ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಜಿಲ್ಲೆಯ ವಡಗೇರಾ ತಾಲೂಕಿನ ಕ್ಯಾತನಾಳ ಗ್ರಾಮದ ಅನಾಥಳಾದ ಬಾಲಕಿ ಸಿದ್ದಮ್ಮಳಿಗೆ ರೈತ ಸಂಘ ಹಾಗೂ ಶಿಕ್ಷಣ ಇಲಾಖೆಯನೆರವು ನೀಡಿದ್ದು, ಈ ಹಿನ್ನೆಲೆ ವಡಗೇರಾ ಪಟ್ಟಣದಲ್ಲಿರುವ ಕಸ್ತೂರ್ ಬಾ ಗಾಂಧಿ ಬಾಲಕಿಯರ ವಸತಿ ಶಾಲೆಗೆ ಸೇರ್ಪಡೆ ಮಾಡಲಾಯಿತು.ಬಾಲಕಿ ಶಿಕ್ಷಣಕ್ಕೆ ಸಂಬಂಧಿಸಿದ ಪಠ್ಯಪುಸ್ತಕ, ಶಾಲಾ ಬ್ಯಾಗ್, ಬಟ್ಟೆ, ಹೊದಿಕೆ ಹಾಗೂ ಇನ್ನಿತರ ಸಲಕರಣೆ ನೀಡಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಹಗರಟಗಿ ಮಾತನಾಡಿ, ನಮ್ಮ ರೈತ ಸಂಘಟನೆಯು ರೈತರ ಸಮಸ್ಯೆಗಳಿಗೆ ಸ್ಪಂದಿಸುವುದಲ್ಲದೆ, ಇನ್ನಿತರ ಸಮಾಜಮುಖಿ ಕೆಲಸಗಳಲ್ಲಿ ಕೂಡ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಬಾಲಕಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಹೇಳಿದರು.ತಂದೆ-ತಾಯಿ ಕಳೆದುಕೊಂಡ ಅನಾಥ ಬಾಲಕಿ ಸಿದ್ದಮ್ಮ ಬಗ್ಗೆ ಮಾಹಿತಿ ಬಂದಾಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಿದ್ದೇವು. ನಮ್ಮ ಮನವಿಗೆ ಸ್ಪಂದಿಸಿ ಅವರು ವಿದ್ಯಾರ್ಥಿನಿಯನ್ನು ವಡಗೇರಾ ಕಸ್ತೂರ್ ಬಾ ಶಾಲೆಗೆ ಸೇರಿಸಲು ಅನುಕೂಲ ಮಾಡಿಕೊಟ್ಟಿರುವುದರಿಂದ ಶಿಕ್ಷಣ ಇಲಾಖೆ ಅಧಿಕಾರಿಗಳಿಗೂ ಮತ್ತು ಶಾಲೆ ಮುಖ್ಯ ಶಿಕ್ಷಕರಿಗೂ ಧನ್ಯವಾದಗಳು ಅರ್ಪಿಸಿದರು.
ಮುಖ್ಯ ಶಿಕ್ಷಕಿ ಲಲಿತಾಬಾಯಿ ಅವರು ಅನಾಥ ಬಾಲಕಿಯನ್ನು ಶಾಲೆಗೆ ಸೇರಿಸಿಕೊಂಡು ಬಳಿಕ ಮಾತನಾಡಿ, ಸರ್ಕಾರವು ಇಂತಹ ಮಕ್ಕಳಿಗಾಗಿ ಈ ಶಾಲೆಗಳನ್ನು ತೆರೆದಿದ್ದು, ಈ ಮಗುವಿನ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ನನ್ನ ಸ್ವಂತ ಮಗಳಂತೆ ಯಾವುದೆ ಕುಂದುಕೊರತೆ ಬಾರದ ಹಾಗೆ ಈ ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.ರೈತ ಸಂಘದ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಕುರಕುಂದ ಸಿ.ಆರ್.ಪಿ. ಮಲಿಕೆಪ್ಪ ನಾಶಿ, ಕ್ಯಾತನಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶರಣಪ್ಪ ಬಾಗಲಿ, ರೈತ ಸಂಘದ ಮುಖಂಡರಾದ ನೂರ್ ಅಹ್ಮದ್, ಗುರುನಾಥ್ ರೆಡ್ಡಿ ಹದನೂರು, ಶಿವಶರಣಪ್ಪ ಸಾಹುಕಾರ, ವೆಂಕುಬ ಕಟ್ಟಿಮನಿ, ವಿದ್ಯಾಧರ್ ಜಾಕಾ, ಮಹಿಪಾಲ್ ರೆಡ್ಡಿ, ಶರಣು ಜಡಿ, ಹಳ್ಳೆಪ್ಪ ತೇಜೇರ, ಶಿವು ಗೋನಾಲ್, ಮಹ್ಮದ್ ಗ್ಯಾರೇಜ, ನಿಂಗು ಕುರ್ಕಳ್ಳಿ, ಕೃಷ್ಣಾ ಟೇಲರ್, ನಾಗರಾಜ್ ಸ್ವಾಮಿ ಹೀರೇಮಠ, ಶರೀಫ್ ಕುರಿ, ಬೀರಪ್ಪ ಜಡಿ ಇತರರಿದ್ದರು.