ಸರ್ವೆ ನಂ. 55 ರಲ್ಲಿರುವ ‘ಮಂಜುನಾಥ ಸ್ಟೋನ್ ಕ್ರಷರ್’ ಪರವಾನಗಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದೆ. ತಿಪಟೂರು ಉಪವಿಭಾಗಾಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ 7 ಎಕರೆ 10 ಗುಂಟೆ ಸರ್ಕಾರಿ ಭೂಮಿ ಕ್ರಷರ್ ನವರು ಒತ್ತುವರಿ ಮಾಡಿರುವುದನ್ನು ಖಚಿತಪಡಿಸಿ ಆದೇಶ ನೀಡಿದ್ದರೂ, ಅಧಿಕಾರಿಗಳು ಈವರೆಗೆ ತೆರವು ಕಾರ್ಯಾಚರಣೆಗೆ ಮುಂದಾಗಿಲ್ಲ. ಕನಿಷ್ಠ ಭೂ ಪರಿವರ್ತನೆಯನ್ನೂ ಮಾಡಿಕೊಳ್ಳದೆ ಹಗಲಿರುಳು ನಡೆಸುತ್ತಿರುವ ಬ್ಲಾಸ್ಟಿಂಗ್ನಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರ ಬದುಕು ದುಸ್ತರವಾಗಿದೆ .
ಕನ್ನಡಪ್ರಭವಾರ್ತೆ, ತುರುವೇಕೆರೆ
ತಾಲೂಕಿನ ಕೋಳಘಟ್ಟ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಕ್ಷಣ ಸ್ಥಗಿತಗೊಳಿಸಬೇಕು. ಬಡ ಕಾರ್ಮಿಕನ ಮೇಲೆ ಅಮಾನವೀಯ ಹಲ್ಲೆ ನಡೆಸಿದ ಕ್ರಷರ್ ಮಾಲೀಕನ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಹಾಗೂ ಅಕ್ರಮದಲ್ಲಿ ಶಾಮೀಲಾಗಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ತಾಲೂಕು ಕಚೇರಿ ಎದುರು ಬೃಹತ್ ಧರಣಿ ನಡೆಸಲಾಯಿತು.ರೈತ ಸಂಘದ ತಾಲೂಕು ಅಧ್ಯಕ್ಷ ಕಣಕೂರು ಚಂದ್ರಶೇಖರ್ ಮಾತನಾಡಿ, ಸರ್ವೆ ನಂ. 55 ರಲ್ಲಿರುವ ‘ಮಂಜುನಾಥ ಸ್ಟೋನ್ ಕ್ರಷರ್’ ಪರವಾನಗಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಿದೆ. ತಿಪಟೂರು ಉಪವಿಭಾಗಾಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ 7 ಎಕರೆ 10 ಗುಂಟೆ ಸರ್ಕಾರಿ ಭೂಮಿ ಕ್ರಷರ್ ನವರು ಒತ್ತುವರಿ ಮಾಡಿರುವುದನ್ನು ಖಚಿತಪಡಿಸಿ ಆದೇಶ ನೀಡಿದ್ದರೂ, ಅಧಿಕಾರಿಗಳು ಈವರೆಗೆ ತೆರವು ಕಾರ್ಯಾಚರಣೆಗೆ ಮುಂದಾಗಿಲ್ಲ. ಕನಿಷ್ಠ ಭೂ ಪರಿವರ್ತನೆಯನ್ನೂ ಮಾಡಿಕೊಳ್ಳದೆ ಹಗಲಿರುಳು ನಡೆಸುತ್ತಿರುವ ಬ್ಲಾಸ್ಟಿಂಗ್ನಿಂದಾಗಿ ಸುತ್ತಮುತ್ತಲಿನ ಹಳ್ಳಿಗಳ ಜನರ ಬದುಕು ದುಸ್ತರವಾಗಿದೆ ಎಂದು ಹೇಳಿದರು.
