ಭೀಕರ ಬರಗಾಲದ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ನೀತಿ ಖಂಡಿಸಿ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಪಟ್ಟಣದ ಎಪಿಎಂಸಿಯಿಂದ ತಾಲೂಕು ಕಚೇರಿ ವರೆಗೆ ಬೈಕ್ ರ‍್ಯಾಲಿ, ಎತ್ತಿನ ಬಂಡಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ, ತಹಸೀಲ್ದಾರ್‌ಗೆ ಮನವಿ
ಕನ್ನಡಪ್ರಭ ವಾರ್ತೆ ಸಂಡೂರು
ಭೀಕರ ಬರಗಾಲದ ಸಂಕಷ್ಟಕ್ಕೆ ಸ್ಪಂದಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ನೀತಿ ಖಂಡಿಸಿ ರಾಜ್ಯ ರೈತ ಸಂಘದ ಮುಖಂಡರು ಸೋಮವಾರ ಪಟ್ಟಣದ ಎಪಿಎಂಸಿಯಿಂದ ತಾಲೂಕು ಕಚೇರಿ ವರೆಗೆ ಬೈಕ್ ರ‍್ಯಾಲಿ, ಎತ್ತಿನ ಬಂಡಿ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು.ಆನಂತರ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಜಿ. ಅನಿಲ್‌ಕುಮಾರ್ ಮೂಲಕ ಪ್ರಧಾನಮಂತ್ರಿ ಅವರಿಗೆ ರವಾನಿಸಿದರು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎಂ.ಎಲ್.ಕೆ. ನಾಯ್ಡು, ರಾಜ್ಯದಲ್ಲಿ ಕಳೆದ ೧೪೦ ವರ್ಷದ ನಂತರ ಭೀಕರ ಬರಗಾಲ ಪರಿಸ್ಥಿತಿ ಉದ್ಭವಿಸಿದೆ. ಕೆರೆಕಟ್ಟೆ, ಜಲಮೂಲಗಳು ಬತ್ತಿ ಹೋಗಿವೆ. ರೈತರು ಬೆಳೆದಿದ್ದ ಬೆಳೆ ಸಂಪೂರ್ಣ ನಷ್ಟವಾಗಿದೆ. ಅಂತರ್ಜಲ ಬತ್ತಿಹೋಗಿ ತೋಟಗಾರಿಕೆ ಬೆಳೆಗಳು ಒಣಗಿ ಹೋಗಿವೆ. ಇಷ್ಟೆಲ್ಲ ಸಂಕಷ್ಟಗಳು ಎದುರಾಗಿದ್ದರೂ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯ ತೋರಿ ಅಮಾನವೀಯವಾಗಿ ನಡೆದುಕೊಳ್ಳುತ್ತಿವೆ ಎಂದು ದೂರಿದರು.ಬೇಡಿಕೆಗಳು:
ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ. ೫೦ರ ಅನುಪಾತದಲ್ಲಿ ಸಾಲ ಮನ್ನಾ ಮಾಡಬೇಕು. ಬ್ಯಾಂಕ್‌ಗಳು ಸಾಲ ವಸೂಲಿ ಮಾಡುವುದಕ್ಕೆ ತಡೆಯೊಡ್ಡಬೇಕು. ಕೃಷಿಗೆ ಪ್ರಥಮ ಆದ್ಯತೆ ನೀಡಿ, ಸರ್ಕಾರ ಒಪ್ಪಿಕೊಂಡಿರುವಂತೆ ಕನಿಷ್ಠ ೭ ಗಂಟೆಗಳ ಕಾಲ ವಿದ್ಯುತ್ ಅನ್ನು ಕೃಷಿ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡಬೇಕು. ಜಿಲ್ಲೆಯ ಎಲ್ಲ ತಾಲೂಕಿನ ಕೆರೆ-ಕಟ್ಟೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸಬೇಕು ಹಾಗೂ ವೇದಾವತಿ ನದಿಗೆ ನೀರು ಬಿಡಬೇಕು. ಎಕರೆಗೆ ₹೨೫ ಸಾವಿರದಿಂದ ₹೩೦ ಸಾವಿರದ ವರೆಗೆ ಬರ ಪರಿಹಾರವನ್ನು ಕೂಡಲೆ ವಿತರಣೆ ಮಾಡಬೇಕು.ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು. ವಿಮಾ ಕಂಪನಿಗಳು ಸಂಪೂರ್ಣ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಬೇಕು. ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಕುಡಿಯುವ ನೀರಿಗೆ ಆದ್ಯತೆ ನೀಡಬೇಕು. ಜಾನುವಾರುಗಳಿಗೆ ಮೇವು ಪೂರೈಸಬೇಕು. ಜನರಿಗೆ ಹೆಚ್ಚಿನ ಪಡಿತರ ಒದಗಿಸಬೇಕು. ಮೈಸೂರು ದಸರಾವನ್ನು ಸರಳವಾಗಿ ಆಚರಿಸಬೇಕು. ಕಂಬಳ ಆಯೋಜನೆಯನ್ನು ನಿಲ್ಲಿಸಬೇಕು. ಶಾಶ್ವತವಾಗಿ ಬರ ತೊಲಗಿಸಲು ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಮೇಟಿ, ಕೃಷಿಕ ಸಮಾಜದ ಅಧ್ಯಕ್ಷ ಜಾಫರ್ ಸಾಹೇಬ್, ಮುಖಂಡರಾದ ಜಿ.ಕೆ. ನಾಗರಾಜ, ಕೆ.ಬಿ. ಮೌನೇಶ, ಕಾಡಪ್ಪ, ಷಣ್ಮುಖಪ್ಪ, ಅಲಿಬಾಷಾ, ಕೆ. ಮಲ್ಲಿಕಾರ್ಜುನ, ಸುಭಾನ್, ಕೆ. ಪ್ರವೀಣ್, ಜಿ. ಪರಮೇಶ್ವರಪ್ಪ, ಮಂಜುನಾಥ, ಚಂದ್ರು ಯಶವಂತನಗರ, ಶಿವುನಾಯ್ಕ, ಬಸವನಗೌಡ, ಎಚ್.ಎಂ. ಪಂಚಾಕ್ಷರಯ್ಯ, ಎಂ. ಶಿವಣ್ಣ, ಜನಾರ್ದನ, ಹೊನ್ನೂರಪ್ಪ, ಜಿ. ಷಣ್ಮುಖಗೌಡ್ರು, ಎಲ್. ಪೀರುನಾಯ್ಕ, ಬೊಮ್ಮಪ್ಪ ಮುಂತಾದವರು ಉಪಸ್ಥಿತರಿದ್ದರು.