ ಕೃಷಿ ಬೆಳೆಗಳ ಜೊತೆಗೆ ಸಮಗ್ರ ಕೃಷಿ ಪದ್ಧತಿ ಹಾಗೂ ವಿವಿಧ ವಾಣಿಜ್ಯ ಬೆಳೆಗಳಾದ ಕಬ್ಬು, ಹತ್ತಿ, ಮೆಣಸಿನಕಾಯಿ, ಗೋವಿನಜೋಳ, ಸೂರ್ಯಕಾಂತಿ, ತೊಗರಿ ಮತ್ತು ಭೌಗೋಳಿಕವಾಗಿ ಗುರುತಿಸಲ್ಪಟ್ಟ ಹಡಗಲಿ ಮಲ್ಲಿಗೆ ಹಾಗೂ ಇತರೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಬಗ್ಗೆ ಹೆಚ್ಚಿನ ಸಂಶೋಧನೆಯು ಅತೀ ಅವಶ್ಯಕ ಇರುವ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಈ ಭಾಗದ ರೈತರು ನೂತನ ಕೃಷಿ ಬೆಳೆಗಳ ಬೀಜ ಹಾಗೂ ತಂತ್ರಜ್ಞಾನದ ಮಾಹಿತಿಗಾಗಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಹಾಗೂ ಇತರೆ ಸಂಶೋಧನಾ ಕೇಂದ್ರಗಳು 200 ರಿಂದ 300 ಕಿ.ಮೀ. ದೂರವಿರುವಿರುವುದರಿಂದ ಈ ಭಾಗದ ರೈತ ಸಮೂಹಕ್ಕೆ ಅಖಿಲ ಭಾರತ ನೀರಾವರಿ ಅಭಿವೃದ್ಧಿ ಯೋಜನೆಯಡಿ ತಾಲೂಕಿನ ಕೊಯಿಲಾರಗಟ್ಟಿ ಗ್ರಾಮದಲ್ಲಿ ನೀರಾವರಿ ಕೃಷಿ ಬೆಳೆಗಳಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು, ಈಗಾಗಲೇ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವೂ ನಿರ್ಧರಿಸಿದ್ದು ಸಮಿತಿ ರಚಿಸಿ, ವರದಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. 2015ರಿಂದ ಇಲ್ಲಿಯವರೆಗೆ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗಾಗಿ ರೈತ ಸಂಘಟನೆಗಳು ಹೋರಾಟ ಹಾಗೂ ಪ್ರತಿಭಟನೆ ಸೇರಿದಂತೆ ಎಲ್ಲರಿಗೂ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು.

ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಯಾಗುವ ಸ್ಥಳದಿಂದ ತುಂಗಭದ್ರ ನದಿ ಕೇವಲ 1 ಕಿ.ಮೀ ಅಂತರದಲ್ಲಿದೆ. ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕೊಯಿಲಾರಗಟ್ಟಿ ಗ್ರಾಮದಲ್ಲಿ ಬರುವ ಸರ್ಕಾರದ ಜಮೀನನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿಗೆ ವರ್ಗಾಯಿಸಿ, ಕೂಡಲೇ ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆ ಮಾಡಬೇಕೆಂದು ಮನವಿಯಲ್ಲಿ ರೈತ ಸಂಘ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಶಿವರಾಜ, ಎಚ್‌.ದುರುಗಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಗಂಗಾಧರ, ಶಿವನಗೌಡ, ದೇವಪ್ಪ ಸೇರಿದಂತೆ ಇತರರು ಶಾಸಕ ಕೃಷ್ಣನಾಯ್ಕ ಅವರಿಗೆ ಮನವಿ ಸಲ್ಲಿಸಿದ್ದಾರೆ.