ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಗೃಹ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್‍ಗೆ ವಿಧಿಸುವ ಕನಿಷ್ಠ ಚಾರ್ಜ್‍ನ್ನು ಸಂಪೂರ್ಣವಾಗಿ ರದ್ದುಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ರೈತ ಸಂಘಗಳ ಸಮನ್ವಯ ಮತ್ತು ಅನುಷ್ಠಾನ ಸಮಿತಿ ವತಿಯಿಂದ ಒನಕೆ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಎಪಿಎಂಸಿ ಯಿಂದ ಮೆರವಣಿಗೆ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿದ ನೂರಾರು ರೈತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಧಿಕ್ಕಾರಗಳನ್ನು ಕೂಗಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ನೆರೆಯ ರಾಜ್ಯಗಳಾದ ಕೇರಳ ಮತ್ತು ಆಂಧ್ರಗಳಲ್ಲಿ ಕೇವಲ 900 ರು.ಗಳಿಗೆ ಸ್ಮಾರ್ಟ್ ಮೀಟರ್ ಸಿಗುತ್ತದೆ. ಅದೆ ನಮ್ಮ ರಾಜ್ಯದಲ್ಲಿ 10 ಸಾವಿರ ರು. ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟಿರುವುದು ಯಾವ ಪುರುಷಾರ್ಥಕ್ಕಾಗಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಜನರ ತೆರಿಗೆ ಹಣದಲ್ಲಿ ದುಬಾರಿ ಸ್ಮಾರ್ಟ್ ಮೀಟರ್ ಖರೀಧಿಸುವ ಅವಶ್ಯಕತೆಯೇನಿತ್ತು ಎಂದು ಪ್ರಶ್ನಿಸಿದರು?2003 ರಿಂದ ಇಲ್ಲಿಯವರೆಗೂ ಆಳಿದ ಎಲ್ಲಾ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೆ ಬರುತ್ತಿವೆ. ತುಮಕೂರು, ಚಿಕ್ಕಮಗಳೂರು, ಬಳ್ಳಾರಿ, ದಾವಣಗೆರೆ, ಹಾಸನ ಜಿಲ್ಲೆಗಳು ಅಭಿವೃದ್ಧಿಯಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಚಿತ್ರದುರ್ಗ ಜಿಲ್ಲೆ ಇನ್ನು ಬರಗಾಲದಿಂದ ಹೊರಬರಲು ಆಗಿಲ್ಲ. ಸುಸ್ಥಿತಿಯಲ್ಲಿರುವ ಮೀಟರ್‌ಗಳನ್ನು ಬಳಸಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಿ ರೈತರನ್ನು ಆರ್ಥಿಕವಾಗಿ ದಿವಾಳಿಯನ್ನಾಗಿಸುವ ಕುತಂತ್ರ ನಡೆಸುತ್ತಿದೆ. ನಿಮ್ಮ ನಿಮ್ಮ ಹಳ್ಳಿಗಳಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಲು ಬಿಡಬೇಡಿ. ಒಂದೊಮ್ಮೆ ಹಾಕಿದ್ದರೆ ಕಿತ್ತು ತನ್ನಿ. ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಹಿಂದಿರುಗಿಸೋಣ ಎಂದು ರೈತರನ್ನು ಜಾಗೃತಿಗೊಳಿಸಿದರು.