ಇದೇ ಕ್ರಷರ್ನಲ್ಲಿ ಕೆಲಸ ಮಾಡುತ್ತಿದ್ದ ಹೊಸದುರ್ಗ ಮೂಲದ ಯುವ ಕಾರ್ಮಿಕ ಅಭಿಷೇಕ್ ಎಂಬಾತನನ್ನು ಅರೆಬೆತ್ತಲೆಗೊಳಿಸಿ ಮಾಲೀಕ ರಾಜೇಗೌಡ ಥಳಿಸಿರುವ ದೃಶ್ಯಗಳು ನಾಗರಿಕ ಸಮಾಜ ತಲೆತಗ್ಗಿಸುವಂತಿವೆ. ಆರೋಪಿ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡ ಮಾವಿನಹಳ್ಳಿ ರೇಣುಕಪ್ಪ ಮಾತನಾಡಿ, ಟಾಸ್ಕ್ ಫೋರ್ಸ್ ನಿಯಮಗಳ ಪ್ರಕಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಗಣಿಗಾರಿಕೆಗೆ ಅವಕಾಶವಿದೆ. ಆದರೆ ಇಲ್ಲಿ ನಿಯಮ ಗಾಳಿಗೆ ತೂರಿ ರಾತ್ರಿಯಿಡೀ ಬ್ಲಾಸ್ಟಿಂಗ್ ಮತ್ತು ಲಾರಿಗಳ ಸಂಚಾರ ನಡೆಸಲಾಗುತ್ತಿದೆ. ಈ ಅಕ್ರಮವನ್ನು ಪ್ರಶ್ನಿಸಿದ ಸ್ಥಳೀಯ ರೈತರ ಧ್ವನಿ ಅಡಗಿಸಲು, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಕುಮ್ಮಕ್ಕಿನಿಂದ ಮುಗ್ಧ ರೈತರ ಮೇಲೆ 11 ಕ್ಕೂ ಹೆಚ್ಚು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಹುಲ್ಲೇಕೆರೆ ವಿನೋದ್, ದೇವಿಹಳ್ಳಿ ಸುರೇಶ್, ಗೋಣಿ ತುಮಕೂರು ಗಂಗಾಧರ್ ಗೌಡ, ಅಶ್ವಥ್, ರಂಗಪ್ಪ, ಸುಧಾ, ಕುಮಾರ್, ವಿ.ಎಂ. ವರಹಾಸಂದ್ರ ಅಶೋಕ್ ಕುಮಾರ್, ದೊಡ್ಡಬೀರನಕೆರೆ ಡಿ.ಎಸ್. ಗಂಗಾಧರ್, ಲಕ್ಷ್ಮೀದೇವರಹಳ್ಳಿ ರವಿ, ಸಂತೋಷ್, ಪವನ್, ಮದನ್, ಹಬಕನಹಳ್ಳಿ ಮೋಹನ್ ಕುಮಾರ್, ಶಿವಸ್ವಾಮಿ, ವಾಣಿ ಶಿವಕುಮಾರ್, ಹುಲ್ಲೇಕೆರೆ ಉಮೇಶ್, ದಬ್ಬೇಘಟ್ಟ ರುಕ್ಮಿಣಿ, ಕಡೆಹಳ್ಳಿ ಬೋರೇಗೌಡ, ಮಹೇಶ್, ಅಶೋಕ್, ಷಡಕ್ಷರಿ, ರಾಜು, ಕೋಳಗಟ್ಟ ಸಿದ್ದು, ಆಲದಹಳ್ಳಿ ಸುಧಾಕರ್, ಗುರುವಿನ ಮಠ ಕಮಲ, ಕಣಕೂರು ರಾಮು, ಕಾಮನಹಳ್ಳಿ ರಂಗರಾಮು ಪಾಲ್ಗೊಂಡಿದ್ದರು.