ಸಾರಾಂಶ
ಫಸಲ ಬೀಮಾ ಯೋಜನೆಯಡಿ ರೈತರು ಬೆಳೆ ವಿಮೆ ಕಟ್ಟಿ 8 ತಿಂಗಳಾದರೂ ವಿಮೆ ಹಣ ಇಲ್ಲಿಯವರೆಗೆ ನೀಡಿರುವುದಿಲ್ಲ. ಕೂಡಲೇ ರೈತರ ಬೆಳೆ ವಿಮೆ ಜಮೆ ಮಾಡಬೇಕು ಎಂದು ಆಗ್ರಹ
ಕನ್ನಡಪ್ರಭ ವಾರ್ತೆ ಬೀದರ್
ಜಿಲ್ಲೆಯಲ್ಲಿ 11000ಕ್ಕಿಂತ ಹೆಚ್ಚು ರೈತರಿಗೆ ಇನ್ನೂ ಬರ ಪರಿಹಾರ ಹಣ ಬಂದಿಲ್ಲ ಇದು ವಿಷಾಧಕರ ಸಂಗತಿಯಾಗಿದೆ ಎಂದು ರೈತ ಸಂಘ ತಿಳಿಸಿದೆ.ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ಪ್ರಧಾನ ಮಂತ್ರಿ ಫಸಲ ಬೀಮಾ ಯೋಜನೆಯಡಿ ರೈತರು ಬೆಳೆ ವಿಮೆ ಕಟ್ಟಿ 8 ತಿಂಗಳಾದರೂ ವಿಮೆ ಹಣ ಇಲ್ಲಿಯವರೆಗೆ ನೀಡಿರುವುದಿಲ್ಲ. ಕೂಡಲೇ ರೈತರ ಬೆಳೆ ವಿಮೆ ಜಮೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಎಲ್ಲಾ ರೈತರು ಬೆಳೆದ ಕಬ್ಬುಗಳನ್ನು ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಿ 6 ತಿಂಗಳು ಗತಿಸಿದರೂ ರೈತರ ಕಬ್ಬಿನ ಹಣ ನೀಡಿರುವುದಿಲ್ಲ. ಕೂಡಲೇ ರೈತರು ಕಬ್ಬು ಸರಬರಾಜು ಮಾಡಿದ ಹಣವನ್ನು ರೈತರ ಖಾತೆಗೆ ಜಮೆ ಮಾಡಬೇಕು. ಜಿಲ್ಲೆಯ ರೈತರಿಗೆ ಸರ್ಕಾರದಿಂದ ಇಡೀ ಜಿಲ್ಲೆಗೆ ಬರಗಾಲ ಎಂದು ಘೋಷಣೆ ಮಾಡಿದರೂ ಕೂಡ ಜಿಲ್ಲೆಯ ರೈತರಿಗೆ ಎಲ್ಲಾ ಬ್ಯಾಂಕಿನವರು ವಸೂಲಿ ಜೋರು ಮಾಡಿ, ರೈತರಿಗೆ ಕಿರುಕುಳ ನೀಡುತ್ತಿದ್ದು, ಇಂತಹ ಬರಗಾಲದ ಸಮಯದಲ್ಲಿ ಬ್ಯಾಂಕಿನ ಸಾಲ ಮರುಪಾವತಿ ಮಾಡಲು ಪದೇ ಪದೇ ನೋಟಿಸ್ ಕೊಡುತ್ತಿದ್ದು, ತಕ್ಷಣವಾಗಿ ಈ ಪ್ರಕ್ರಿಯೆ ನಿಲ್ಲಿಸಿ, ರೈತರಿಗೆ ಅನುಕೂಲ ಮಾಡಿಕೊಡಬೇಕು.ರೈತರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ, ರೈತರ ಹಿತ ಕಾಪಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಿದ್ರಾಮಪ್ಪಾ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ನಾಗಯ್ಯ ಹಿರೇಮಠ, ಪ್ರವೀಣ ಕುಲಕರ್ಣಿ, ಚಂದ್ರಶೇಖರ ಜಮಖಂಡಿ, ಸತೀಶ ನನ್ನೂರೆ, ಪ್ರಕಾಶ ಬಾವಗೆ, ವಿಶ್ವನಾಥ ಧರಣೆ, ಸುಭಾಷ ರಗಟೆ, ಶಿವಕಾಂತ ಹಡದೆ, ರಾಜಕುಮಾರ ಪಾಟೀಲ, ವೆಂಕಟರಾವ ವಲ್ಲಪೆ, ಶಿವರಾಜ ಡೊಂಗರಗಾ, ಬಸಪ್ಪ ಮರಖಲ್, ಬಸವಂತ ಡೊಂಗರಗಾ ಇದ್ದರು.