ರೈತ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, 45 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಪ್ರಕೃತಿ ವಿಕೋಪವಾದರೂ ಕೃಷಿಯನ್ನು ನಿಲ್ಲಿಸಿಲ್ಲ. ದೇಶಕ್ಕೆ ಅನ್ನ ನೀಡುತ್ತಿರುವ ರೈತರ ಜಮೀನುಗಳನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ನೀಡಲು ಹೊರಟಿರುವ ರಾಜ್ಯ ಸರ್ಕಾರ ಅವೈಜ್ಞಾನಿಕ ಕಾನೂನುಗಳನ್ನು ಜಾರಿಗೆ ತರುತ್ತಿದೆ. ನೀರು, ವಿದ್ಯುತ್, ಬೆಂಬಲ ಬೆಲೆ ಕೇಳುತ್ತಿದ್ದೇವೆ. ಸ್ವಾಮಿನಾಥನ್ ವರದಿ ಜಾರಿಯಾಗುವತನಕ ಹೊಸ ಕಾಯಿದೆಗಳನ್ನು ಜಾರಿಗೆ ತರಬಾರದು. ಇಂಧನ ಹೊಂದಾಣಿಕೆ ಶುಲ್ಕವೆಂದು ಪ್ರತಿ ಯೂನಿಟ್‍ಗೆ 36 ಪೈಸೆ ವಿಧಿಸುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.ರೈತ ಸಂಘದ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿ ರೈತರ ತಲೆ ಮೇಲೆ ಕಲ್ಲು ಹಾಕಿದೆ. ಸ್ಮಾರ್ಟ್ ಮೀಟರ್ ಅಳವಡಿಕೆಯಿಂದ ರೈತರ ಬದುಕು ನಾಶವಾಗುತ್ತಿದೆ. ಯಾವುದೇ ಕಾರಣಕ್ಕೂ ಸ್ಮಾರ್ಟ್ ಮೀಟರ್ ಅಳವಡಿಸಲು ಬಿಡಲ್ಲ. ಹಠ ಬಿಡದೆ ಹಾಕಿದರೆ ಸುಟ್ಟು ಹಾಕುತ್ತೇವೆಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ಒಂದು ಸ್ಮಾರ್ಟ್ ಮೀಟರ್‌ಗೆ 10 ಸಾವಿರ ರು. ನೀಡಿ ರಾಜ್ಯ ಸರ್ಕಾರ ಖರೀಧಿಸಲು ಹೊರಟಿದೆ. ದೊಡ್ಡ ಮಟ್ಟದಲ್ಲಿ ಲೂಟಿ ಹೊಡೆಯುವ ಹುನ್ನಾರವಿದು. ಕೂಡಲೆ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು. ಸ್ಮಾರ್ಟ್ ಮೀಟರ್ ಅಳವಡಿಸಲು ಅವಕಾಶ ಕೊಡುವುದಿಲ್ಲ. ಮಿನಿಮಮ್ ಚಾರ್ಜ್ ನಿಲ್ಲಿಸದಿದ್ದಲ್ಲಿ ಅದಕ್ಕೆ ಅನುಗುಣವಾಗಿ ಮಿನಿಮಮ್ ಯೂನಿಟ್ ವಿದ್ಯುತ್‍ನ್ನು ಉಚಿತವಾಗಿ ಪೂರೈಸಬೇಕೆಂದು ಆಗ್ರಹಿಸಿದರು.ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಸರ್ಕಾರ ಸ್ಮಾರ್ಟ್ ಮೀಟರ್ ಅಳವಡಿಸಲು ಹೊರಟಿರುವುದನ್ನು ನಿಲ್ಲಿಸಬೇಕಾಗಿರುವುದರಿಂದ ಮೊದಲು ರೈತರು ಒಗ್ಗಟ್ಟಾಗಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ ಹಂಪಯ್ಯನ ಮಾಳಿಗೆ, ಎಸ್.ಕೆ.ಕುಮಾರಸ್ವಾಮಿ, ಮೇಟಿಕುರ್ಕೆ ತಿಪ್ಪೇಸ್ವಾಮಿ, ಬಿ.ಎಸ್.ರಂಗಸ್ವಾಮಿ, ಎಚ್.ಪ್ರಸನ್ನ, ಎಸ್.ಮಂಜುನಾಥ, ಕೆ.ರಾಜಪ್ಪ, ಎಸ್.ಗೋಪಾಲಪ್ಪ, ಜೆ.ತಿಮ್ಮಪ್ಪ, ಸಿದ್ದರಾಜು, ಆರ್.ಬಿ.ಲೋಕೇಶ್, ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷೆ ಶಾಂತಮ್ಮ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.