ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಗ್ರಾಮೀಣ ಭಾಗದ ಜನರು, ಜಾನುವಾರುಗಳು ಹಾಗೂ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಂಪ್ಲಿ: ಜನ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಿಂದ ಕೂಡಲೇ ನದಿಗೆ ನೀರು ಹರಿಸಬೇಕು ಎಂದು ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಸರ್ಕಾರವನ್ನು ಒತ್ತಾಯಿಸಿದರು.

ತಾಲೂಕಿನ ಇಟಗಿ ಗ್ರಾಮದ ಸಮೀಪ ತುಂಗಭದ್ರಾ ನದಿಯಲ್ಲಿ ಮಂಗಳವಾರ ರೈತರೊಂದಿಗೆ ಇಳಿದು ಪ್ರತಿಭಟಿಸಿದ ಅವರು, ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ಗ್ರಾಮೀಣ ಭಾಗದ ಜನರು, ಜಾನುವಾರುಗಳು ಹಾಗೂ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ನದಿ ತಳ ಸಂಪೂರ್ಣ ಒಣಗಿದ್ದು, ನೀರಿಗಾಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ ಸುಮಾರು 27 ಟಿಎಂಸಿ ನೀರು ಸಂಗ್ರಹವಿದ್ದರೂ ಆ ನೀರನ್ನು ಪಾವಗಡ, ರಾಯಚೂರು ಸೇರಿದಂತೆ ಇತರ ಪ್ರದೇಶಗಳ ಕಾಲುವೆಗಳಿಗೆ ಹರಿಸಲಾಗುತ್ತಿದೆ. ಆದರೆ ಜಲಾಶಯ ವ್ಯಾಪ್ತಿಯಲ್ಲೇ ಇರುವ ಕಂಪ್ಲಿ ಭಾಗದ ರೈತರು ಮತ್ತು ಸಾರ್ವಜನಿಕರಿಗೆ ನೀರು ದೊರೆಯದಿರುವುದು ವಿಪರ್ಯಾಸವಾಗಿದೆ. ಜಲ ಸಂಪನ್ಮೂಲ ಇಲಾಖೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆಯಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.ನದಿಯಲ್ಲಿ ನೀರಿನ ಹರಿವು ಇಲ್ಲದ ಕಾರಣ ಉಳಿದಿರುವ ಅಲ್ಪ ಪ್ರಮಾಣದ ಕಲುಷಿತ ನೀರನ್ನು ಬಳಸಬೇಕಾದ ಪರಿಸ್ಥಿತಿ ಉಂಟಾಗಿದೆ. ಇದರಿಂದ ಸಾರ್ವಜನಿಕರಲ್ಲಿ ಚರ್ಮ ಸಂಬಂಧಿ ತುರಿಕೆ ಸೇರಿದಂತೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ನದಿ ನೀರಿನ ಗುಣಮಟ್ಟವೂ ಹದಗೆಟ್ಟಿದ್ದು, ಪರಿಸರದ ಮೇಲೂ ದುಷ್ಪರಿಣಾಮ ಉಂಟಾಗಿದೆ. ನದಿಯಲ್ಲಿ ನೀರಿನ ಹರಿವು ಸ್ಥಗಿತಗೊಂಡ ಪರಿಣಾಮ ಸಾವಿರಾರು ಮೀನುಗಳು ಹಾಗೂ ಇತರ ಜಲಚರಗಳು ಸಾವನ್ನಪ್ಪುತ್ತಿವೆ. ಮೀನುಗಾರರು ಜೀವನೋಪಾಯ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರಿಸರ ಸಮತೋಲನವೂ ಹದಗೆಡುತ್ತಿದ್ದು, ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಆಗ್ರಹಿಸಿದರು.

ಈಗಾಗಲೇ ರೈತರು ಭತ್ತದ ಸಸಿ ನಾಟಿ ಮಾಡಿದ್ದು, ಮಳೆಯ ಕೊರತೆ ಹಾಗೂ ನದಿಯಲ್ಲಿ ನೀರಿನ ಅಭಾವದಿಂದ ಬೆಳೆ ಒಣಗುವ ಪರಿಸ್ಥಿತಿ ಎದುರಾಗಿದೆ. ಅಂತರ್ಜಲ ಮಟ್ಟವೂ ಕುಸಿದಿರುವುದರಿಂದ ಬೋರ್‌ವೆಲ್‌ಗಳು ಸಮರ್ಪಕವಾಗಿ ನೀರು ನೀಡುತ್ತಿಲ್ಲ. ಇದರಿಂದ ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರೈತರ ಶ್ರಮ ಮತ್ತು ಹೂಡಿಕೆ ಸಂಪೂರ್ಣ ನಷ್ಟವಾಗುವ ಮುನ್ನ ಸರ್ಕಾರ ತುರ್ತು ಕ್ರಮ ಕೈಗೊಂಡು ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.

ಕುಡಿಯುವ ನೀರು, ಜಾನುವಾರುಗಳ ಅಗತ್ಯ ಹಾಗೂ ಕೃಷಿ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣ ನೀರು ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಜುಲೈ 18ರಂದು ಕಂಪ್ಲಿಯಲ್ಲಿ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ರೈತರಾದ ಇಟಗಿ ಶರಣೇಗೌಡ, ಕೊಟ್ಟೂರು ರಮೇಶ್, ವೆಂಕಟರಾಮರಾಜು, ವೈ.ರಮಣಯ್ಯ, ನಾಗರಾಜ, ಕೃಷ್ಣಂರಾಜು, ಟಿ. ಜಡೆಪ್ಪ, ಗೋನಾಳ್ ನಾಗರಾಜ ರಾಮು, ಪ್ರಸಾದಗೌಡ, ಕುರುಬರ ಮುತ್ತುರಾಜ, ಪೂಜಾರ ರಾಮಣ್ಣ, ಟಿ. ಗಂಗಾಧರ, ಅಚ್ಯುತ, ಎಸ್. ಸಣ್ಣ ಮುದಿಯಪ್ಪ, ವಿ. ನಾರಾಯಣಾಚಾರ್, ಕೆ. ಜಕ್ಕಪ್ಪ, ಶ್ರೀನಿವಾಸ್, ಇಟಗಿ ಎಚ್. ನರಸಪ್ಪ, ಮಣ್ಣೂರು ಯಲ್ಲಪ್ಪ, ಸೂಗೂರು ಮುದಿಯಪ್ಪ, ಎಂ. ವೆಂಕಟೇಶ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.